Advertisement

ಪಡಿತರದಲ್ಲಿ ಜೋಳ-ರಾಗಿ ವಿತರಿಸಿ

12:21 PM Oct 10, 2017 | Team Udayavani |

ಬೀದರ: ಪಡಿತರ ವ್ಯವಸ್ಥೆಯಡಿ ಪೌಷ್ಟಿಕಾಂಶ ಇಲ್ಲದ ಅಕ್ಕಿ, ಗೋಧಿ ಬದಲು ಆಹಾರ ಸಂಸ್ಕೃತಿಯ ಅಂಗವಾಗಿರುವ ಜೋಳ, ರಾಗಿ ವಿತರಿಸಬೇಕು ಎಂದು ಡೆಕ್ಕನ್‌ ಡೆವಲಪ್‌ ಮೆಂಟ್‌ ಸಂಸ್ಥೆಯ ಮುಖ್ಯಸ್ಥ ಪಿ.ವಿ. ಸತೀಶ ಸಲಹೆ ನೀಡಿದರು.

Advertisement

ನಗರದ ಹೊರವಲಯದ ಪಶು ವಿವಿಯಲ್ಲಿ ಕರ್ನಾಟಕ ಕೃಷಿ ಆಯೋಗವು ಕರ್ನಾಟಕ ಆಹಾರ ಆಯೋಗ ಹಾಗೂ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಜೋಳ, ತೊಗರಿ ಆಧಾರಿತ ಕೃಷಿ, ಖರೀದಿ ಮತ್ತು ವಿತರಣೆ
ಸದೃಢಗೊಳಿಸುವ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಯಾವುದೋ ರಾಜ್ಯದಲ್ಲಿ ಬೆಳೆದ ಅಕ್ಕಿ-ಗೋಧಿಯನ್ನು ಪಡಿತರ ಮೂಲಕ ಯಾಕೆ ವಿತರಿಸಬೇಕು ಎಂದು ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಮುಖ್ಯ ಆಹಾರ ಜೋಳ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಬಳಕೆ ಅಧಿಕ. ಅಕ್ಕಿ ಗೋಧಿ ಯಾವ ಭಾಗದ ಮುಖ್ಯ ಆಹಾರವಾಗಿದೆ ಎಂದ ಅವರು, ಪಾರಂಪರಿಕ ಆಹಾರದ ಬದಲು ಬೇರೆ ಧಾನ್ಯಗಳನ್ನು ಪಡಿತರ ಮೂಲಕ ವಿತರಿಸುವುದು ಸರಿಯಲ್ಲ. ರಾಗಿ, ಜೋಳವನ್ನು ಸ್ಥಳೀಯವಾಗಿ ಖರೀದಿಸಿ ಪಡಿತರ ಮೂಲಕ ವಿತರಿಸಬೇಕು. ಇದರಿಂದ ಸಾಗಾಣಿಕೆ, ದಾಸ್ತಾನು ವೆಚ್ಚವೂ ಉಳಿಯುತ್ತದೆ. ಕೊರತೆ ಎನ್ನಿಸಿದಲ್ಲಿ ಈ ಬೆಳೆ ಬೆಳೆಯುವ ರೈತರಿಗೆ ವಿಶೇಷ ಸಹಾಯಧನ ನೀಡಬೇಕು ಎಂದು ಸಲಹೆ ನೀಡಿದರು.

