Advertisement

ವಿಲೇವಾರಿಯಾಗದ ಕಸ: ಸಾರ್ವಜನಿಕರ ಆಕ್ರೋಶ

12:46 PM May 20, 2018 | Team Udayavani |

ಪುತ್ತೂರು : ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಆದರೆ ನಗರಸಭೆ ಆಡಳಿತ ಮಾತ್ರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸದೆ ತಪ್ಪಿಸಿಕೊಳ್ಳುತ್ತಿದೆ. ಉದಯವಾಣಿ ‘ಸುದಿನ’ ದಲ್ಲಿ ಕಸದ ಸಮಸ್ಯೆಯ ಕುರಿತು ಸಚಿತ್ರ ವರದಿ ಪ್ರಕಟಗೊಂಡ ಬಳಿಕ ಸಾರ್ವಜನಿಕರೂ ಪತ್ರಿಕೆಯನ್ನು ಸಂಪರ್ಕಿಸಿ ಸಮಸ್ಯೆ ತೋಡಿಕೊಂಡಿದ್ದಾರೆ.

Advertisement

ನಗರಸಭೆ ಆಡಳಿತವು ಡೋರ್‌ ಕಲೆಕ್ಷನ್‌ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆಯನ್ನು ಮಾಡಿಕೊಂಡ ಬಳಿಕ ಸಮಸ್ಯೆ ತೀವ್ರತೆಯನ್ನು ಪಡೆದುಕೊಂಡಿದೆ. ಹೊಸ ವ್ಯವಸ್ಥೆಯ ಸಾಧಕ – ಬಾಧಕಗಳ ಕುರಿತು ನಗರಸಭೆ ಅಧಿಕಾರಿಗಳು ಸ್ಥಳ ಭೇಟಿ ನಡೆಸಿ ಪರಿಶೀಲನೆ ನಡೆಸದೆ ಎಲ್ಲ ವ್ಯವಸ್ಥೆಗಳು ಸರಿಯಾಗಿವೆ ಎಂದು ಸಮಜಾಯಿಸಿ ಉತ್ತರಗಳನ್ನಷ್ಟೇ ನೀಡುತ್ತಿದ್ದಾರೆ. ಈ ಭಾಗದಲ್ಲಿ ಕಸ ವಿಲೇವಾರಿಯಾಗಿಲ್ಲ ಎಂದು ಚಿತ್ರಗಳ ಸಹಿತ ನಗರಸಭೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಗರವಾಸಿಗರು ಅಲವತ್ತುಕೊಂಡಿದ್ದಾರೆ.

ಕಸ ವಿಲೇವಾರಿಗೆ ಸಂಬಂಧಿಸಿದಂತೆ ಹೊಸದಾಗಿ ಗುತ್ತಿಗೆ ಪಡೆದುಕೊಂಡವರು ತಮ್ಮ ಕಾರ್ಯ ಚಟುವಟಿಕೆಯಲ್ಲಿ ಗಂಭೀರತೆ ತೋರುತ್ತಿಲ್ಲ. ನಗರಸಭೆ ಆಡಳಿತಕ್ಕೆ ಅಂಕಿ ಸಂಖ್ಯೆಗಳನ್ನಷ್ಟೇ ನೀಡುತ್ತಿದ್ದಾರೆ. ನಗರಸಭೆಯ ಪೌರಾಯುಕ್ತರ ಸಹಿತ ಅಧಿಕಾರಿಗಳು ಕುಳಿತಲ್ಲಿಂದಲೇ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಸಾರ್ವಜನಿಕರಿಗೆ ಇದೇ ಮಾಹಿತಿಯನ್ನು ಮರು ಒಪ್ಪಿಸುತ್ತಿದ್ದಾರೆ. 

ಈ ಕಾರಣದಿಂದ ನಗರದ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಮನೆಗಳಲ್ಲಿ ಕಸ, ತ್ಯಾಜ್ಯವನ್ನು ಸಂಗ್ರಹಿಸಿಟ್ಟ ರಾಶಿಗಳು ಕಂಡುಬಂದಿವೆ. ಸಾರ್ವಜನಿಕ ತೊಟ್ಟಿಗಳನ್ನು ಅಳವಡಿಸಿದಲ್ಲಿಯೂ ಕಸ, ತ್ಯಾಜ್ಯಗಳು ತುಂಬಿ ಪರಿಸರದಲ್ಲಿ ಹರಡುತ್ತಿದೆ. ಒಟ್ಟು ಪುತ್ತೂರಿನ ಸ್ವಚ್ಛತೆಗೆ ನಗರಸಭೆ ಆಡಳಿತವೇ ಮುಳ್ಳಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ತ್ವರಿತ ಕ್ರಮ ಕೈಗೊಳ್ಳಬೇಕು
ಮೊದಲಿನ ವ್ಯವಸ್ಥೆಯಲ್ಲಿ ಕಸದ ಡೋರ್‌ ಕಲೆಕ್ಷನ್‌ ಚೆನ್ನಾಗಿತ್ತು. ಈಗ ಸುಮಾರು 20 ದಿನಗಳಿಂದ ಕಸ ವಿಲೇವಾರಿಯಾಗದೆ ತುಂಬಿ ಹೋಗಿದೆ. ತ್ವರಿತ ಕ್ರಮದ ಕಡೆಗೆ ನಗರಸಭೆಯ ಅಧಿಕಾರಿಗಳು ಗಮನಹರಿಸಿದರೆ ಉತ್ತಮ.
ಯಶ್ವಿ‌ನಿ, ಬೊಳುವಾರು

