ನವದೆಹಲಿ: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ 370ನೇ ಕಲಂ ಅನ್ನು ರದ್ದುಗೊಳಿಸಿರುವ ಕುರಿತು ನೀಡಿರುವ ಹೇಳಿಕೆ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂಕೋರ್ಟ್ ಬುಧವಾರ(ಮಾರ್ಚ್ 03) ವಜಾಗೊಳಿಸಿದೆ.
ಇದನ್ನೂ ಓದಿ:UPಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮಿತಿಮೀರುತ್ತಿದೆ : ಯೋಗಿಗೆ ಚಾಟಿ ಬೀಸಿದ ನುಸ್ರತ್..!
ಸುಪ್ರೀಂಕೋರ್ಟ್ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರನ್ನೊಳಗೊಂಡ ಪೀಠ ಫಾರೂಖ್ ಅಬ್ದುಲ್ಲಾ ವಿರುದ್ಧ ದಾಖಲಾಗಿದ್ದ ಪಿಐಎಲ್ ಕುರಿತು, ಸರ್ಕಾರಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ದೇಶದ್ರೋಹ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಕಲಂ 370 ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಚೀನಾ ಮತ್ತು ಪಾಕಿಸ್ತಾನಕ್ಕೆ ನೆರವಿನೊಂದಿಗೆ ಕಲಂ 370 ಅನ್ನು ಮರು ಜಾರಿಗೊಳಿಸುವುದಾಗಿ ಅಬ್ದುಲ್ಲಾ ಅವರು ಹೇಳಿಕೆ ನೀಡಿರುವುದಾಗಿ ಪಿಐಎಲ್ ನಲ್ಲಿ ಉಲ್ಲೇಖಿಸಲಾಗಿತ್ತು.
370 ರದ್ದುಗೊಳಿಸಿದ್ದರ ವಿರುದ್ಧ ಹೇಳಿಕೆ ನೀಡಿರುವ ಫಾರೂಖ್ ಅಬ್ದುಲ್ಲಾ ವಿರುದ್ಧ ದೇಶದ್ರೋಹ ಆರೋಪದಡಿ ಪ್ರಕರಣ ದಾಖಲಿಸಬೇಕೆಂದು ರಜತ್ ಶರ್ಮಾ ಮತ್ತು ವಕೀಲ ಶಿವ್ ಸಾಗರ್ ತಿವಾರಿ ಪಿಐಎಲ್ ಸಲ್ಲಿಸಿದ್ದರು. ಏತನ್ಮಧ್ಯೆ ಅಬ್ದುಲ್ಲಾ ವಿರುದ್ಧ ಪಿಐಎಲ್ ಸಲ್ಲಿಸಿದ್ದ ಅರ್ಜಿದಾರರಿಗೆ ಸುಪ್ರೀಂಕೋರ್ಟ್ 50 ಸಾವಿರ ರೂಪಾಯಿ ದಂಡ ವಿಧಿಸಿದೆ.