ಧಾರವಾಡ: ಹುಟ್ಟಿನಿಂದ ಶ್ರವಣ ದೋಷ ಹಾಗೂ ಮಾತು ಬಾರದೇ ಅಂಗವೈಕಲ್ಯಕ್ಕೆ ತುತ್ತಾಗಿರುವ ಹುಡುಗನೊಬ್ಬ ಅದನ್ನು ಮೆಟ್ಟಿ ನಿಂತು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.93.2ರಷ್ಟು ಅಂಕ ಪಡೆದಿದ್ದಾನೆ.
ನಗರದ ಐಸಿಎಸ್ ಮಹೇಶ ಪದವಿ ಪೂರ್ವ ಮಹಾವಿದ್ಯಾಲಯದ 2016-2017ನೇ ಸಾಲಿನ ದ್ವಿತೀಯ ಪಿಯುಸಿ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಿ.ಎಸ್. ಶಿವಯೋಗಿ, 600ಕ್ಕೆ 558 ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ.
ರಸಾಯನಶಾಸ್ತ್ರ-95, ಭೌತಶಾಸ್ತ್ರ-99, ಗಣಿತ-95 ಹಾಗೂ ಕಂಪ್ಯೂಟರ್ ಸೈನ್ಸನಲ್ಲಿ 97 ಅಂಕಗಳನ್ನು ಪಡೆದಿದ್ದಾನೆ. ಐಸಿಎಸ್ ಮಹೇಶ ಕಾಲೇಜಿನ 2016-17ರ ಶೈಕ್ಷಣಿಕ ಸಾಲಿನ ಅತ್ಯುತ್ತಮ ವಿದ್ಯಾರ್ಥಿಯಾಗಿರುವ ಈತ ಇತ್ತೀಚೆಗೆ ನಡೆದ ಜೆಇಇ ಮೇನ್ಸ್‌ನಲ್ಲಿ ಸಹ ತೇರ್ಗಡೆ ಹೊಂದಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಹೊಂದಿರುತ್ತಾನೆ.
ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಈತನು ಅನೇಕ ಬಹುಮಾನಗಳನ್ನು ಗೆದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಕ್ರಿಯಾಶೀಲನಾಗಿರುತ್ತಾನೆ. ಹುಟ್ಟಿನಿಂದಲೇ ಶ್ರವಣ ದೋಷವಿರುವ ಶಿವಯೋಗಿಗೆ ಮಾತು ಕೂಡಾ ಬಾರದು. ಎರಡು ಕಿವಿಗಳಲ್ಲಿ ಶೇ.90ರಷು ನ್ಯೂನತೆ ಇದೆ.
ಆದರೆ ಇದನ್ನೇ ನೆಪವಾಗಿಸಿಕೊಂಡು ಕೈಕಟ್ಟಿ ಕೂರದೇ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ಈತನ ಯಶಸ್ಸಿಗೆ ಬೆನ್ನುಲುಬಾಗಿ ನಿಂತವರು ಸಂಸ್ಥೆಯ ಆಡಳಿತ ಮಂಡಳಿ ಪ್ರಾಚಾರ್ಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ತಾಯಿ ನಾಗರತ್ನ.
ಎಂ.ಕಾಂ. ಪದವೀಧರೆಯಾದ ಅವರು, ಮಗನ ಓದಿನ ಕಡೆಗೆ ಹೆಚ್ಚು ಒತ್ತುಕೊಟ್ಟರು. ಇದರಿಂದ ತರಗತಿಯಲ್ಲಿ ಶಿಕ್ಷಕರ ತುಟಿ ಚಲನೆಯನ್ನೇ ಆಧರಿಸಿ ವ್ಯಾಸಂಗ ಮಾಡುತ್ತಿದ್ದನು. ಕೆಪಿಸಿ ಉದ್ಯೋಗಿ ಆಗಿರುವ ತಂದೆ ನಾಗರಾಜ ಶೆಟ್ಟಿ ಹಾಗೂ ಶಿಕ್ಷಕರ ಸಹಕಾರದಿಂದ ಈ ಸಾಧನೆ ಮಾಡುವಂತಾಗಿದೆ.