Advertisement

 ಮೇಲ್ಮನೆಯಲ್ಲಿ  ಕೋಲಾಹಲ: ಸದನ ಸಮಿತಿ ರಚನೆಗೆ ಆಗ್ರಹ

12:30 AM Feb 13, 2019 | Team Udayavani |

ಬೆಂಗಳೂರು: “ಶುದ್ಧ ಕುಡಿಯುವ ನೀರಿನ ಘಟಕ’ ಎಬ್ಬಿಸಿದ ಅಲೆಗೆ ವಿಧಾನ ಪರಿಷತ್‌ನ ಇಡೀ ದಿನದ ಕಲಾಪ ಕೊಚ್ಚಿಹೋಯಿತು. ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ಈ ಸಂಬಂಧದ ತನಿಖೆಗೆ ಸದನ ಸಮಿತಿ ರಚಿಸಬೇಕು ಎಂದು ಮಂಗಳವಾರ ವಿಧಾನ ಪರಿಷತ್‌ನ ವಿಪಕ್ಷ ಸದಸ್ಯರು ಪಟ್ಟುಹಿಡಿದರು. ಗದ್ದಲ- ಕೋಲಾಹಲ ಉಂಟಾದ ಪರಿಣಾಮ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಮತ್ತೆ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ವಿಷಯ ಪ್ರಸ್ತಾವಿಸಿದ ಬಿಜೆಪಿ ಸದಸ್ಯ ರಘುನಾಥ ರಾವ್‌ ಮಲ್ಕಾಪುರೆ, ರಾಜ್ಯದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದ ಹೊಣೆಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್‌)ಕ್ಕೆ ವಹಿಸಿದ್ದು, ಯೋಜನೆ ಅನುಷ್ಠಾನಗೊಂಡಿದ್ದರೂ ಬಹುತೇಕ ಕಡೆಗಳಲ್ಲಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇಡೀ ಯೋಜನೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಈ ಬಗ್ಗೆ ಎಲ್ಲ ಪಕ್ಷಗಳ ಸದಸ್ಯರನ್ನು ಒಳಗೊಂಡ ಸದನ ಸಮಿತಿ ರಚಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹಿತ ಇತರ ಸದಸ್ಯರು ದನಿಗೂಡಿಸಿದರು.

15,578 ನೀರಿನ ಘಟಕಗಳು
ಇದಕ್ಕೆ ಉತ್ತರಿಸಿದ ಗ್ರಾಮೀಣಾ ಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, “ರಾಜ್ಯದಲ್ಲಿ 18,582 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು, ಈ ಪೈಕಿ 16,366 ಘಟಕಗಳು ನಿರ್ಮಾಣ ಮಾಡಲಾಗಿದೆ. 15,578 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 578 ಮಾತ್ರ ದುರಸ್ತಿಯಲ್ಲಿವೆ. ಸಾಮಾನ್ಯ ವಾಗಿ 400ರಿಂದ 500 ಘಟಕಗಳು ದುರಸ್ತಿಯಲ್ಲಿದ್ದೇ ಇರುತ್ತವೆ. ಇಂಥ ದೊಡ್ಡ ಯೋಜನೆಯಲ್ಲಿ ಸಣ್ಣಪುಟ್ಟ ನ್ಯೂನತೆಗಳು ಸಹಜ. ಈ ನಡುವೆ ನಿರ್ವಹಣ ಹೊಣೆಯನ್ನು ಗ್ರಾ.ಪಂ.ಗಳಿಗೆ ವಹಿಸಿದ್ದರೂ ಬಹುತೇಕ ಪಂಚಾಯತ್‌ಗಳು ಇದನ್ನು ನಿರ್ವಹಿ ಸುತ್ತಿಲ್ಲ. ಆದ್ದರಿಂದ ಎಸ್ಕಾಂ ಮಾದರಿಯಲ್ಲಿ ತಾಲೂಕು ಮಟ್ಟದಲ್ಲಿ ನಿರ್ವಹಣ ವ್ಯವಸ್ಥೆ ಯನ್ನು ಎಪ್ರಿಲ್‌ನಿಂದ ಜಾರಿಗೊಳಿ ಸಲಾಗುವುದು. ಅಷ್ಟಕ್ಕೂ ಈಗಾಗಲೇ ಜಲಸಂಪನ್ಮೂಲ ತಜ್ಞ ಕ್ಯಾಪ್ಟನ್‌ ರಾಜಾರಾವ್‌ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಲಾಗಿದೆ. ಅದು ಸಮೀಕ್ಷೆ ನಡೆಸುತ್ತಿದ್ದು, ಮಾರ್ಚ್‌ ಅಂತ್ಯದೊಳಗೆ ವರದಿ ಮಂಡಿಸಲಿದೆ ಎಂದು ಹೇಳುವ ಮೂಲಕ ಸದನ ಸಮಿತಿ ರಚನೆಯನ್ನು ನಿರಾಕರಿಸಿದರು.ಸಚಿವರ ಉತ್ತರದಿಂದ ಕ್ರುದ್ಧರಾದ ವಿಪಕ್ಷ ಸದಸ್ಯರೆಲ್ಲರೂ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಆಗ ಸಭಾಪತಿಗಳು ಒಂದು ತಾಸು ಕಲಾಪ ಮುಂದೂಡಿದರು.

