Advertisement

ಹೊಳೆ ಬಂದಾಗಷ್ಟೇ ಸ್ಥಳಾಂತರದ ಸಾಂತ್ವನ

03:43 PM Apr 28, 2022 | Team Udayavani |

ಬೆಳಗಾವಿ: ಸರಕಾರದ ಒಂದು ಯೋಜನೆ ಅಥವಾ ಘೋಷಣೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲು ಎಷ್ಟು ವರ್ಷ ಬೇಕು. ಈ ವಿಷಯದಲ್ಲಿ ಖಚಿತವಾಗಿ ಇಂತಿಷ್ಟೇ ವರ್ಷ ಬೇಕು ಎಂದು ಊಹಿಸಲು ಸಾಧ್ಯವಿಲ್ಲ. ವರ್ಷಗಳು ಉರುಳುತ್ತವೆಯೇ ಹೊರತು ಯೋಜನೆ ಪೂರ್ಣಗೊಳುವುದಿಲ್ಲ.

Advertisement

ಇಂತಹ ಹಲವಾರು ಯೋಜನೆಗಳು ನಮ್ಮ ಕಣ್ಮುಂದೆ ಇವೆ. ಈಗ ಇದಕ್ಕೆ ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿ ತೀರದ ಗ್ರಾಮಗಳ ಸ್ಥಳಾಂತರವೂ ಸೇರ್ಪಡೆಯಾಗುತ್ತಿದೆ. 2005 ರಲ್ಲಿ ಕೃಷ್ಣಾ ನದಿಗೆ ಭೀಕರ ಪ್ರವಾಹ ಬಂದು ಹಲವಾರು ಗ್ರಾಮಗಳು ಮುಳುಗಡೆಯಾದಾಗ ಕೇಳಿಬಂದ ಸ್ಥಳಾಂತರ ಬೇಡಿಕೆ ಈಗಲೂ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಬದಲಾಗಿ ಸ್ಥಳಾಂತರ ಬೇಡಿಕೆಗೆ ಕೃಷ್ಣೆಯ ಜೊತೆಗೆ ಮಲಪ್ರಭಾ ಮತ್ತು ಘಟಪ್ರಭಾ ನದಿ ವ್ಯಾಪ್ತಿ ಜನರು ಸಹ ಸೇರಿಕೊಂಡಿದ್ದಾರೆ.

ಹೊಳಿ ಬಂದಾಗ ಜನ ರೊಚ್ಚಿಗೇಳುತ್ತಾರೆ. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡುತ್ತಾರೆ. ಉಪವಾಸ ಕೂಡುತ್ತಾರೆ. ಆಗ ಸರಕಾರ, ಸಚಿವರು ಮತ್ತು ಜನಪ್ರತಿನಿಧಿಗಳು ಬಂದು ಸಮಾಧಾನ ಮಾಡಿ ಭರವಸೆ ಕೊಟ್ಟು ಹೋಗುತ್ತಾರೆ. ಈ ಕಡೆ ಹೊಳೆ ನೀರು ಇಳಿದಾಗ ಜನರೂ ಸಹ ಎಂದಿನಂತೆ ತಮ್ಮ ಕೆಲಸಕ್ಕೆ ಹಚ್ಚಿಕೊಳ್ಳುತ್ತಾರೆ. ಭರವಸೆ ಕೊಟ್ಟವರೂ ಸಹ ಮರೆಯುತ್ತಾರೆ. ಮುಂದೆ ಸರಕಾರ ಕೊಟ್ಟ ಭರವಸೆಗಳು ಏನಾದವು ಎಂದು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನೆನಪಾಗುವುದು ಮತ್ತೆ ಹೊಳೆಗೆ ನೀರು ಬಂದಾಗಲೇ.

