Advertisement

ವಿವಾದಿತ ಆಸ್ತಿ ಸರ್ವೇ ಕಾರ್ಯಕ್ಕೆ ಅಡ್ಡಿ

03:20 PM Mar 30, 2022 | Team Udayavani |

ಚಿಕ್ಕಮಗಳೂರು: ನಲ್ಲೂರು ಮಠದಮನೆ ಮತ್ತು ಬಡಾಮಕಾನ್‌ ಮಸೀದಿ ವಿವಾದಿತ ಆಸ್ತಿ ಸರ್ವೇ ಕಾರ್ಯಕ್ಕೆ ನಗರಸಭೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೆರಳಿದ ಸಂದರ್ಭದಲ್ಲಿ ಮಸೀದಿ ಆಡಳಿತ ಮಂಡಳಿ ಸದಸ್ಯರು ಸರ್ವೇ ಕಾರ್ಯ ನಡೆಸಲು ಅಡ್ಡಿಪಡಿಸಿದ ಘಟನೆ ಮಂಗಳವಾರ ನಗರದಲ್ಲಿ ನಡೆಯಿತು.

Advertisement

ನಲ್ಲೂರು ಮಠದಮನೆಯ ನಂಜುಡಯ್ಯ ಎಂಬುವವರು ನಗರದ ಹನುಮಂತಪ್ಪ ವೃತ್ತದ ಬಾಡಾಮಕಾನ್‌ ಮಸೀದಿ ಪಕ್ಕದಲ್ಲಿರುವ ತಮಗೆ ಸೇರಿದ ಆಸ್ತಿಯನ್ನು ಗುರುತಿಸಿ ಹದ್ದುಬಸ್ತು ಮತ್ತು ಖಾತೆ ಮಾಡಿಕೊಡುವಂತೆ ನಗರಸಭೆಗೆ ಕಳೆದ 6 ತಿಂಗಳ ಹಿಂದೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಪೌರಾಯುಕ್ತ ಬಿ.ಸಿ. ಬಸವರಾಜ್‌, ನಗರಸಭೆ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾಗಿದ್ದರು. ಈ ವೇಳೆ ಆಸ್ತಿ ವಿವಾದ ನ್ಯಾಯಾಲಯ ದಲ್ಲಿರುವುದರಿಂದ ಸರ್ವೇ ಕಾರ್ಯ ನಡೆಸಬಾರದು ಎಂದು ಮಸೀದಿಯ ಮುಖಂಡರು ಪಟ್ಟು ಹಿಡಿದರು. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಅಧಿಕಾರಿಗಳು ಮತ್ತು ಮಸೀದಿ ಆಡಳಿತ ಮಂಡಳಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಡಾಮಕಾನ್‌ ಮಸೀದಿ ಆಡಳಿತ ಮಂಡಳಿಯ ವಿರೋಧದ ನಡುವೆಯೂ ಬಿಗಿ ಪೊಲೀಸ್‌ ಬಂದೋಬಸ್ತ್ನೊಂದಿಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮ್ಮುಖದಲ್ಲಿ ಸರ್ವೇ ನಡೆಸಲಾಯಿತು. ಸರ್ವೇ ಕಾರ್ಯ ಮುಗಿಯುವವರೆಗೂ ಮಸೀದಿ ಆಡಳಿತ ಮಂಡಳಿಯವರು ಮಸೀದಿ ಗೇಟ್‌ ಮುಂಭಾಗ ಪ್ರತಿಭಟನೆ ನಡೆಸಿ ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾರೀ ಪ್ರತಿರೋಧದ ನಡುವೆ ಸಂಜೆ ವೇಳೆಗೆ ವಿವಾದಿತ ಜಾಗದ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿದರು.

ಫಲನೀಡದ ಸಭೆ

ನಗರಸಭೆ ಸಿಬ್ಬಂದಿ ಸರ್ವೇ ಕಾರ್ಯಕ್ಕೆ ಮುಂದಾಗುತ್ತಿದ್ದಂತೆ ಮಸೀದಿ ಆಡಳಿತ ಮಂಡಳಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅವರನ್ನು ಮನವೊಲಿಸುವ ನಿಟ್ಟಿನಲ್ಲಿ ನಗರದ ತಾಲೂಕು ಕಚೇರಿಯಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಮಸೀದಿ ಸದಸ್ಯರ ಜೊತೆ ತುರ್ತುಸಭೆ ನಡೆಸಿದರು. ಈ ವೇಳೆ ಮಸೀದಿ ಸದಸ್ಯರನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ, ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು ತಕ್ಷಣ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ನಂತರ ಪೊಲೀಸ್‌ ಬಂದೋಬಸ್ತ್ನಲ್ಲಿ ಸರ್ವೇ ಕಾರ್ಯ ನಡೆಸಲಾಯಿತು.

Advertisement

ಕಡೂರು ರಸ್ತೆಯಿಂದ ರಂಗಣ್ಣನ ಛತ್ರದವರೆಗೆ 64,769 ಚದರ ಅಡಿ ಜಾಗ ಬಡಾಮಕಾನ್‌ಗೆ ಸೇರಿದ್ದು, (ಬೋರ್ಡ್‌ ಆಫ್‌ ಟ್ರಸ್ಟ್‌ ಮುಸ್ಲಿಂ ಎಂಡೋಮೆಂಟ್ಸ್‌) ದಾಖಲೆ ಇದೆ. 1955ನಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಜಾಮೀಯಾ ಮಸೀದಿ ಜಾಗ ಎಂದು ಆದೇಶವಾಗಿದ್ದು ನಗರಸಭೆ ನೋಟಿಸ್‌ ನೀಡಿದ ಸಂದರ್ಭದಲ್ಲಿ ಎಲ್ಲಾ ದಾಖಲೆಗಳನ್ನು ನೀಡಲಾಗಿದೆ. ಹಲವು ವರ್ಷಗಳಿಂದ ಜಾಮೀಯಾ ಮಸೀದಿಯ ಅನುಭವದಲ್ಲಿ ಈ ಜಾಗವಿದ್ದು, ನಗರಸಭೆಗೆ ಕೋಟ್ಯಂತರ ರೂ. ತೆರಿಗೆಯನ್ನು ಕಟ್ಟಲಾಗಿದೆ. ಯಾರೋ ನೀಡಿದ ದೂರಿನನ್ವಯ ಸರ್ವೇ ಕಾರ್ಯ ನಡೆಸುತ್ತಿರುವುದು ಸರಿಯಲ್ಲ.  -ಮುದಸೀರ್‌ ಪಾಶಾ, ಜಾಮೀಯಾ ಮಸೀದಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next