Advertisement

ಜಿಲ್ಲೆಯಲ್ಲಿ ನೀಲಗಿರಿ ನಿರ್ಮೂಲನೆಗೆ ನಿರಾಸಕ್ತಿ!

09:09 PM Feb 15, 2020 | Lakshmi GovindaRaj |

ಕೋಲಾರ: ಸರಕಾರದ ಅವೈಜ್ಞಾನಿಕ ನೀತಿ, ಅನುದಾನದ ಕೊರತೆ, ಪರ್ಯಾಯದ ಬಗ್ಗೆ ಸ್ಪಷ್ಟತೆಯಿಲ್ಲದೇ ಇರುವುದು, ಕಡ್ಡಾಯ ತೆರವಿಗೆ ಸೂಚನೆಯಿಲ್ಲದಿರುವುದು, ತೆರವುಗೊಳಿಸದಿದ್ದರೆ ಕ್ರಮಕ್ಕೆ ಅವಕಾಶವಿಲ್ಲದಿರುವುದು ಸೇರಿದಂತೆ ಹಲವು ಕಾರಣಗಳಿಂದ ಕೋಲಾರ ಜಿಲ್ಲೆಯಲ್ಲಿ ನೀಲಗಿರಿ ನಿರ್ಮೂಲನೆಗೆ ರೈತಾಪಿ ವಲಯದಲ್ಲಿ ನಿರಾಸಕ್ತಿ ಕಾಣಿಸುತ್ತಿದೆ.

Advertisement

25 ಸಾವಿರ ಹೆಕ್ಟೇರ್‌ ನೀಲಗಿರಿ: ಜಿಲ್ಲೆಯಲ್ಲಿ 1960ರ ದಶಕದಿಂದಲೂ ಆರಂಭಿಸಿ, ಈವರೆಗೂ ಸುಮಾರು 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನೀಲಗಿರಿ ಮರ ಬೆಳೆಸಲಾಗಿದೆ. ಈ ಪೈಕಿ ಪ್ರಾದೇಶಿಕ ಅರಣ್ಯ ಇಲಾಖೆ 13,400 ಹೆಕ್ಟೇರ್‌, ಸಾಮಾಜಿಕ ಅರಣ್ಯ ಇಲಾಖೆಯಡಿ 3,200 ಹೆಕ್ಟೇರ್‌ ಪ್ರದೇಶದಲ್ಲಿ ಹಾಗೂ ಭಾರತ ಗೋಲ್ಡ್‌ ಮೈನ್ಸ್‌ಗೆ ಸೇರಿದ ಸುಮಾರು 17 ಸಾವಿರ ಹೆಕ್ಟೇರ್‌ ಪೈಕಿ ಸುಮಾರು 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನೀಲಗಿರಿ ಮತ್ತು ಅಕೇಷಿಯಾ ಜಾತಿಯ ಮರಗಳನ್ನು ಬೆಳೆಸಲಾಗಿದೆ. ಜೊತೆಗೆ ಖಾಸಗಿಯಾಗಿ ರೈತರು ಬೆಳೆದಿರುವ ನೀಲಗಿರಿ ಕುರಿತು ಮಾಹಿತಿಯೇ ಇಲ್ಲವಾಗಿದೆ.

ನೀಲಗಿರಿ ಲಾಭ-ನಷ್ಟ: ನೀಲಗಿರಿ ಎಂತದ್ದೆ ಭೂಮಿಯಲ್ಲಿ ಬೆಳೆಯುತ್ತದೆ. ನಿರ್ವಹಣೆ ಅಗತ್ಯವಿಲ್ಲ. ವೇಗವಾಗಿ ಬೆಳೆಯುತ್ತದೆ. ಬಡವರಿಗೆ ಉರುವಲು, ಯೂಕ್ಲಿಯುಪ್ಟಸ್‌ ಸಿಟ್ರಿಯೋಡರಾ ಎಣ್ಣೆ ಉತ್ಪಾದನೆಗೆ ಸಹಕಾರಿ, ಅರಣ್ಯ ಭೂಮಿಯ ಒತ್ತುವರಿ ತಡೆಗೆ ನೀಲಗಿರಿ ಉಪಯುಕ್ತವಾಗಿದೆ. ಬೆಳೆದವರ ಆದಾಯೋತ್ಪನಕ್ಕೂ ಸಹಕಾರಿಯಾಗಿದೆ.