ಇದು 2019ರಲ್ಲಿ ಮಲಪ್ರಭಾ ನದಿಯ ರುದ್ರತಾಂಡವದಿಂದ ಸಂಪೂರ್ಣ ನಲುಗಿ ಹೋಗಿದ್ದ ರಾಮದುರ್ಗ ತಾಲೂಕಿನ ನದಿ ತೀರದ ಗ್ರಾಮಸ್ಥರ ಆಕ್ರೋಶದ ಮಾತು. ಇದೇ ರೀತಿಯ ಅಸಮಾಧಾನ ಘಟಪ್ರಭಾ ನದಿ ವ್ಯಾಪ್ತಿಯ ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲೂ ಇದೆ. ಕೃಷ್ಣಾ ನದಿ ತೀರದ ಗ್ರಾಮಗಳ ಜನರಿಗಿಂತ ಘಟಪ್ರಭಾ ಹಾಗೂ ಮಲಪ್ರಭಾ ನದಿ ಪಾತ್ರದ ಜನರ ಕೂಗು ಹೆಚ್ಚಾಗುತ್ತಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ.

2019ರಲ್ಲಿ ಘಟಪ್ರಭಾ ನದಿಯ ಪ್ರವಾಹದಿಂದ ಗೋಕಾಕ ತಾಲೂಕು ಹಾಗೂ ಮೂಡಲಗಿ ತಾಲೂಕುಗಳಲ್ಲಿ 25 ಕ್ಕೂ ಹೆಚ್ಚು ಹಳ್ಳಿಗಳು ಬಾಧಿತವಾಗಿದ್ದವು. 10 ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿದ್ದವು. ಪ್ರತಿ ವರ್ಷ ಬರುವ ಪ್ರವಾಹದಿಂದ ಆತಂಕಗೊಂಡಿದ್ದ 15 ಗ್ರಾಮಗಳ ಜನರು ತಮ್ಮನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡಿದ್ದರು. ಅದರಂತೆ ಸರಕಾರ ಸಹ ಈ ಹಳ್ಳಿಗಳ ಸ್ಥಳಾಂತರದ ಬಗ್ಗೆ ಚಿಂತನೆ ಮಾಡಿತ್ತು. ಈ ಯೋಜನೆಯ ಪ್ರಕಾರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಅಡಿಬಟ್ಟಿ, ಚಿಗಡೊಳ್ಳಿ, ಮಸಗುಪ್ಪಿ, ಮೆಳವಂಕಿ, ಹಡಗಿನಾಳ, ಕಲಾರಕೊಪ್ಪ, ಉದಗಟ್ಟಿ, ಕಮಲದಿನ್ನಿ, ಹುಣಶ್ಯಾಳ ಪಿ ವೈ, ಅರಳಿಮಟ್ಟಿ, ಅವರಾದಿ, ಢವಳೇಶ್ವರ ಸೇರಿದಂತೆ 15 ಹಳ್ಳಿಗಳು ಸ್ಥಳಾಂತರವಾಗಬೇಕಿದೆ. ಈಗಾಗಲೇ ಈ ಸಂಬಂಧ 120 ಎಕರೆ ಜಾಗವನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಸ್ಥಳಾಂತರದ ಕಾರ್ಯ ಮಾತ್ರ ಆರಂಭವಾಗಿಲ್ಲ.

