Advertisement
ಹಲವು ಶಾಸಕರು, ಸ್ಥಳೀಯ ಮುಖಂಡರ ವಿರೋಧದ ಹೊರತಾಗಿಯೂ ಕೋಲಾರ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಕೊಪ್ಪಳದಲ್ಲಿ ರಾಜಶೇಖರ ಹಿಟ್ನಾಳ್ ಅವರಿಗೆ ಟಿಕೆಟ್ ನೀಡಿರುವುದು ಇತರ ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ. ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿದ್ದು, ಗೊಂದಲ ಮುಂದುವರಿದಿದೆ.
ರಾಜ್ಯದ ಎಲ್ಲ 14 ಬಿಜೆಪಿ ಸಂಸದರಿಗೆ ಟಿಕೆಟ್ ನೀಡಲಾಗಿದ್ದು, ಸಂಸದ ಕರಡಿ ಸಂಗಣ್ಣ ಪ್ರತಿನಿಧಿಸುತ್ತಿರುವ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಇನ್ನೂ ಘೋಷಣೆಯಾಗದಿರುವುದು ಬಿಜೆಪಿಯಲ್ಲೂ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿರುವುದನ್ನು ತೋರಿಸುತ್ತದೆ. ಇಬ್ಬರು ಪ್ರಬಲ ಆಕಾಂಕ್ಷಿಗಳಿದ್ದು, ಅವರನ್ನು ಸಮಾಧಾನಪಡಿಸುವ ಕಾರ್ಯ ನಡೆದಿದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಚಿಕ್ಕೋಡಿ ಕ್ಷೇತ್ರದಿಂದ ರಮೇಶ್ ಕತ್ತಿ ಹಾಗೂ ಅಣ್ಣಾ ಸಾಹೇಬ ಜೊಲ್ಲೆ ಅವರು ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದು, ಕಗ್ಗಂಟಾಗಿ ಪರಿಣಮಿಸಿದೆ. ಟಿಕೆಟ್ ಸಿಗದಿದ್ದರೆ ಕಠಿನ ನಿರ್ಧಾರ ಕೈಗೊಳ್ಳುವ ಎಚ್ಚರಿಕೆಯನ್ನೂ ರಮೇಶ್ ಕತ್ತಿ ನೀಡಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಬಿಎಂಪಿ ಸದಸ್ಯ ಮುನಿಸ್ವಾಮಿಯವರಿಗೆ ಟಿಕೆಟ್ ನೀಡಿರುವುದು ಸಹಜವಾಗಿಯೇ ಡಿ.ಎಸ್. ವೀರಯ್ಯ, ಚಲವಾದಿ ನಾರಾಯಣಸ್ವಾಮಿಯವರ ಅಸಮಾಧಾನಕ್ಕೆ ಕಾರಣವಾಗಿದೆ.