ನೀಲಗಿರಿ ಭೂಮಿಯ ಮೇಲ್ಮಟ್ಟದ ತೇವಾಂಶವನ್ನು ಹೀರಿಬಿಡುತ್ತದೆ, ಸುತ್ತಮುತ್ತಲ ಹತ್ತಾರು ಅಡಿಗಳ ದೂರದಲ್ಲಿ ಬೇರೇನು ಬೆಳೆಯಲು ಬಿಡುವುದಿಲ್ಲ, ನೀಲಗಿರಿ ಎಲೆಗಳು ಭೂಮಿಯಲ್ಲಿ ಬೇಗನೆ ಕರಗಿ ಮಣ್ಣಾಗುವುದಿಲ್ಲ, ಅಂತರ್ಜಲ ಇಂಗುವಿಕೆಗೆ ಅಡ್ಡಿಯಾಗುತ್ತದೆ, ವಾತಾವರಣ ತೇವಾಂಶವನ್ನು ಹೀರುತ್ತದೆ, ಭೂಮಿಗೆ ತಂಪು ನೀಡುವುದಿಲ್ಲ, ಹಕ್ಕಿ ಪ್ರಾಣಿಪಕ್ಷಿಗಳಿಗೆ ಆಶ್ರಯ ನೀಡುವುದಿಲ್ಲ, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ ಇತ್ಯಾದಿ ಪರಿಸರ ಸಮಸ್ಯೆಗಳಿಗೆ ನೀಲಗಿರಿ ಕಾರಣವಾಗಿದೆ ಎನ್ನಲಾಗುತ್ತಿದೆ.

ನೀಲಗಿರಿ ನಿರ್ಮೂಲನೆ ಅಂತಿಮ ಪರಿಹಾರವೇ?: ಹಿರಿಯ ಅರಣ್ಯಾಧಿಕಾರಿ ಡಿ.ಎಸ್‌.ರವೀಂದ್ರನ್‌ ಕೋಲಾರ ಜಿಲ್ಲೆಯ ನೀಲಗಿರಿ ಬೆಳೆಯ ಕುರಿತೇ ಡಾಕ್ಟರೇಟ್‌ ಪ್ರಬಂಧ ರಚಿಸಿದ್ದು, ನೀಲಗಿರಿ ಭೂ ಮೇಲ್ಪದರದ ತೇವಾಂಶವನ್ನು ಹೀರುತ್ತದೆ. ಮಳೆ ನೀರು ಭೂಮಿಗೆ ಇಂಗಲು ಬಿಡುವುದಿಲ್ಲವೆಂಬುದು ಸರಿಯಾದರೂ, ಕೋಲಾರ ಜಿಲ್ಲೆಯ ಅಂತರ್ಜಲ ಸಮಸ್ಯೆಗೆ ನೀಲಗಿರಿ ಮಾತ್ರವೇ ಕಾರಣವಲ್ಲ. ಅಂತರ್ಜಲನ್ನು ಅಪಾಯಕಾರಿ ಮಟ್ಟದಲ್ಲಿ ದುರುಪಯೋಗಿಸಿಕೊಂಡಿದ್ದು ಕಾರಣವೆನ್ನುತ್ತಾರೆ.

Advertisement

ಆದರೂ, ನೀಲಗಿರಿಯನ್ನು ಮೊದಲ ಕಟಾವಿನ ನಂತರ ಹತ್ತು ವರ್ಷಕ್ಕೊಮ್ಮೆ ಸಂಪೂರ್ಣ ತೆರವುಗೊಳಿಸಿ, ಅದೇ ಭೂಮಿಯಲ್ಲಿ ದ್ವಿದಳ ಧಾನ್ಯಗಳನ್ನು ಕೆಲ ವರ್ಷ ಬೆಳೆದು ಮತ್ತೇ ನೀಲಗಿರಿ ಹಾಕಿದರೆ, ಭೂಮಿಯ ತೇವಾಂಶ ಮತ್ತು ಫ‌ಲವತ್ತತೆ ಕಡಿಮೆಯಾಗದು ಎಂದು ನಿರೂಪಿಸಿದ್ದಾರೆ.