ಸಭೆ ನಡೆಸೋದು ಬೇಡವೇ?
ಒಂದೂವರೆ ತಾಸಿನ ಅನಂತರ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ಮತ್ತೆ ಸದನ ಸಮಿತಿ ರಚನೆಗೆ ಆಗ್ರಹಿಸಿ ವಿಪಕ್ಷದ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಆಗ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, “ಬರೀ ಇದನ್ನೇ ಮಾಡುವುದೇ? ಸಭೆ ನಡೆಸುವುದು ಬೇಡವೇ? ಎಷ್ಟು ಹೊತ್ತು ನಡೆಸಬೇಕು ಎಂದು ತೀರ್ಮಾನ ಮಾಡಿದ್ದೀರಿ?’ ಎಂದು ಖಾರವಾಗಿ ಕೇಳಿದರು. ಆದರೆ ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಸಭಾಪತಿ ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಲೆಕ್ಕಕ್ಕೆ 115; ಸೇವೆ 87!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಿಸಲಾದ 115 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 28 ಘಟಕಗಳು ಸ್ಥಗಿತಗೊಂಡಿದ್ದು, 87 ಸುಸ್ಥಿತಿಯಲ್ಲಿವೆ. ಈ ಅಂಕಿ-ಅಂಶಗಳ ಬಗ್ಗೆ ಸ್ವತಃ ಸಚಿವ ಕೃಷ್ಣ ಭೆೈರೇಗೌಡ ಅಚ್ಚರಿ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ರಾಜ್ಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಪ್ರಮಾಣ ಶೇ. 4ರಷ್ಟಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 24ರಷ್ಟಿದೆ. ಇದು ಸ್ವೀಕಾರಾರ್ಹವಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಐವನ್‌ ಡಿ’ಸೋಜಾ, ಇರುವ ಘಟಕಗಳಿಗೂ ದಾರಿ ಇಲ್ಲ. ಇದ್ದರೂ ಕಾಯಿನ್‌ ಬಾಕ್ಸ್‌ ಗಳಿಲ್ಲ. ನಿರ್ವಹಣೆ ಮಾಡುತ್ತಿರುವ ಏಜೆನ್ಸಿ ಮತ್ತು ಪಂಚಾಯತ್‌ ನಡುವೆ ಸಮನ್ವಯದ ಕೊರತೆ ಇದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟಕಗಳ ನಿರ್ಮಾಣಕ್ಕೆ ಸೂಕ್ತ ಜಾಗ ದೊರೆಯುವುದಿಲ್ಲ. ಸ್ಥಳೀಯವಾಗಿ ಪರ-ವಿರೋಧದಿಂದ ವ್ಯಾಜ್ಯ
ಗಳಿಗೂ ಇದು ಎಡೆಮಾಡಿಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಸ್ಥಳೀಯ ಮಟ್ಟ ದಲ್ಲೇ ನಿರ್ವಹಣ ಹೊಣೆ ವಹಿಸಬೇಕು ಎಂಬ ಚಿಂತನೆಯೂ ಇದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next