Advertisement

ಬಯಲು ಶೌಚಮುಕ್ತಕ್ಕೆ ಪಡಿತರ ಚೀಟಿ ಅಡ್ಡಿ

01:22 PM Jun 21, 2017 | |

ಧಾರವಾಡ: ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸಲು ಎಪಿಎಲ್‌, ಬಿಪಿಎಲ್‌ ಪಡಿತರ ಚೀಟಿ ಮಾನದಂಡ ಅಡ್ಡಿಯಾಗುತ್ತಿದ್ದು, ಈ ಕುರಿತು ಕಾನೂನಿನಲ್ಲಿ ಮಾರ್ಪಾಟು ತರಲು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರಿಗೆ ಮನವಿ ಮಾಡಿಕೊಳ್ಳುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ ಹೇಳಿದರು.

Advertisement

ಮಂಗಳವಾರ ಇಲ್ಲಿನ ಜಿಪಂ ಸಭಾಂಗಣದಲ್ಲಿ ಧಾರವಾಡ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳು ಮತ್ತು ಶೌಚಾಲಯಗಳ ನಿರ್ಮಾಣದ ಪ್ರಗತಿ ಕಾರ್ಯ ಪರಿಶೀಲನೆ ನಡೆಸಿ ಅವರು ಮಾತನಾಡಿದರು. 2017ರ ಅಕ್ಟೋಬರ್‌ 2ರೊಳಗಾಗಿ ರಾಜ್ಯವನ್ನು ಬಯಲು ಶೌಚಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂಬುದು ಸರ್ಕಾರದ ಆಶಯವಾಗಿದೆ.

ಆದರೆ ಈ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಪಿಎಲ್‌ ಕಾರ್ಡ್‌ ಹೊಂದಿದ ಅಥವಾ 5 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿದವರಿಗೆ ಅನುದಾನ ನೀಡಿಕೆಯಲ್ಲಿ ಲೋಪಗಳು ಕಂಡು ಬರುತ್ತಿವೆ. ಈ ಬಗ್ಗೆ ಈಗಾಗಲೇ ನಾನು ಭೇಟಿ ನೀಡಿದ ಬೇರೆ ಬೇರೆ ಜಿಲ್ಲೆಗಳಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಸೆಳೆಯುತ್ತಿದ್ದಾರೆ.

ಹೀಗಾಗಿ ಇಲ್ಲಿ ಪಡಿತರ ಚೀಟಿಯನ್ನು ಮಾನದಂಡ ವಾಗಿಟ್ಟುಕೊಳ್ಳದೇ ಎಲ್ಲಾ ವರ್ಗದವರಿಗೂ ಶೌಚಾಲಯ ನಿರ್ಮಾಣಕ್ಕೆ ಹಣ ಪೂರೈಕೆ ಮಾಡುವ ಕುರಿತು ಕಾನೂನಿನಲ್ಲಿ ಬದಲಾವಣೆ ತರಬೇಕಿದ್ದು, ಈ ಸಂಬಂಧ ಕೇಂದ್ರದ ಗ್ರಾಮೀಣ ಕುಡಿಯುವ ನೀರು ಗ್ರಾಮ ನೈರ್ಮಲ್ಯ ಸಚಿವ ರಮೇಶ ಜಿಗಜಿಣಗಿ ಅವರನ್ನು ಭೇಟಿಯಾಗಿ ಚರ್ಚಿಸಿ ಅವರಿಗೆ ಮನವಿ ಸಲ್ಲಿಸುವುದಾಗಿ ನಂಜಯ್ಯನಮಠ ಹೇಳಿದರು. 

ರೈಲ್ವೆಯಿಂದ ಕೆರೆಗಿಲ್ಲ ನೀರು: ಕಲಘಟಗಿ ತಾಲೂಕಿನ ಮಿಶ್ರಿಕೋಟೆ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಕೆರೆಗೆ ಕಳೆದ ನಾಲ್ಕು ವರ್ಷಗಳಿಂದ ನೀರು ಬರುತ್ತಿಲ್ಲ. ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗದ ದೊಡ್ಡ ಕಟ್ಟೆ ನಿರ್ಮಿಸಿದ್ದರಿಂದ ಈ ಕೆರೆಗೆ ನೀರು ಪೂರೈಸುತ್ತಿದ್ದ ದೊಡ್ಡ ಹಳ್ಳವೊಂದು ದಿಕ್ಕು ತಪ್ಪಿದೆ.

Advertisement

ಹೀಗಾಗಿ ನೀರು ಬರುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಈ ಕುರಿತು ತೀವ್ರ ಪರಿಶೀಲನೆ ನಡೆಸಿದ ನಂಜಯ್ಯನಮಠ, ಒಟ್ಟಾರೆ ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸಂಬಂಧ ಕೈಗೊಂಡ ಕೆಲವು ಯೋಜನೆಗಳು ವಿವಿಧ ಕಾರಣಗಳಿಗಾಗಿ ಸ್ಥಗಿತಗೊಂಡಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಶೌಚಾಲಯ ಜಗಳ ಹಚ್ಚಿ: ಜಿಲ್ಲೆಯಲ್ಲಿ ಅಕ್ಟೋಬರ್‌ 2 ರೊಳಗಾಗಿ 44 ಸಾವಿರ ಶೌಚಾಲಯಗಳು ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಶ್ರಮಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ನಂಜಯ್ಯನಮಠ, ಪ್ರೌಢಶಾಲೆ, ಕಾಲೇಜುಗಳಲ್ಲಿ ಬಾಲಕಿಯರಿಗಾಗಿ ಶೌಚಾಲಯಗಳನ್ನು ನಿರ್ಮಿಸಬೇಕು. ಜೊತೆಗೆ ಅವರೆಲ್ಲ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸುವಂತೆ ಅವರ ಮನ ಪರಿವರ್ತನೆ ಮಾಡಿ, ಮನೆಯಲ್ಲಿ ಅವರು ಜಗಳ ಮಾಡಿಯಾದ್ರು ಶೌಚಾಲಯ ನಿರ್ಮಿಸುವಂತೆ ಮಾಡಬೇಕೆಂದು ಸಲಹೆ ನೀಡಿದರು. 

ಜಿಪಂ ಅಧ್ಯಕ್ಷರಿಗೆ ಪಾಠ: ಸಭೆಯಲ್ಲಿ ಪಾಲ್ಗೊಂಡಿದ್ದ ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಅವರಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಕ್ಲಾಸ್‌ ತೆಗೆದುಕೊಂಡ ನಂಜಯ್ಯನಮಠ, ಅಧ್ಯಕ್ಷರೇ ನೀವು ಯಾವುದೇ ಗ್ರಾಮ, ನಗರ ಎಲ್ಲಿಯೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೋದರೆ ಆರಂಭದಲ್ಲಿ ವಿಷಯ ಮಾತನಾಡಿ, ಭಾಷಣದ ಕೊನೆಯಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಿಸಿಕೊಳ್ಳುವ ಕುರಿತು ಎರಡು ಮಾತುಗಳನ್ನು ಹೇಳುವುದನ್ನು ರೂಢಿಸಿಕೊಳ್ಳಿ. ಇದರಿಂದ ಜನರಲ್ಲಿ ಜಾಗೃತಿ ಬರುತ್ತದೆ ಎಂದರು.   

Advertisement

Udayavani is now on Telegram. Click here to join our channel and stay updated with the latest news.

Next