ನೀಲಗಿರಿಗೆ ಜೋತು ಬಿದ್ದಿದ್ದೇಕೆ?: ಜಿಲ್ಲೆಯಲ್ಲಿ ಸಹಜವಾಗಿಯೇ ಮಳೆ ಪ್ರಮಾಣ ಕಡಿಮೆ. ಇಂತಹ ಪ್ರದೇಶದಲ್ಲಿ ರೈತರು ಮಳೆಗೆ ಕಾಯುತ್ತ ಕೂರದೆ ನೀಲಗಿರಿ ನಾಟಿ ಮಾಡಿ ಸುಮ್ಮನಾಗಿದ್ದಾರೆ. ಅರಣ್ಯ ಇಲಾಖೆಯು ಗಿಡ ನೆಟ್ಟ ಪ್ರಗತಿ ತೋರಿಸಲು ನೀಲಗಿರಿಗೆ ಮೊರೆ ಹೋಗಿದ್ದಾರೆ. ಶೂನ್ಯ ನಿರ್ವಹಣೆಯ ನೀಲಗಿರಿ ರೈತರು ಹಾಗೂ ಅರಣ್ಯ ಇಲಾಖೆ ಪ್ರೀತಿಗೆ ಪಾತ್ರವಾಗಿದೆ. ನೀಲಗಿರಿಯಿಂದ ಆದಾಯೋತ್ಪನ್ನವನ್ನು ಕಂಡು ಕೊಂಡಿದ್ದಾರೆ.

ನಿರ್ಮೂಲನೆಗೆ ಅಡ್ಡಿಯೇನು?: ಸರಕಾರ ನೀಲಗಿರಿ ತೆರವಿಗೆ ಆದೇಶ ಹೊರಡಿಸಿದೆಯಾದರೂ, ಒತ್ತಾಯ ಹಾಗೂ ಕಡ್ಡಾಯ ಮಾಡಲು ಅವಕಾಶವಿಲ್ಲದಂತಾಗಿದೆ. ನೀಲಗಿರಿ ತೆರವುಗೊಳಿಸದಿದ್ದರೆ ಸೂಕ್ತ ಕ್ರಮಕ್ಕೂ ಅವಕಾಶವಿಲ್ಲದಂತಾಗಿದೆ. ಜೊತೆಗೆ ನೀಲಗಿರಿ, ಅಕೇಷಿಯಾ ಸೇರಿದಂತೆ ಮರ ಕಡಿಯಲು ಸುಪ್ರೀಂ ಕೋರ್ಟ್‌ನ ಹಸಿರು ಮರಗಳ ಕಡಿಯಬಾರದೆಂಬ ಆದೇಶ ಅಡ್ಡಿ ಬರುತ್ತಿದೆ. ಅರಣ್ಯ ಹಾಗೂ ಸಾಮಾಜಿಕ ಅರಣ್ಯದ ನೀಲಗಿರಿ ನಿರ್ಮೂಲನೆಗೆ ವಿಶೇಷ ಅನುಮತಿ ಅತ್ಯಗತ್ಯವಾಗಿದೆ. ಒಮ್ಮೆಗೆ ಸಾವಿರಾರು ಹೆಕ್ಟೇರ್‌ ನೀಲಗಿರಿ ನಿರ್ಮೂಲನೆ ಮಾಡಿದರೆ ಮಾರುಕಟ್ಟೆ ಧಾರಣೆ ಸಿಗುವುದಿಲ್ಲ. ಆದಾಯಕ್ಕೆ ಕುತ್ತು ಎಂಬ ಭಾವನೆಯೂ ಇದೆ.

ವೃಕ್ಷೋದ್ಯಾನಗಳು: ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನೀಲಗಿರಿ ಆಕೇಷಿಯಾ ತೆರವುಗೊಳಿಸಿ 13 ಕೋಟಿ ರೂಪಾಯಿಗಳನ್ನು ಆದಾಯವನ್ನು ಪಡೆಯಲಾಗಿದೆ. ಈ ಹಣದಲ್ಲಿ ಪಂಚಾಯತ್‌ಗೆ ಸೇರಬೇಕಾಗಿದ್ದ ಶೇ.50 ರ ಭಾಗದಡಿ 5.48 ಕೋಟಿ ರೂಪಾಯಿಗಳನ್ನು ಪಂಚಾಯಿಗಳಿಗೆ ಹಂಚಿಕೆ ಮಾಡಿ ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ಅಥವಾ ಹೊಸದಾಗಿ ಅರಣ್ಯೀಕರಣ ಯೋಜನೆಗೆ ವಿನಿಯೋಗಿಸಲು ಸೂಚಿಸಲಾಗಿದೆ.