ಬರೀ ಇಳುವರಿ ಅಧಿಕ ಬಂದರೆ ಸಾಕಾ, ಆಹಾರದಲ್ಲಿ ಪೌಷ್ಟಿಕತೆ ಇರಬಾರದಾ. ದೇಶದಲ್ಲಿ ಅಪೌಷ್ಟಿಕತೆ ಹೆಚ್ಚುತ್ತಿದ್ದು, ಪೌಷ್ಟಿಕತೆ ಇರುವ ಆಹಾರ ಧಾನ್ಯ ಬೆಳೆಯಲು ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂದು ಸಲಹೆ ನೀಡಿದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಪ್ರಕಾಶ ಕಮ್ಮರಡಿ ಮಾತನಾಡಿ, ಆರಂಭದಲ್ಲಿ ಪ್ರತಿ ಕಾರ್ಡ್‌ಗೆ 5 ಕಿಲೋದಂತೆ ರಾಗಿ ಕೊಟ್ಟು ನಂತರ ನಿಲ್ಲಿಸಲಾಯಿತು. ರಾಗಿ, ಜೋಳದ ಕ್ಷೇತ್ರ ಹೆಚ್ಚಬೇಕಾಗಿದೆ. ತೊಗರಿ ಸಮಸ್ಯೆ ಇಲ್ಲ. ಬೆಳೆದಷ್ಟೂ ರಾಗಿ, ಜೋಳ ಖರೀದಿಗೆ ಸರ್ಕಾರ ಸಿದ್ಧವಿದೆ. ಅಧಿಕ ಇಳುವರಿ ಕೊಡುವ ಹೊಸ ಹೊಸ ತಳಿಗಳನ್ನು ರೈತರು ಬೆಳೆಯಬೇಕು. ಇಳುವರಿ ಹೆಚ್ಚಿದರೆ ಬೆಲೆ ಸಮಸ್ಯೆ ಅಷ್ಟಾಗಿ ಕಾಡದು ಎಂದು ಅಭಿಪ್ರಾಯಪಟ್ಟರು.

Advertisement

ಆಹಾರ ಆಯೋಗದ ಅಧ್ಯಕ್ಷ ಡಾ| ಕೃಷ್ಣಮೂರ್ತಿ ಮಾತನಾಡಿ, ಆಯಾ ಪ್ರದೇಶದ ರೂಢಿಗತ ಆಹಾರ ನೀಡಬೇಕು ಎನ್ನುವುದು ಆಹಾರ ಭದ್ರತಾ ಕಾಯ್ದೆಯ ಆಶಯವಾಗಿದೆ. ಸಿರಿಧಾನ್ಯಗಳನ್ನು ಪಡಿತರ ಮೂಲಕ ವಿತರಿಸುವ ಕುರಿತು ಚರ್ಚೆ ನಡೆಯುತ್ತಲೇ ಇದೆ ಎಂದರು. 

ಸ್ಥಳೀಯವಾಗಿ ಬೆಳೆಯುವ ಆಹಾರಧಾನ್ಯಗಳನ್ನೇ ಪಡಿತರ ಮೂಲಕ ಖರೀದಿಸಿ ವಿತರಿಸಬೇಕೆಂಬ ಪಿ.ವಿ. ಸತೀಶ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಮಾತನಾಡಿದ ಆಯೋಗದ ಸದಸ್ಯ ವಿ.ಬಿ. ಪಾಟೀಲ, ಪಡಿತರ ಧಾನ್ಯಗಳನ್ನು ಸ್ಥಳೀಯವಾಗಿ ಖರೀದಿಸಿ ವಿತರಿಸುವ ಕಾರ್ಯ ಸಾಧ್ಯವೆ ಎಂದು ಪ್ರಶ್ನಿಸಿದರು. ಆಹಾರ ಧಾನ್ಯ ಕುರಿತ ವ್ಯಾಖ್ಯೆಯನ್ನು ಸರಿಯಾಗಿ ಅರ್ಥೈಸಬೇಕು. ಸಿರಿಧಾನ್ಯ ಸೇರಿಲ್ಲದಿದ್ದಲ್ಲಿ ಈ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕು ಎಂದು ಸಲಹೆ ನೀಡಿದರು.

ಉಪ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ಸ್ವಾಗತಿಸಿದರು. ಕೆವಿಕೆ ವಿಜ್ಞಾನಿ ಭವಾನಿ ನಿರೂಪಿಸಿದರು. ಕೃಷಿ ಬೆಲೆ ಆಯೋಗ, ಆಹಾರ ಆಯೋಗದ ಸದಸ್ಯರು, ಕೃಷಿ ವಿಜ್ಞಾನಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next