ಮುಂಬಯಿ: ಮಹಾರಾಷ್ಟ್ರದ ಖ್ಯಾತ ಚಿತ್ರಕಲಾವಿದ ದಿ. ಪ್ರಭಾಕರ್ ಬಾರ್ವೆ ಅವರ ಸ್ಮರಣೆಯ ಹಿನ್ನೆಲೆಯಲ್ಲಿ, ಮುಂಬಯಿನಲ್ಲಿ ಆಯೋಜಿಸಲಾಗಿದ್ದ ಬಾರ್ವೆಯವರ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ವೇಳೆ ಹಿಂದಿ ಚಿತ್ರ ನಟ- ನಿರ್ದೇಶಕ ಅಮೋಲ್ ಪಾಲೇಕರ್ ಅವರು ಮಾಡಿದ ಭಾಷಣ ಹೊಸ ಚರ್ಚೆಗೆ ಗ್ರಾಸವಾಗಿದೆ. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ (ಎನ್‌ಜಿಎಂಎ) ಆಯೋಜಿಸಿದ್ದ ಪ್ರದರ್ಶನದ ಉದ್ಘಾಟನೆ ವೇಳೆ, ಕೇಂದ್ರ ಸಂಸ್ಕೃತಿ ಇಲಾಖೆಯು ಪುಣೆ ಹಾಗೂ ಬೆಂಗಳೂರಿನ ಎನ್‌ಜಿಎಂಎ ಕೇಂದ್ರಗಳಲ್ಲಿನ ಸಮಿತಿಗಳನ್ನು ರದ್ದು ಮಾಡಿದ್ದರ ಬಗ್ಗೆ ಪಾಲೇಕರ್ ಅಸಮಾಧಾನ ವ್ಯಕ್ತಪಡಿಸಿದರು. ಭಾಷಣದ ನಡುವೆಯೇ ಎನ್‌ಜಿಎಂಎ ಸದಸ್ಯರು ಬೇರೆ ವಿಚಾರ ಮಾತಾಡದಂತೆ ತಾಕೀತು ಮಾಡಿದ್ದಾರೆ. ಇದು, ಭಾಷಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಇನ್ನೊಂದೆಡೆ, ಪಾಲೇಕರ್ ಅವರ ಆರೋಪವನ್ನು ಎನ್‌ಜಿಎಂಎ ತಳ್ಳಿಹಾಕಿದೆ.