Advertisement

ಸರಕಾರಕ್ಕೆ ಹಳ್ಳಿಗಳ ಸ್ಥಳಾಂತರದ ಬಗ್ಗೆ ಆಸಕ್ತಿ ಇಲ್ಲ. 2019 ರಲ್ಲಿ ಪ್ರವಾಹದಿಂದ ಬಿದ್ದ ಮನೆಗಳಿಗೆ ಇದುವರೆಗೆ ಪರಿಹಾರವನ್ನೇ ಕೊಟ್ಟಿಲ್ಲ. ಇನ್ನು ಗ್ರಾಮಗಳ ಸ್ಥಳಾಂತರ ಏನು ಮಾಡುತ್ತಾರೆ. ಸರಕಾರ ನದಿ ತೀರದ ಪ್ರದೇಶಗಳನ್ನು ಶಾಶ್ವತ ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಮನೆ ಬಿದ್ದ ಪ್ರದೇಶದಲ್ಲೇ ಮನೆಗಳನ್ನು ಕಟ್ಟಿಕೊಳ್ಳಲು ಪರಿಹಾರ ಕೊಟ್ಟರೆ ಪ್ರವಾಹಕ್ಕೆ ಈ ಮನೆಗಳು ಮತ್ತೆ ಬೀಳುತ್ತವೆ. ಸರಕಾರ ಮರಳಿ ಪರಿಹಾರ ಕೊಡುತ್ತದೆ. ಇದರಿಂದ ಶಾಶ್ವತ ಪರಿಹಾರ ಸಿಗುವದಿಲ್ಲ. ಭೀಮಪ್ಪ ಗಡಾದ, ಸಮಾಜ ಸೇವಕರು

ನಮ್ಮ ಹಳ್ಳಿಗಳನ್ನು ಸ್ಥಳಾಂತರ ಮಾಡಲೇಬೇಕು. ಮಳೆಗಾಲ ಬಂತೆಂದರೆ ಆತಂಕ. ಕೆಲಸ ಮಾಡಲು ಹೆದರಿಕೆಯಾಗುತ್ತದೆ. ಈಗಾಗಲೇ ಬದುಕು ಬೀದಿಗೆ ಬಂದಿದೆ. ಸರಕಾರ ದೃಢ ನಿರ್ಧಾರ ಮಾಡಬೇಕು. ಕೇವಲ ಗ್ರಾಮಕ್ಕೆ ಭೆಟ್ಟಿ ನೀಡಿ ಸಾಂತ್ವನದ ಮಾತು ಹೇಳಿದರೆ ಸಮಸ್ಯೆ ಬಗೆಹರಿಯುವದಿಲ್ಲ. ಗ್ರಾಮದಿಂದ ಸುಮಾರು 1.5 ಕಿ ಮೀ ದೂರದಲ್ಲಿ ಜಾಗವಿದೆ. ಅಲ್ಲಿಗೆ ಸ್ಥಳಾಂತರ ಮಾಡಬೇಕು. ಅದನ್ನು ಬಿಟ್ಟು ಗ್ರಾಮದಿಂದ 15 ಕಿ ಮೀ ದೂರ ಮಾಡಿದರೆ ಯಾವ ಗ್ರಾಮದ ಜನರೂ ಹೋಗುವದಿಲ್ಲ. –ಲಕ್ಷ್ಮಣ ಕೋಣಿಮನಿ,

ಕಿಲಬನೂರ ಗ್ರಾಮಸ್ಥರು ಹಳ್ಳಿಗಳ ಸ್ಥಳಾಂತರ ವಿಷಯದಲ್ಲಿ ಸರಕಾರದಿಂದ ಹಾಗೂ ಶಾಸಕರಿಂದ ಭರವಸೆಯ ಮಾತು ಬಿಟ್ಟರೆ ಬೇರೆ ಏನೂ ಆಗುತ್ತಿಲ್ಲ. 2019 ರಿಂದ ಇದನ್ನೇ ಕೇಳುತ್ತಿದ್ದೇವೆ. ನಮ್ಮ ಮನವಿಗಳು, ಹೋರಾಟ ಅರಣ್ಯರೋದನವಾಗಿವೆ. ರಾಮದುರ್ಗದ ಬಳಿ ಸುರಕ್ಷಿತ ಜಾಗ ಇದ್ದರೂ ಸರಕಾರ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ. ನೀರಿನಲ್ಲೇ ನಮ್ಮ ಜೀವನ ಎನ್ನುವಂತಾಗಿದೆ. -ರಮೇಶ ಚೌಡಕಿ, ಕಿಲಬನೂರು ಗ್ರಾಮ  

-ಕೇಶವ ಆದಿ

 

Advertisement

Udayavani is now on Telegram. Click here to join our channel and stay updated with the latest news.

Next