Advertisement

ಎಸಿಗೆ ದೂರು ನೀಡುತ್ತೇವೆ
ಕಸ ವಿಲೇವಾರಿಗೆ ಸಂಬಂಧಿಸಿದಂತೆ ನಗರಸಭೆ ಆಡಳಿತ ಈ ಮೊದಲು ಇದ್ದ ವ್ಯವಸ್ಥೆಯನ್ನು ತೆಗೆದು ಮತ್ತಷ್ಟು ಅಸಮರ್ಪಕಗೊಳಿಸಿದೆ. ಈ ಕುರಿತು ದೂರು ನೀಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ವ್ಯವಸ್ಥೆ ಸರಿಪಡಿಸದಿದ್ದಲ್ಲಿ ನಗರಸಭೆಯ ಎದುರು ಕಸ ತೆಗೆದುಕೊಂಡು ಹೋಗಿ ಸುರಿಯುವುದು ಅನಿವಾರ್ಯವಾದೀತು. ಈ ಅವ್ಯವಸ್ಥೆಯ ವಿರುದ್ಧ ಪುತ್ತೂರು ಸಹಾಯಕ ಕಮಿಷನರ್‌ಗೂ ದೂರು ನೀಡುತ್ತೇವೆ.
– ನಾಗರಾಜ್‌, ಕಲ್ಲಾರೆ 

ಪರಿಶೀಲನೆಗೆ ಸೂಚಿಸಿದ್ದೇನೆ
ಕೆಲವರು ನಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿದ ಸಂದರ್ಭದಲ್ಲಿ ತತ್‌ಕ್ಷಣ ಸ್ಪಂದಿಸಿ ಅಲ್ಲಿನ ಕ್ರಮ ಕೈಗೊಳ್ಳಲಾಗಿದೆ. ಹೊಸ ವ್ಯವಸ್ಥೆಯವರಿಗೆ ಎಲ್ಲೆಲ್ಲ ಬಾಕಿಯಾಗಿದೆ ಎಂಬುದು ತಿಳಿಯುತ್ತಿಲ್ಲ. ನಗರಸಭಾ ಆರೋಗ್ಯ ನಿರೀಕ್ಷಕರಿಗೂ ಈ ಕುರಿತು ಪರಿಶೀಲನೆಗೆ ತಿಳಿಸಲಾಗಿದೆ. 
– ರೂಪಾ ಟಿ. ಶೆಟ್ಟಿ ಪೌರಾಯುಕ್ತರು, ನಗರಸಭೆ ಪುತ್ತೂರು

15 ದಿನಗಳಲ್ಲಿ ಸರಿಯಾಗುತ್ತದೆ
ಹೊಸ ವ್ಯವಸ್ಥೆಯವರಾಗಿರುವುದರಿಂದ ಕೆಲವು ಕಡೆ ಕಸ ಸಂಗ್ರಹಕ್ಕೆ ಬಿಟ್ಟುಹೋಗಿದೆ. ನಾವೆಲ್ಲ ಸೇರಿ ಟ್ರಾಫಿಕ್‌ ಹಿಡಿಯಲು ಪ್ರಯತ್ನ ನಡೆಸುತ್ತಿದ್ದೇವೆ ಮತ್ತು ಅವರ ಜತೆ ತೆರಳುತ್ತಿದ್ದೇವೆ. ಮೊದಲು ಕಸ ಸಂಗ್ರಹಕ್ಕೆ ಹೋಗುತ್ತಿದ್ದ ಇಬ್ಬರನ್ನು ಕರೆಸಿಕೊಂಡು ಅವರಿಂದ ಮಾಹಿತಿ ಪಡೆಯುತ್ತಿದ್ದೇವೆ. ಇನ್ನು 15 ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ.
– ಶ್ವೇತಾ ಕಿರಣ್‌, ಹಿರಿಯ ಆರೋಗ್ಯ ನಿರೀಕ್ಷಕರು, ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next