ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಆಪ್ಪಿಕಲ್ ಫೈಬರ್ ಕೇಬಲ್ (ಒಎಫ್ಸಿ) ಅಳವಡಿಕೆದಾರರ ವಿರುದ್ಧದ ಕಾರ್ಯಾಚರಣೆಗೆ ಬಿಬಿಎಂಪಿ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಿಂಗ್ ಹ್ಯಾಂ ಹಾಗೂ ರೆಸಿಡೆನ್ಸಿ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಕೇಬಲ್‌ಗಳನ್ನು ಕಳೆದ ತಿಂಗಳು ತೆರವುಗೊಳಿಸಲಾಗಿತ್ತು. ಪರಿಣಾಮ ಕೆಲವೊಂದು ಸಂಸ್ಥೆಗಳು ಡಿಮ್ಯಾಂಡ್ ನೋಟಿಸ್ ಪಡೆದು ತೆರಿಗೆ ಪಾವತಿಗೆ ಮುಂದಾಗಿದ್ದವು.
ತೆರಿಗೆ ಪಾವತಿಗೆ ಎರಡು ದಿನಗಳ ಕಾಲಾವಕಾಶ ಕೋರಿದ್ದರು. ಆದರೆ, ಈವರೆಗೆ ಟೆಲಿಕಾಂ ಸಂಸ್ಥೆಗಳು ತೆರಿಗೆ ಪಾವತಿ ಮಾಡಿಲ್ಲ. ಹೀಗಾಗಿ ಪುನಃ ಕೇಬಲ್‌ಗಳ ತೆರವು ಕಾರ್ಯಾಚರಣೆಗೆ ಪಾಲಿಕೆ ನಿರ್ಧರಿಸಿದೆ. ಆದರೆ, ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ದೂರಿದರು.
ಕಳೆದ ಬಾರಿಯ ಕಾರ್ಯಾಚರಣೆಯಿಂದ ಪಾಲಿಕೆಗೆ 4 ಕೋಟಿ ರೂ. ಆದಾಯ ಬಂದಿದೆ. ರಿಲಾಯನ್ಸ್ ಜಿಯೋ, ಎಲ್ ಅಂಡ್ ಟಿ, 3ಜಿ ಟೆಲಿಕಾಂ ಇನ್ಫಾ ಸಂಸ್ಥೆಗಳು ದಂಡ ಪಾವತಿಸಿವೆ. ಹೀಗಾಗಿ ಒಟ್ಟಾರೆ 3.94 ಕೋಟಿ ರೂ. ದಂಡ ಸಹಿತ ಒಎಫ್ಸಿ ಶುಲ್ಕ ಪಾವತಿಸಿ ನಿಯಮಾನುಸಾರ ಕೇಬಲ್ ಅಳವಡಿಸುವುದಾಗಿ ತಿಳಿಸಿವೆ.
ಟೆಂಡರ್‌ಶ್ಯೂರ್ ರಸ್ತೆಗಳಲ್ಲಿ ಅಳವಡಿಕೆ ಮಾಡಲಾಗಿದ್ದ ಒಎಫ್ಸಿ ಕೇಬಲ್‌ಗಳನ್ನು ತೆರವು ಕಾರ್ಯಾಚರಣೆಯಿಂದಾಗಿ ಪಾಲಿಕೆಗೆ 4 ಕೋಟಿ ಆದಾಯ ಬಂದಿದೆ. ಕಾರ್ಯಾಚರಣೆ ಮುಂದುವರಿಸುವುದರಿಂದಾಗಿ ಪಾಲಿಕೆಗೆ ಮತ್ತಷ್ಟು ಆದಾಯ ಬರಲಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ಕಾರ್ಯಾಚರಣೆಗೆ ಸಹಕರಿಸುತ್ತಿಲ್ಲ.
-ಎಂ.ಕೆ.ಗುಣಶೇಖರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ
ಡಿಮ್ಯಾಂಡ್ ನೊಟೀಸ್ ಪಡೆದ ಸಂಸ್ಥೆಗಳ ವಿವರ
ಸಂಸ್ಥೆ ಮೊತ್ತ
-ಭಾರತಿ ಏರ್‌ಟೆಲ್ 29.9 ಲಕ್ಷ ರೂ.
-ಸ್ಪೆಕ್ಟ್ರಾ ನೆಟ್ 1.09 ಕೋಟಿ ರೂ.
-ಐಡಿಯಾ ಸೆಲ್ಯೂಲರ್ 29.56 ಲಕ್ಷ ರೂ.
-ಒಟ್ಟು 1.68 ಕೋಟಿ ರೂ.