Advertisement
ಇದರಂತೆ, ಕೇಂದ್ರ ಸರಕಾರದಿಂದ ಗುರುತಿಸಲಾದ ಸಲಹೆಗಾರರನ್ನು ಅಧ್ಯಯನ ಕೈಗೊಳ್ಳಲು ಮಂಗಳೂರಿಗೆ ಈಗಾಗಲೇ ನೇಮಿಸಿ, ಪರಿಶೀಲನೆ ನಡೆಸಿ, ಈಗ ವರದಿಯನ್ನು ಪಾಲಿಕೆಗೆ ಸಲ್ಲಿಸಲಾಗಿದೆ. ಆದರೆ, ವರದಿಯಲ್ಲಿ ಕೆಲವು ಅಭಿಪ್ರಾಯ ಗೊಂದಲ ಇರುವ ಕಾರಣದಿಂದ ಇನ್ನಷ್ಟು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ.
ಒಟ್ಟು 12.19 ಕೋ.ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಹಾಗೂ ಸಂಸ್ಕರಣೆ ನಡೆಸುವ ಕುರಿತಂತೆ ವರದಿಯಲ್ಲಿ ಲೆಕ್ಕಾಚಾರ ನೀಡಲಾಗಿದೆ. ಈ ಪೈಕಿ, 43 ಲಕ್ಷ ರೂ. ವೆಚ್ಚದಲ್ಲಿ ಪಚ್ಚನಾಡಿಯಲ್ಲಿ ವೇಸ್ಟ್ ರಿಸೀವಿಂಗ್ ಫ್ಲ್ಯಾಟ್‌ಫಾರ್ಮ್ ಶೆಡ್ ನಿರ್ಮಾಣ, 1.18 ಕೋ.ರೂ. ವೆಚ್ಚದಲ್ಲಿ ರೂಫಿಂಗ್ ರಿಪ್ಲೇಸ್‌ಮೆಂಟ್, 68 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, 13 ಲಕ್ಷ ರೂ. ವೆಚ್ಚದಲ್ಲಿ ಕಾರ್ಮಿಕರಿಗೆ ವಿಶ್ರಾಂತಿ ಗೃಹ, 77 ಲಕ್ಷ ರೂ.ವೆಚ್ಚದಲ್ಲಿ ನಂದಿಗುಡ್ಡ, ಅತ್ತಾವರ, ಅಳಕೆ, ಉರ್ವ ಮಾರುಕಟ್ಟೆ, ಕಾವೂರು, ಕೂಳೂರು ಹಾಗೂ ಸುರತ್ಕಲ್ ನಲ್ಲಿ ಒಣಕಸ ಸಂಗ್ರಹ ಕೇಂದ್ರ ಸೇರಿದಂತೆ ಹಲವು ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ನಮೂದಿಸಲಾಗಿದೆ. ‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿಯಲ್ಲಿ ಕೇಂದ್ರ ಸರಕಾರದ ವತಿಯಿಂದ ಶೇ.35 ಹಾಗೂ ರಾಜ್ಯ ಸರಕಾರದಿಂದ ಶೇ.23.30ರಷ್ಟು ಅನುದಾನವನ್ನು ಮಂಗಳೂರು ಪಾಲಿಕೆಗೆ ನೀಡಲಿದ್ದಾರೆ. ಉಳಿದ ಮೊತ್ತವನ್ನು ಪಾಲಿಕೆ ಭರಿಸಬೇಕಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆ ಯಡಿಯಲ್ಲಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಹಾಗೂ ಸಂಸ್ಕರಣೆಯನ್ನು ಮಾಡುವ ಕುರಿತು ವಿಸ್ತೃತ ಯೋಜನೆಯನ್ನು ತಯಾರಿಸಿಕೊಂಡು ರಾಜ್ಯ ಮಟ್ಟದ ತಾಂತ್ರಿಕ ಪರಿಶೀಲನ ಸಭೆಗೆ ಮಂಡಿಸಿ, ರಾಜ್ಯ ಸರಕಾರದ ಅನುಮೋದನೆ ಪಡೆದುಕೊಂಡು ಕಾರ್ಯಾನುಷ್ಠಾನಗೊಳಿಸಲು ಪೌರಾಡಳಿತ ನಿರ್ದೇಶನಾಲಯ 2016 ಜೂ. 29ರಂದು ಆದೇಶಿಸಿತ್ತು. ಸರಕಾರದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಹಾಗೂ ಸಂಸ್ಕರಣೆಯನ್ನು ಮಾಡಲು ವಿಸ್ತೃತ ಯೋಜನ ವರದಿ ತಯಾರಿಸಲು ಟೆಂಡರ್ ಮುಖಾಂತರ ಭಾರತ ಸರಕಾರದಿಂದ ಗುರುತಿಸಲಾದ ಮುಂಬಯಿಯ ಮೆ| ಟಾಟಾ ಕನ್ಸೆಲ್ಟಿಂಗ್ ಎಂಜಿನಿಯರ್ಸ್ ಲಿ. ಅವರನ್ನು ನೇಮಕ ಮಾಡಲಾಗಿತ್ತು.
Related Articles
Advertisement
ಯೋಜನ ವರದಿಯಲ್ಲೇನಿದೆ?ಈಗ ಸಂಸ್ಕರಣೆಗಾಗಿ ಮಂಗಳೂರಿನ ಪಚ್ಚನಾಡಿಯಲ್ಲಿ ಏರೋಬಿಕ್ ವಿಂಡ್‌ರೋ ಮಾದರಿಯ ಗೊಬ್ಬರ ತಯಾರಿಕ ಘಟಕವನ್ನು ನಿರ್ಮಿಸಲಾಗಿದ್ದು, ಇದು ಕೇವಲ 175 ಟನ್‌ಗಳನ್ನು ಸಂಸ್ಕರಣೆ ಮಾಡಲು ಮೂಲಸೌಕರ್ಯದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಘಟಕವನ್ನು ನಿರ್ಮಿಸಿ ಈಗಾಗಲೇ 12-13 ವರ್ಷ ಕಳೆದಿರುವುದರಿಂದ ಈಗ ಇರುವ ಸ್ಥಾವರ ಮೇಲ್ದರ್ಜೆಗೇರಿಸಲು ಯೋಜನ ವರದಿಯಲ್ಲಿ ವಿವರಿಸಲಾಗಿದೆ. ಏರೋಬಿಕ್ ವಿಂಡ್‌ರೊ ಘಟಕದಲ್ಲಿ ಇರುವ ಯಂತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚುವರಿ ಯಂತ್ರೋಪಕರಣ ಹಾಗೂ ಉಪಕರಣವನ್ನು ಖರೀದಿಸಲು ಯೋಜನ ವರದಿಯಲ್ಲಿ ಪ್ರಸ್ತಾವಿಸಲಾಗಿದೆ. ಈಗ ಸಂಗ್ರಹವಾಗಿರುವ ತ್ಯಾಜ್ಯವನ್ನು ಪಿ.ಪಿ.ಪಿ. ಮಾದರಿಯಲ್ಲಿ ಬಯೋಮೈನಿಂಗ್ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ವರದಿಯಲ್ಲಿ ಪ್ರಸ್ತಾವಿಸಲಾಗಿದೆ.