ಈಗಾಗಲೇ ಕೋಲಾರ ಜಿಲ್ಲೆಯಲ್ಲಿ 61 ಗ್ರಾಪಂ ನೆಡುತೋಪುಗಳ ನೀಲಗಿರಿ ತೆರವುಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 18 ನೆಡುತೋಪು ತೆರವುಗೊಳಿಸಲು ಅನುಮತಿ ಕೋರಲಾಗಿದೆ. ಇನ್ನುಳಿದಂತೆ 1964.43 ಹೆಕ್ಟೇರ್‌ ಪ್ರದೇಶದ 171 ನೆಡುತೋಪುಗಳನ್ನು 2022 ಸಾಲಿನೊಳಗಾಗಿ ತೆರವುಗೊಳಿಶಿ ಪರ್ಯಾಯ ಮರಗಳ ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ.

ಪರ್ಯಾಯವೇನು?: 2008ರಿಂದಲೂ ನೀಲಗಿರಿ ನಿರ್ಮೂಲನೆ ಯತ್ನಗಳು ತೆವಳುತ್ತ ಸಾಗಿವೆ. ಈವರೆಗೂ ತೆರವುಗೊಳಿಸಿರುವ ಸುಮಾರು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸ್ಥಳೀಯ ಜಾತಿಗಳಾದ ಶ್ರೀಗಂಧ, ಹೆಬ್ಬೇವು, ಮಾವು, ನೇರಳೆ, ಹೊನ್ನೆ, ಹಲಸು, ಬೇವು, ಹೊಂಗೆ ಇತ್ಯಾಗಿ ಸಸಿಗಳನ್ನು ನೆಡಲಾಗುತ್ತಿದೆ. ರೈತರು ನೀಲಗಿರಿ ತೆಗೆದು ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಹಿಪ್ಪು ನೇರಳೆ ಬೆಳೆಯಲು ಆರಂಭಿಸಿದ್ದಾರೆ. ಕೆ.ಸಿ. ವ್ಯಾಲಿ ನೀರು ಹರಿಯುವ ಸುಮಾರು 50 ಕೆರೆಗಳ ಅಂಚಿನಲ್ಲಿ ನೀಲಗಿರಿ ನಿರ್ಮೂಲನೆ ಮಾಡಿ, ವಾಣಿಜ್ಯ ಬೆಳೆ ಬೆಳೆಯಲು ರೈತರು ಆರಂಭಿಸಿದ್ದಾರೆ.

ಸರ್ಕಾರ ದ್ವಿಮುಖ ನೀತಿ: ಜಿಲ್ಲೆಯಲ್ಲಿ ಪ್ರಾದೇಶಿಕ ಅರಣ್ಯ, ಸಾಮಾಜಿಕ ಅರಣ್ಯ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಹಾಗೂ ಖಾಸಗಿಯಾಗಿ ನೀಲಗಿರಿಯನ್ನು ಬೆಳೆಯಲಾಗುತ್ತಿದ್ದು, 2008ರ ನೀಲಗಿರಿ ನಿರ್ಮೂಲನೆ ಆದೇಶದ ನಂತರ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ನೀಲಗಿರಿ ಬೆಳೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ನೀಲಗಿರಿ ನಾರು ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಮೂಲಕ ನೀಲಗಿರಿ ಬೆಳೆಯನ್ನು ಉತ್ತೇಜಿಸಲಾಗುತ್ತಿದ್ದು, ಈವರೆಗೂ ಒಂದು ಗಿಡವನ್ನು ತೆರವುಗೊಳಿಸಿಲ್ಲ. ಸರಕಾರದ ಈ ದ್ವಿಮುಖ ನೀತಿಯಿಂದಾಗಿ ಖಾಸಗಿಯಾಗಿ ಬೆಳೆದ ರೈತರು ಪೂರ್ಣ ಪ್ರಮಾಣದಲ್ಲಿ ನೀಲಗಿರಿ ನಿರ್ಮೂಲನೆಗೆ ಮುಂದಾಗುತ್ತಿಲ್ಲ.

