ಕಲಬುರಗಿ: ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಕೋರ್ ಕಮಿಟಿಯಲ್ಲಿ ಟಿಕೆಟ್ ನಿರ್ಣಯ ಮಾಡಲಾಗುತ್ತದೆ. ಹೀಗಿರುವಾಗ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಕ್ಕೆ ಅಧಿಕಾರ ಕೊಟ್ಟವರು ಯಾರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯ ವಿ.ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಉತ್ತರದಲ್ಲಿ ಚಂದು ಪಾಟೀಲ್ ಬಿಜೆಪಿ ಅಭ್ಯರ್ಥಿ ಎನ್ನುವ ನಿರಾಣಿ ಹೇಳಿಕೆಗೆ ಮಾಲೀಕಯ್ಯ ಗುತ್ತೇದಾರ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸ್ವತ: ನಿರಾಣಿ ಅವರಿಗೆ ಬೀಳಗಿಯಲ್ಲಿ ಟಿಕೆಟ್ ಸಿಗುತ್ತೋ ಇಲ್ಲವೋ ಖಚಿತವಾಗಿಲ್ಲ. ನಮ್ಮಲ್ಲಿಯಾರ ಟಿಕೆಟ್ ಕೂಡ ಇನ್ನೂ ನಿರ್ಣಯವಾಗಿಲ್ಲ. ಪ್ರಮುಖವಾಗಿ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಪಕ್ಷದಲ್ಲಿ ಅವಕಾಶ ಇಲ್ಲ ಎಂದರು.
ನಿರಾಣಿ ಅವರು ಕಲಬುರಗಿ ಉಸ್ತುವಾರಿ ಸಚಿವರಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿ ಕೆಲಸ ಮಾಡಲಿ. ಪಕ್ಷದ ಸಂಘಟನೆಗೆ ರಾಜ್ಯ ಉಪಾಧ್ಯಕ್ಷ ಸೇರಿ ಇಲ್ಲಿ ಹಲವರಿದ್ದಾರೆ. ಪರಿಸ್ಥಿತಿ ಎಲ್ಲ ಗೊತ್ತಿದ್ದರೂ ಸಚಿವ ನಿರಾಣಿ ಅಭ್ಯರ್ಥಿ ಘೋಷಣೆ ಮಾಡಿರುವುದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಹರಿ ಹಾಯ್ದರು.
ಟಿಕೆಟ್ ಘೋಷಣೆಯಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಒಟ್ಟಾರೆ ಈ ವಿಚಾರ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸುವೆ ಎಂದು ಗುತ್ತೇದಾರ ತಿಳಿಸಿದರು.
ಅಫಜಲಪುರದಲ್ಲಿ ತಮ್ಮ ವಿರುದ್ದ ಕೆಲವರು ಎತ್ತಿ ಕಟ್ಟುತ್ತಿದ್ದಾರೆ. ಈಗಾಗಲೇ ಆರು ಸಲ ಗೆದ್ದಿದ್ದು, ಏಳನೆ ಸಲ ಗೆದ್ದರೆ ಮಂತ್ರಿಯಾಗುತ್ತೇನೆ ಎಂಬ ಕಾರಣದಿಂದ ಸಹೋದರನನ್ನು ಟಿಕೆಟ್ ಕೇಳುವಂತೆ ಮುಂದೆ ಮಾಡುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ಒಡಕಿಲ್ಲ. ಜಾರಕಿಹೊಳಿ ಕುಟುಂಬದಂತೆ ಒಬ್ಬೊಬ್ಬರು ಒಂದೊಂದು ಪಕ್ಷದಲ್ಲಿಲ್ಲ. ನಾವೆಲ್ಲರೂ ಕುಳಿತು ಮಾತನಾಡುತ್ತೇವೆ. ಹಿರಿಯ ಸಹೋದರನಾಗಿ ತಂದೆ ಸ್ಥಾನದಲ್ಲಿ ಕೆಲವು ಮಾತುಗಳು ಹೇಳುವೆ. ಮಕ್ಕಳನ್ನು ರಾಜಕೀಯವಾಗಿ ಮುಂಚೂಣಿಗೆ ತಂದಿಲ್ಲ. ತರುವಂತಿದ್ದರೆ ಫರಹಾಬಾದ್ ಜಿಲ್ಲಾ ಪಂಚಾಯಿತಗೆ ತರಬಹುದಿತ್ತು. ತನ್ನ ಉತ್ತರದಾಧಿಕಾರಿ ಸಹೋದರ ನಿತೀನ್ ಗುತ್ತೇದಾರ ಎಂದು ಹೇಳಲಾಗಿದೆ. ಟಿಕೆಟ್ ಯಾರಿಗೂ ಕೊಟ್ಟರೂ ಒಗ್ಗಟ್ಟಿನಿಂದ ಮಾಡುತ್ತೇವೆ. ಒಂದು ವೇಳೆ ಎಲ್ಲವೂ ಹೇಳಿದ್ದರೂ ಕೇಳದಿದ್ದರೆ ಏನೂ ಮಾಡಕ್ಕಾಗಲ್ಲ ಎಂದು ಕುಟುಂಬದಲ್ಲಿನ ಟಿಕೆಟ್ ಪೈಪೋಟಿ ಕುರಿತು ವಿವರಣೆ ನೀಡಿದರು.
ನಿರಾಣಿ ಹೇಳಿದ್ದೇನು?
ಸಚಿವ ಮುರುಗೇಶ ನಿರಾಣಿ ಜ.25 ರಂದು ಬಿಜೆಪಿ ಕಲಬುರಗಿ ಉತ್ತರ ಮಂಡಲ ಪಕ್ಷದ ಕಚೇರಿ ಉದ್ಘಾಟಿಸಿ, ಈ ಸಲ ಕಲಬುರಗಿ ಉತ್ತರ ಕ್ಷೇತ್ರಕ್ಕೆ ಚಂದು ಪಾಟೀಲ್ ಅವರೇ ಅಭ್ಯರ್ಥಿ ಎಂದು ಘೋಷಿಸಿದ್ದರು. ಇದಕ್ಕೆ ಮಾಲೀಕಯ್ಯ ಗುತ್ತೇದಾರ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ಘೋಷಣೆ ಗೆ ಸಂಬಂಧಿಸಿದಂತೆ ರ ಪ್ರತಿಕ್ರಿಯಿಸಿರುವ ಸಚಿವ ನಿರಾಣಿ, ಕಳೆದ ಸಲ ಚಂದು ಪಾಟೀಲ್ ಕಡಿಮೆ ಮತಗಳ ಅಂತರದಿಂದ ಸೋತಿದ್ದಾರೆ. ಈ ಸಲ ಗೆಲುವು ಸಾಧಿಸುವುದು ನಿಶ್ಚಿತ. ಹೀಗಾಗಿ ಘೋಷಣೆ ಮಾಡಲಾಗಿದೆ. ಆದರೂ ಇದು ವೈಯಕ್ತಿಕ ಹೇಳಿಕೆ. ಪ್ರಮುಖವಾಗಿ ವರಿಷ್ಠರ ಗಮನಕ್ಕಿದೆ ಎಂದು ವಿವರಣೆ ನೀಡಿದರು.