ಮುದಗಲ್ಲ: ಕಳೆದ ಒಂದು ತಿಂಗಳಿಂದ ನಿರಂತರ ಸುರಿದ ಭಾರೀ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಈರುಳ್ಳಿ ಬೆಳೆಗೆ ರೋಗಬಾಧೆ ಕಾಣಿಸಿಕೊಂಡಿದ್ದು, ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಈರುಳ್ಳಿ ಸಸಿ ನಾಟಿ ಮಾಡಿದಾಗಿನಿಂದಲೂ ಆಗಾಗ ಸುರಿಯುವ ಜಿಟಿಜಿಟಿ ಮಳೆ, ಮೋಡ ಮುಸುಕಿದ ವಾತಾವರಣದ ಪರಿಣಾಮ ಈರುಳ್ಳಿ ಬೆಳೆಗೆ ಸೂರ್ಯನ ಕಿರಣಗಳೇ ತಾಗಿಲ್ಲ. ಇದರಿಂದ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆ ಕಾಣಿಸಿಕೊಂಡಿದೆ.
ಈರುಳ್ಳಿ ನಾಟಿ ಮಾಡಿ ಸುಮಾರು ಒಂದೆರಡು ತಿಂಗಳು ಕಳೆದಿದೆ. ಆರಂಭದಲ್ಲಿ ಚೆನ್ನಾಗಿಯೇ ಬಂದ ಈರುಳ್ಳಿ ಬೆಳೆಗೆ ಮಳೆರಾಯ ಕಂಟಕವಾಗಿದ್ದಾನೆ. ವಿಶೇಷವಾಗಿ ಕನ್ನಾಳ, ಉಳಿಮೇಶ್ವರ, ಪಿಕಳಿಹಾಳ, ಬನ್ನಿಗೋಳ, ಆಮದಿಹಾಳ,ನಾಗಲಾಪುರ, ಛತ್ತರ, ಹಡಗಲಿ, ಕುಮಾರಖೇಡ, ಕಿಲಾರಹಟ್ಟಿ, ಆಶಿಹಾಳ ಸೇರಿದಂತೆ ಹಲವೆಡೆ ಈರುಳ್ಳಿ ಬೆಳೆಯಲ್ಲಿ ಕೀಟಗಳು ಕೂಡ ಕಾಣಿಸಿಕೊಂಡಿವೆ. ಇದರಿಂದ ಈರುಳ್ಳಿ ಗರಿಗಳ ಮೇಲೆ ಬಿಳಿಚುಕ್ಕಿ, ಗರಿ ಮುದುಡಿ ಬೀಳುವುದು, ಬಿಳಿ-ಹಳದಿ ಬಣ್ಣಕ್ಕೆ ತಿರುಗುವುದು. ಕೆಲವು ಈರುಳ್ಳಿ ಗರಿ ತುಂಡರಿ ನೆಲಕ್ಕೆ ಬೀಳುತ್ತಿದೆ.
ಇದರಿಂದ ಈರುಳ್ಳಿ ಇಳುವರಿ ಕುಸಿತವಾಗುವ ಭೀತಿ ಎದುರಾಗಿದೆ ಎಂದು ಕನ್ನಾಳ ಗ್ರಾಮದ ಅಮರಪ್ಪ ಆತಂಕ ವ್ಯಕ್ತಪಡಿಸುತ್ತಾರೆ. ರೋಗ ಹತೋಟಿಗೆ ಕೀಟನಾಶಕ ಸಿಂಡಿಸಿದರೂ ಪ್ರಯೋಜನವಾಗುತ್ತಿಲ್ಲ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಈರುಳ್ಳಿ ಬೆಳೆ ರಕ್ಷಣೆಗೆ ಸಲಹೆ ನೀಡಬೇಕೆಂದು ಉಳಿಮೇಶ್ವರ ಗ್ರಾಮದ ಯಂಕಪ್ಪ ಮತ್ತು ಭೀಮಪ್ಪ ಆಗ್ರಹಿಸಿದ್ದಾರೆ.
ಲಿಂಗಸುಗೂರು ಮತ್ತು ಮಸ್ಕಿ ತಾಲೂಕಿನ ಕೆಲ ಭಾಗ ಈರುಳ್ಳಿ ಬೆಳೆಗೆ ಪ್ರಮುಖವಾಗಿದೆ. ಪ್ರತಿ ವರ್ಷ 2000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಆದರೆ ಕಳೆದ ವರ್ಷ ಈರುಳ್ಳಿ ದರ ಕುಸಿತ ಮತ್ತು ಕೊರೊನಾ ಲಾಕ್‌ಡೌನ್ ಪರಿಣಾಮದಿಂದ ಈ ಬಾರಿ ರೈತರು ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದಾರೆ.
50 ಸಾವಿರ ಖರ್ಚು: ಎಕರೆಯೊಂದಕ್ಕೆ ಈರುಳಿ ಸಸಿ ನಾಟಿ ಮಾಡಲು 50 ಸಾವಿರ ರೂ. ಖರ್ಚು ತಗಲುತ್ತದೆ. ಇತ್ತ ಬೆಳೆಯೂ ಚೆನ್ನಾಗಿ ಬರುತ್ತಿಲ್ಲ, ರೋಗವೂ ಹತೋಟಿಗೆ ಬರುತ್ತಿಲ್ಲ. ಈ ಹಂತದಲ್ಲಿ ರೈತರಿಗೆ ನಷ್ಟವಾದರೆ ಆರ್ಥಿಕವಾಗಿ ಚೇತರಿಸಿಕೊಳ್ಳುವುದು ತುಂಬ ಕಷ್ಟ ಎಂದು ರಾಮಪ್ಪನ ತಾಂಡಾ ಈರುಳ್ಳಿ ಬೆಳೆಗಾರ ರಾಜು ಅಳಲು ತೋಡಿಕೊಳ್ಳುತ್ತಾರೆ.
ಅಧಿಕಾರಿಗಳಿಂದ ಸಲಹೆ
ಈರುಳ್ಳಿ ರೋಗ ಹತೋಟಿಗೆ ಮತ್ತು ಬಿಳಿ ಚುಕ್ಕಿ ನಿಯಂತ್ರಣಕ್ಕೆ ಕ್ಲೋರೋಥಲೋನಿಲ್ ಹಾಗೂ ಮ್ಯಾಂಕಿಜಿಪ್ ಔಷಧ ಸಿಂಪಡಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ. ತಂಪು ಮತ್ತು ಮೋಡ ಕವಿದ ವಾತಾವರಣಕ್ಕೆ ಕಪ್ಪು ಭೂಮಿಯಲ್ಲಿ ಬೆಳೆದ ಈರುಳ್ಳಿಗೆ ರೋಗ ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈರುಳ್ಳಿ ಗರಿಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಕ್ರಿಮಿಕೀಟಗಳ ನಿಯಂತ್ರಣಕ್ಕೆ ಶಿಲೀಂಧ್ರ ನಾಶಕದೊಂದಿಗೆ ಇತರೆ ಕೀಟನಾಶ
ಬಳಸಬೇಕು ಎಂದು ಲಿಂಗಸುಗೂರು ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಶೇಖರ ತಿಳಿಸಿದ್ದಾರೆ.
*ದೇವಪ್ಪ ರಾಠೊಡ