Advertisement

ಕ್ರಮಕ್ಕೆ ಪಾಲಿಕೆ ಅಧಿಕಾರಿಗಳ ಅಸಹಕಾರ

12:08 PM Aug 22, 2017 | Team Udayavani |

ಬೆಂಗಳೂರು: ನಗರದಲ್ಲಿ ಹಲವೆಡೆ ನಿಯಮ ಉಲ್ಲಂ ಸಿ ಬೃಹತ್‌ ಕಟ್ಟಡಗಳನ್ನು ನಿರ್ಮಿಸಿರುವ ಭೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳ ಅಸಹಕಾರವೇ ಅಡ್ಡಿಯಾಗಿದೆ ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

Advertisement

ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮ ಉಲ್ಲಂ ಸಿ ನಿರ್ಮಿಸುತ್ತಿರುವ ಕಟ್ಟಡಗಳ ವಿರುದ್ಧ ಸಮಿತಿಯಿಂದ ಕ್ರಮಕೈಗೊಳ್ಳಲು ಮುಂದಾದರೂ, ಅಧಿಕಾರಿಗಳ ಅಸಹಕಾರ ಧೋರಣೆಯಿಂದ ಹಿನ್ನಡೆಯಾಗಿದೆ.

ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸುವ ಹಾಗೂ ನಕ್ಷೆ ಮಂಜೂರಾತಿ ಉಲ್ಲಂ ಸಿ ನಿರ್ಮಿಸುತ್ತಿರುವ ಕಟ್ಟಡಗಳ ಪರಿಶೀಲನೆಗೆ ಮುಂದಾದಾಗ ಅಧಿಕಾರಿಗಳು ಸಹಕರಿಸುತ್ತಿಲ್ಲ. ಅಗತ್ಯ ದಾಖಲೆ ಕೋರಿ ಲಿಖೀತ ಮನವಿ ಸಲ್ಲಿಸಿ, ಆಯುಕ್ತರಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ ಎಂದು ದೂರಿದರು. 

ಅನುಮಾನಕ್ಕೆ ಎಡೆ
ಲಗ್ಗೆರೆ ವಾರ್ಡ್‌ನಲ್ಲಿ ಬೆಥೆಲ್‌ ಶಿಕ್ಷಣ ಟ್ರಸ್ಟ್‌ ನೆಲಮಹಡಿ ಸೇರಿ 3 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಪಡೆದು, ಐದು ಮಹಡಿಯ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿಲ್ಲ. ಇದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು. 

ಸಮಿತಿಯ ಸದಸ್ಯ ಎನ್‌.ರಾಜಶೇಖರ್‌ ಮಾತನಾಡಿ, ಬೈರತಿ ಗ್ರಾಮದ ಸರ್ವೆ ಸಂಖ್ಯೆ 12/1, 12/2ರಲ್ಲಿ ಫೌಲಿó ಮತ್ತು ಡೈರಿ ಫಾರಂ ಉದ್ದೇಶಕ್ಕಾಗಿ 1970ರಲ್ಲಿ ಭೂ ಪರಿವರ್ತನೆ ಮಾಡಿಸಿಕೊಂಡಿದ್ದ ಭೂಮಿಯಲ್ಲಿ ಅಕ್ರಮವಾಗಿ ಸಲಾರ್‌ಪುರಿಯಾ ಸಂಸ್ಥೆಯು 33 ಅಂತಸ್ತಿನ ಅಪಾರ್ಟ್‌ಮೆಂಟ್‌ ನಿರ್ಮಿಸುತ್ತಿದ್ದಾರೆ. ಇದನ್ನು ದಾಖಲೆಗಳ ಸಮೇತವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ ಎಂದರು ಆರೋಪಿಸಿದರು. 

Advertisement

ಕಳೆದ ಬಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದಂತಹ ಕೋಡಿಚಿಕ್ಕನಹಳ್ಳಿಯ ಸರ್ವೆ ಸಂಖ್ಯೆ 25/2,3,4 ರಲ್ಲಿನ 1.21 ಎಕರೆ ಖರಾಬು ಸರ್ಕಾರಿ ಜಾಗ ಮತ್ತು ರಾಜಕಾಲುವೆಯನ್ನು ಮಹಾವೀರ್‌ ರೆಡ್ಡಿ ಕನ್‌ಸ್ಟ್ರಕ್ಷನ್‌ ಸಂಸ್ಥೆಯುವರು ಒತ್ತುವರಿ ಮಾಡಿದ್ದಾರೆ.

ಮಲ್ಲಸಂದ್ರ ಗ್ರಾಮದ ಸರ್ವೆ ಸಂಖ್ಯೆ 83/1,2ರಲ್ಲಿ ಸರ್ಕಾರಿ ಜಾಗವನ್ನು ಕಬಳಿಸಿ ಜಿ.ಎಂ.ಇನೋನೆಟ್‌ ಸಂಸ್ಥೆಯು ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈಗ ನಗರದ ಹಲವಾರು ಭಾಗಗಳಲ್ಲಿ ಅಧಿಕಾರಿಗಳು ಬಿಲ್ಡರ್‌ಗಳೊಂದಿಗೆ ಶಾಮೀಲಾಗಿ ಕಾನೂನು ಬಾಹಿರ ಕಟ್ಟಡಗಳಿಗೆ ಅನುಮತಿ ನೀಡಿ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next