ತೆರವಾಗಿದ್ದು ಕೇವಲ 5 ಸಾವಿರ ಹೆಕ್ಟೇರ್‌: ಪ್ರಾದೇಶಿಕ ಅರಣ್ಯ ವ್ಯಾಪ್ತಿಯ 13,400 ಹೆಕ್ಟೇರ್‌ ಪ್ರದೇಶದ ಪೈಕಿ 2613.8 ಹೆಕ್ಟೇರ್‌, ಸಾಮಾಜಿಕ ಅರಣ್ಯ ಇಲಾಖೆ 3,200 ಹೆಕ್ಟೇರ್‌ ಪೈಕಿ 1,218 ಹೆಕ್ಟೇರ್‌ ಹಾಗೂ ಖಾಸಗಿಯಾಗಿ ಬೆಳೆದಿರುವ ಒಟ್ಟು ಪ್ರಮಾಣದ ಶೇ.10 ರಷ್ಟು ಮಾತ್ರವೇ ನೀಲಗಿರಿಯನ್ನು ನಿರ್ಮೂಲನೆ ಮಾಡಲಾಗಿದೆ. ಬಿಜಿಎಂಎಲ್‌ನ 8 ಎಕರೆ ಜಾಗದ ನೀಲಗಿರಿ ತೆರವುಗೊಳಿಸಲು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ನೀಲಗಿರಿ ಸೊಂಪಾಗಿ ಬೆಳೆಯುತ್ತಲೇ ಇದೆ.

ಅರಣ್ಯ ಇಲಾಖೆ ರೈತರಿಗೆ ನರೇಗಾ ಯೋಜನೆಯಡಿ ಉಚಿತವಾಗಿ ಸಸಿ ವಿತರಿಸಿ, ಮೊದಲ 3 ವರ್ಷದ ನಿರ್ವಹಣೆಗೆ ಪ್ರತಿ ಸಸಿಗೆ 180 ರೂ. ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ರೈತರು ಸಮಗ್ರ ಕೃಷಿ ಜತೆಗೆ ಅರಣ್ಯ ಕೃಷಿ ಕೈಗೊಂಡು ವಿವಿಧ ಮರ ಬೆಳೆಸಲು ಮುಂದಾಗಬೇಕು. ಅರಣ್ಯ ಕೃಷಿ ರೈತರ ಪಾಲಿನ ಜೀವವಿಮೆ.
-ವಿ.ದೇವರಾಜ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

ಜಿಲ್ಲೆಯಲ್ಲಿ ಶೇ.33ಕ್ಕೆ ಬದಲಾಗಿ ಶೇ.4ರಷ್ಟು ಮಾತ್ರವೇ ಹಸಿರೀಕರಣ ಇರುವುದು ಆಪಾಯಕಾರಿ ಸಂಗತಿ. ಗ್ರಾಪಂ, ಶಾಲೆ, ಆಸ್ಪತ್ರೆ, ದೇವಾಲಯ, ಸ್ಮಶಾನ ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ಭೂಮಿಯಲ್ಲಿ ನೀಲಗಿರಿ ತೆರವುಗೊಳಿಸಿ ಪರಿಸರ ಸ್ನೇಹಿ ಗಿಡಗಳ ನೆಟ್ಟು ಪೋಷಣೆ ಮಾಡುವುದು ಎಲ್ಲರ ಕರ್ತವ್ಯ.
-ಕೆ.ಎನ್‌.ತ್ಯಾಗರಾಜು, ಪರಿಸರವಾದಿ

ಸುಪ್ರಿಂ ನಿರ್ದೇಶನದ ಮೇರೆಗೆ 25 ಮರಗಳಿರುವ ಭೂಮಿ ಅರಣ್ಯ ಎಂದೇ ಪರಿಗಣಿಸಬೇಕಾಗುತ್ತದೆ. ನೀಲಗಿರಿ ತೆರವಿನ ನಂತರ ಭೂಮಿ ಒತ್ತುವರಿಯಾಗದಂತೆ, ವಿವಿಧ ಜಾತಿ ಸಸಿ ನೆಟ್ಟು ಪೋಷಣೆಗೆ ಬಜೆಟ್‌ನಲ್ಲಿ ಅನುದಾನ ನೀಡಬೇಕು. ಜತೆಗೆ ಸ್ಥಳೀಯ ಮರಗಳನ್ನೇ ಬೆಳೆಸಲು ಆದ್ಯತೆ ನೀಡಬೇಕು.
-ಎಚ್‌.ಎ.ಪುರುಷೋತ್ತಮ್‌, ಪರಿಸರ ಲೇಖಕ

* ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next