Advertisement

ಅಸಭ್ಯ ವರ್ತನೆ: ಪುರುಷ ಟೆನಿಸಿಗರಿಗೇ ಶಿಕ್ಷೆ  ಜಾಸ್ತಿ!

03:39 PM Sep 17, 2018 | |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಟೆನಿಸ್‌ ಮಹಿಳಾ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಜಪಾನ್‌ನ ನವೋಮಿ ಒಸಾಕಾ ವಿರುದ್ಧ ಆಡುವಾಗ ಅಮೆರಿಕದ  ಸೆರೆನಾ ವಿಲಿಯಮ್ಸ್‌ ತಾಳ್ಮೆ ಕಳೆದುಕೊಂಡು ಚೇರ್‌ ಅಂಪಾಯರ್‌ಗೆ ಬೈದು ವಿವಾದ ಸೃಷ್ಟಿಸಿದ್ದರು. ಈ ಅನುಚಿತ ವರ್ತನೆಯನ್ನು ವಿಶ್ವ ಟೆನಿಸ್‌ ಲೋಕ ಖಂಡಿಸಿತ್ತು. 

Advertisement

ಆದರೆ ಟೆನಿಸ್‌ ಅಂಗಳದಲ್ಲಿ ಇಂತಹ ಅಶಿಸ್ತಿನ ವರ್ತನೆಗಳು ಇದೇ ಮೊದಲೇನಲ್ಲ. ಹಿಂದೆಯೂ ಬೇಕಾದಷ್ಟು ನಡೆದಿವೆ. ಅಮೆರಿಕದ ಖ್ಯಾತ ಸುದ್ದಿ ಸಂಸ್ಥೆ ನ್ಯೂಯಾರ್ಕ್‌ ಟೈಮ್ಸ್‌ (ಎನ್‌ವೈಕೆ) ನೀಡಿರುವ ವರದಿ ಪ್ರಕಾರ 20 ವರ್ಷದ ಗ್ರ್ಯಾನ್‌ಸ್ಲಾಮ್‌ನಲ್ಲಿ ಒಟ್ಟು 11,517 ಪ್ರಕರಣಗಳು ದಾಖಲಾಗಿವೆ. ಅಶಿಸ್ತು ಪ್ರದರ್ಶಿಸಿದ ಎಲ್ಲ ಆಟಗಾರರೂ ದಂಡಕ್ಕೆ ತುತ್ತಾಗಿದ್ದಾರೆ. ಈ ಕುರಿತ ಆಯ್ದ ಕೆಲವು ಸ್ವಾರಸ್ಯಕರ ಅಂಕಿ-ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಯಾರಿಗೆ ಎಷ್ಟು  ದಂಡ?
1998-2018ರ ವರೆಗೆ ಅರ್ಹತಾ ಸುತ್ತು, ಮುಖ್ಯ ಸುತ್ತು ಸಿಂಗಲ್ಸ್‌, ಡಬಲ್ಸ್‌ ಪಂದ್ಯಗಳ ದತ್ತಾಂಶವನ್ನು ಕಲೆ ಹಾಕಿ ಎನ್‌ವೈಕೆ ವರದಿ ತಯಾರಿಸಿದೆ. ಇದರಂತೆ ಒಟ್ಟು ದಾಖಲಾಗಿರುವ ಪ್ರಕರಣಗಳು 11,517. ರ್ಯಾಕೆಟ್‌ ತುಂಡು ಮಾಡಿದ ಪ್ರಕರಣದಲ್ಲಿ 649 ಪುರುಷ ಆಟಗಾರರು ದಂಡಕ್ಕೆ ಒಳಗಾದರೆ, 99 ಮಹಿಳೆಯರು ದಂಡ  ತೆತ್ತಿದ್ದಾರೆ. ಎದುರಾಳಿಯನ್ನು ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ 344 ಪುರುಷ ಆಟಗಾರರು ಶಿಕ್ಷೆ ಅನುಭವಿಸಿದ್ದರೆ, ವನಿತೆಯರ ಸಂಖ್ಯೆ 140.

ಕ್ರೀಡಾಸ್ಫೂರ್ತಿಗೆ ಧಕ್ಕೆ
ಕ್ರೀಡಾಸ್ಫೂರ್ತಿಗೆ ಧಕ್ಕೆ ತಂದ ವಿಷಯದಲ್ಲಿ 287 ಪುರುಷ ಆಟಗಾರರು ಹಾಗೂ 67 ಆಟಗಾರ್ತಿ ಯರು ಶಿಕ್ಷೆ ಅನುಭವಿಸಿದ್ದಾರೆ. ಇನ್ನು ಸೆರೆನಾರಂತೆ ಚೇರ್‌ ಅಂಪಾಯರ್‌ಗೆ ಬೈದು ರಂಪಾಟ ಮಾಡಿದ ಪ್ರಕರಣದಲ್ಲಿ ಮಹಿಳೆಯರು ಪುರುಷರನ್ನು ಹಿಂದಿಕ್ಕಿದ್ದಾರೆ. ವನಿತೆಯರು 152 ಹಾಗೂ ಪುರುಷ ಆಟಗಾರರು 87 ಪ್ರಕರಣಗಳಲ್ಲಿ ಚೇರ್‌ ಅಂಪಾಯರ್‌ ವಿರುದ್ಧ ಸಿಡಿದು ಶಿಕ್ಷೆ ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next