Advertisement

ರೇಣುಕಾಚಾರ್ಯ ವಜಾಕೆ ಆಗ್ರಹ

04:32 PM Mar 30, 2022 | Team Udayavani |

ದಾವಣಗೆರೆ: ಪ್ರಭಾವ ಬೀರಿ ತನ್ನ ಮಕ್ಕಳು ಹಾಗೂ ಪರಿವಾರದವರಿಗೆ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಕೊಡಿಸಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಆಗ್ರಹಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ರೇಣುಕಾಚಾರ್ಯ ಮಗಳು ಚೇತನಾ ಮತ್ತು ಸಹೋದರ ಡಾ| ದಾರುಕೇಶ್ವರಯ್ಯ ಅವರ ಮಗಳು ಶೃತಿ ಅವರ ಶಾಲಾ ದಾಖಲಾತಿಗಳಲ್ಲಿ ‘ಹಿಂದೂ ಲಿಂಗಾಯತ’ ಎಂಬುವುದಾಗಿ ನಮೂದಾಗಿದೆ. ರೇಣುಕಾಚಾರ್ಯ ತಮ್ಮ ರಾಜಕೀಯ ಪ್ರಭಾವ ಬಳಸಿ ಬೆಂಗಳೂರು ಉತ್ತರದ ತಹಶೀಲ್ದಾರ್‌ ಕಚೇರಿಯಿಂದ ಪರಿಶಿಷ್ಟ ಜಾತಿಗೆ ಸೇರಿದ ಬೇಡಜಂಗಮ ಜಾತಿ ಪ್ರಮಾಣ ಪತ್ರವನ್ನು ಅಕ್ರಮವಾಗಿ ಕೊಡಿಸಿದ್ದಾರೆ ಎಂದು ಆರೋಪಿಸಿದರು.

ಹಿಂದೂ ಲಿಂಗಾಯತರಾಗಿರುವವರಿಗೆ ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿಸಿರುವ ಎಂ.ಪಿ. ರೇಣುಕಾಚಾರ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಅವರನ್ನು ವಿಧಾನಸಭೆ ಸದಸ್ಯತ್ವದಿಂದ ಸರ್ಕಾರವೇ ವಜಾಗೊಳಿಸಬೇಕು. ಎಂ.ಪಿ. ರೇಣುಕಾಚಾರ್ಯ ಮತ್ತು ಅವರ ಮಕ್ಕಳು ಹಾಗೂ ಸಹೋದರ ಎಂ.ಪಿ. ದಾರುಕೇಶ್ವರಯ್ಯ ಮತ್ತು ಅವರ ಮಕ್ಕಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ದೌರ್ಜನ್ಯ ತಡೆ ಕಾಯ್ದೆ 1989ರ ಅಡಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಇವರಿಗೆ ಈಗಾಗಲೇ ನೀಡಿರುವ ಬೇಡಜಂಗಮ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು. ಎಂ.ಪಿ. ದಾರುಕೇಶ್ವರಯ್ಯ ಅವರು ಮಾಡಿಕೊಂಡಿರುವ ಅಖೀಲ ಕರ್ನಾಟಕ ಡಾ| ಅಂಬೇಡ್ಕರ್‌ ಬೇಡಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ನಕಲಿ ಜಾತಿ ಪ್ರಮಾಣ ಪತ್ರ ಸೃಷ್ಟಿಸುವ ಹಾಗೂ ಪ್ರೋತ್ಸಾಹಿಸುವ ಸಂಸ್ಥೆಯಾಗಿದೆ. ಕೂಡಲೇ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂತ್ರೊಪಾಲಜಿಕಲ್‌ ಸರ್ವೇ ಆಫ್‌ ಇಂಡಿಯಾ ವತಿಯಿಂದ ಪ್ರಕಟಿಸಿರುವ ಸರ್ವೇ ಪ್ರಕಾರ ನೈಜ ಬೇಡಜಂಗಮರು ಸಾಮಾನ್ಯವಾಗಿ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಬೀದರ್‌, ಗುಲ್ಬರ್ಗ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬರುತ್ತಾರೆ. ಇವರ ಮಾತೃಭಾಷೆ ತೆಲುಗು. ಆದರೂ ಕನ್ನಡ ಬಲ್ಲವರಾಗಿದ್ದಾರೆ. ಬೇಡ ಜಂಗಮರು ಮಾಂಸಾಹಾರಿಗಳಾಗಿದ್ದು, ಹಂದಿ ಮಾಂಸ ಸೇರಿದಂತೆ ಎಲ್ಲ ರೀತಿ ಮಾಂಸ ಸೇವನೆ ಮಾಡುತ್ತಾರೆ. ಮಾದಕ ಪಾನೀಯ ಸೇವಿಸುತ್ತಾರೆ. ಭಿಕ್ಷೆ ಬೇಡುವುದು, ಕಣಿ ಹೇಳುವುದು, ಚಾಪೆ ನೇಯುವುದು ಇವರ ಕುಲಕಸುಬಾಗಿದೆ ಎಂದು ತಿಳಿಸಿದರು.

ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್‌. ಗಂಗಾಧರಪ್ಪ, ಹನುಮಂತಪ್ಪ ಕಾಕರಗಲ್‌, ವೆಂಕಟೇಶ್‌ ಮಂಡ್ಯ, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಕುಂದುವಾಡ, ಪದಾಧಿಕಾರಿಗಳಾದ ಅಕ್ಷತ, ವಿಜಯಮ್ಮ, ಹಾಲೇಶ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next