ಕೋಲ್ಕತ : ಇತಿಹಾಸವನ್ನು ತಿರುಚುವುದು ಮತ್ತು ಸೃಷ್ಟಿಸುವುದು ಭಯೋತ್ಪಾದನೆಯ ಇನ್ನೊಂದು ನಮೂನೆಯಾಗಿದೆ ಎಂದು ಭಾರತೀಯ ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷ ಕೆ ಎಂ ಶ್ರೀಮಾಲಿ ಹೇಳಿದ್ದಾರೆ.
ಅಂತೆಯೇ ಈ ಕುರಿತು ಯಾವುದೇ ತರ್ಕ ಮತ್ತು ಚರ್ಚೆ ನಡೆಯುವ ಅವಕಾಶವು ದೇಶದಲ್ಲೀಗ ತೀವ್ರವಾಗಿ ಕ್ಷೀಣಿಸಿದೆ ಎಂದವರು ವಿಷಾದಿಸಿದ್ದಾರೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹಿಂದಿನ ಏಕೈಕ ಅಜೆಂಡಾ ಎಂದರೆ ಇತಿಹಾಸದ ಪುನರ್ ಲೇಖನ ಮತ್ತು ಆ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣವೇ ಆಗಿದೆ; ಹಾಗಾಗಿ ದೇಶದಲ್ಲಿನ ಅಲ್ಪಸಂಖ್ಯಾಕರನ್ನು ಎರಡನೇ ದರ್ಜೆಯ ಪೌರರನ್ನಾಗಿ ಪರಿಗಣಿಸುವಂತಾಗಿದೆ ಎಂದವರು ಟೀಕಿಸಿದರು.
ಇತಿಹಾಸದ ಬಗ್ಗೆ ಯಾವುದೇ ತಿಳಿವಳಿಕೆ, ಜ್ಞಾನ ಇಲ್ಲದವರು ಕೂಡ ಇತಿಹಾಸವನ್ನು ಸೃಷ್ಟಿಸುವ ಮತ್ತು ತಮ್ಮ ಆಲೋಚನೆಗಳನ್ನು ಅದರಲ್ಲಿ ತುಂಬಿಸುವ ಯತ್ನ ಮಾಡುತ್ತಿದ್ದಾರೆ. ಇತಿಹಾಸ ಕುರಿತ ಯಾವುದೇ ಚರ್ಚೆ ಮತ್ತು ತರ್ಕಕ್ಕೆ ಇಷ್ಟೊಂದು ಕಡಿಮೆ ಅವಕಾಶ ಹಿಂದೆಂದೂ ಇರಲಿಲ್ಲ. ಇತಿಹಾಸವನ್ನು ತಿರುಚುವುದು, ಸೃಷ್ಟಿಸುವುದು ವಸ್ತುತಃ ಇನ್ನೊಂದು ಬಗೆಯ ಭಯೋತ್ಪಾದನೆಯೇ ಆಗಿದೆ ಎಂದು ದಿಲ್ಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಆಗಿರುವ ಶ್ರೀಮಾಲಿ ಹೇಳಿದರು.
ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇದವನ್ನು ಧಾರ್ಮಿಕ ನೆಲೆಯಲ್ಲಿ ಒಡೆಯಲು ಸಂಕಲ್ಪಿತವಾಗಿವೆ. ಇತಿಹಾಸ ಎನ್ನುವುದು ತರ್ಕದ ಶಿಸ್ತಿರುವ ಮಾನವಿಕ ವಿಷಯವಾಗಿದೆ.ಅದನ್ನು ಪುನರ್ ಲೇಖನ ಮಾಡುವುದಾಗಲೀ ಸತ್ಯಗಳನ್ನು ಸೃಷ್ಟಿಸುವುದಕ್ಕಾಗಲೀ ಕಪೋಲ ಕಲ್ಪಿತವನ್ನಾಗಿ ಮಾಡಲಾಗಲೀ ಸಾಧ್ಯವಿಲ್ಲ ಎಂದವರು ಹೇಳಿದರು.
ಮುಂದುವರಿದು ಶ್ರೀಮಾಲಿ ಅವರು ಹಿಂದುತ್ವ ಮತ್ತು ಹಿಂದು ಧರ್ಮ ಎನ್ನುವುದು ವಿಭಿನ್ನ ಪರಿಕಲ್ಪನೆಗಳು; ಹಿಂದುತ್ವ ಎನ್ನುವುದು ರಾಜಕೀಯ ಸಿದ್ಧಾಂತ ಎಂದು ವಿವರಿಸಿದರು.