ಇಂಡಿ: ರೈತರು ಹಲವಾರು ಆಸೆ-ನಿರೀಕ್ಷೆ ಇಟ್ಟುಕೊಂಡು ಮೆಣಸಿನ ಬೆಳೆ ನಾಟಿ ಮಾಡಿದ್ದಾರೆ. ಆದರೆ ಮೆಣಸಿನ ಸಸಿಗಳಿಗೆ ಆವರಿಸಿದ ರೋಗಬಾಧೆಯಿಂದ ರೈತರ ನಿರೀಕ್ಷೆಗಳೆಲ್ಲ ಬುಡಮೇಲಾಗಿದ್ದು, ಅನ್ನದಾತರಿಗೆ ಮೆಣಸಿನಕಾಯಿ ಘಾಟು ಬಡಿದಿದೆ.
ಇತ್ತೀಚೆಗೆ ಭೀಮಾ ತೀರದ ಭಾಗದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದು ಅನೇಕ ರೈತರು ಆರ್ಥಿಕವಾಗಿ ಸಬಲರಾಗಿ ಸ್ಥಿತಿವಂತರಾಗಿದ್ದರು. ಹೀಗಾಗಿ ಪ್ರಸಕ್ತ ವರ್ಷವೂ ಸಾವಿರಾರು ರೈತರು ಹಲವು ಆಸೆಯನ್ನಿಟ್ಟುಕೊಂಡು ಮೆಣಸಿನಕಾಯಿ ಬೆಳೆದಿದ್ದು, ರೋಗಬಾಧೆ ಹೊಡೆತಕ್ಕೆ ನಲುಗಿದ್ದಾರೆ.
ಇಂಡಿ ತಾಲೂಕಿನ ಆಳೂರ, ಪಡನೂರ, ಬರಗುಡಿ, ಅಹಿರಸಂಗ, ಇಂಗಳಗಿ, ಸಾತಪುರ, ಮಾವಿನಹಳ್ಳಿ, ಅಗರಖೇಡ ಸೇರಿದಂತೆ ಸಂಗೋಗಿ, ಶಿರಶ್ಯಾಡ, ಸಾಲೋಟಗಿ, ನಾದ ಮತ್ತಿತರ ಗ್ರಾಮಗಳಲ್ಲಿ ಮೆಣಸಿನ ಸಸಿ ನಾಟಿ ಮಾಡಿದ್ದಾರೆ. ಆದರೆ ಮೆಣಸಿನ ಸಸಿಗಳಿಗೆ ತಾಮ್ರ ಹಾಗೂ ಸಿಡಿ, ಬೆಂಕಿ ರೋಗ ಸೇರಿದಂತೆ ಇತರ ರೋಗಗಳು ಆವರಿಸುತ್ತಿದ್ದು, ಸಸಿಗಳು ಒಣಗುತ್ತಿವೆ. ಸಸಿ ಮೇಲಿನ ಎಲೆಗಳು ತಾಮ್ರದ ಬಣ್ಣಕ್ಕೆ ತಿರುಗಿ ಕಾಂಡಗಳೆಲ್ಲ ನೆಲಕ್ಕುರುಳುತ್ತಿವೆ. ರೈತರು ಸಾಕಷ್ಟು ಔಷಧೋಪಚಾರ ಮಾಡಿದರೂ ರೋಗ ಮಾತ್ರ ಹತೋಟಿಗೆ ಬಾರದಿರುವುದು ಅನ್ನದಾತರನ್ನು ಅಕ್ಷರಶಃ ಚಿಂತೆಗೀಡು ಮಾಡಿದೆ.
ಸಾವಿರಾರು ರೂ. ವ್ಯಯಿಸಿ ಮೆಣಸಿನಕಾಯಿ ಬೆಳೆದ ರೈತರು ರೋಗಬಾಧೆಯಿಂದ ದಿಕ್ಕು ತೋಚದಂತಾಗಿದ್ದು, ಸಂಬಂಧಿಸಿದ ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರ ಜಮೀನಿಗೆ ಭೇಟಿ ನೀಡಿ, ಇಲಾಖೆ ಸೌಲಭ್ಯ-ಸಲಹೆ ನೀಡಿ ರೈತಾಪಿ ವರ್ಗದಲ್ಲಿ ಧೈರ್ಯ ತುಂಬಬೇಕಿದೆ. ಅಲ್ಲದೇ ಕೇಂದ್ರ-ರಾಜ್ಯ ಸರ್ಕಾರಗಳು ಕೃಷಿ ಇಲಾಖೆ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ವಿಶೇಷ ಸಹಾಯಧನದ ಅಡಿಯಲ್ಲಿ ಸಹಾಯ ಮಾಡಬೇಕೆನ್ನುವ ಕೂಗು ರೈತಾಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಹಸಿರು ಪಟಾಕಿಗಳಿಂದಲೂ ಕಣ್ಣಿಗೆ ಹಾನಿ
ನಾನು ಸುಮಾರು2ಎಕರೆಪ್ರದೇಶದಲ್ಲಿ ಮೆಣಸಿನ ಸಸಿ ನಾಟಿ ಮಾಡಿದ್ದೇನೆ.ಬೆಳೆ ಕೈಗೆ ಬರುವ ಮುಂಚೆ ರೋಗಬಿದ್ದಿದೆ. ಲಕ್ಷಾಂತರ ರೂ.ಖರ್ಚು ಮಾಡಿ ಔಷಧೋಪಚಾರ ಮಾಡಿದರೂ ರೋಗದ ಲಕ್ಷಣಗಳು ಕಡಿಮೆಯಾಗುತ್ತಿಲ್ಲ. ಸರ್ಕಾರ ಮೆಣಸಿನಕಾಯಿ ಬೆಳೆಗಾರರ ನೆರವಿಗೆ ಬರಬೇಕು.
-ಮಲ್ಲಕಪ್ಪ ಜಕ್ಕಪ್ಪ ಬೇವನೂರ, ಬೆಳೆಗಾರ, ಆಳೂರ ಗ್ರಾಮ
ಮೆಣಸಿನ ಕಾಯಿ ಬೆಳೆ ಸರಿಯಾಗಿ ಬಂದರೆ ಸುಮಾರು ಒಂದು ಎಕರೆಗೆ 6 ರಿಂದ 8 ಕ್ವಿಂಟಲ್ ಇಳುವರಿ ಬರುತ್ತದೆ. ಆದರೆ ಈ ರೋಗಗಳಿಂದ ¸ ಸಂಪೂರ್ಣ ನಾಶವಾಗಿದೆ. ಇದರಿಂದ ಪ್ರತಿ ಎಕರೆಗೆ ಬರಬೇಕಿದ್ದ 2 ಲಕ್ಷಕ್ಕಿಂತ ಅಧಿಕ ಆದಾಯ ಕೈ ತಪ್ಪಿದೆ.
-ಎಸ್.ಆರ್.ಬಿರಾದಾರ, ರೈತ, ಶಿರಶ್ಯಾಡ ಗ್ರಾಮ
-ಯಲಗೊಂಡ ಬೇವನೂರ