Advertisement

ಶಾಲೆಗಳಲ್ಲಿ ಬೋಸ್‌ ದಿನ ಆಚರಿಸಲು ಸರ್ಕಾರದ ಜತೆ ಚರ್ಚೆ

12:16 PM Feb 26, 2017 | |

ಕೆಂಗೇರಿ: ಜನವರಿ 23ರ ಸುಭಾಷ್‌ಚಂದ್ರ ಬೋಸ್‌ ಅವರ ಹುಟ್ಟುಹಬ್ಬವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಚರಿಸುವ ಕುರಿತು ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಮೇಯರ್‌ ಜಿ ಪದ್ಮಾವತಿ ಹೇಳಿದ್ದಾರೆ. 

Advertisement

ರಾಜರಾಜೇಶ್ವರಿ ನಗರದ ಸುಭಾಷ್‌ ಭವನದಲ್ಲಿ ಶನಿವಾರದಿಂದ ಆರಂಭವಾದ “3ನೇ ಅಖೀಲ ಭಾರತ ನೇತಾಜಿ ಸುಭಾಷ್‌ ಕ್ರಾಂತಿ ಸಮ್ಮೇಳನ’ ಉದ್ಘಾಟಸಿ ಮಾತನಾಡಿದ ಅವರು “ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮ ದಿನವನ್ನು ದೇಶ ಪ್ರೇಮದ ದಿನವನ್ನಾಗಿ ಆಚರಿಸುವ ಮೂಲಕ ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕಿದೆ. 

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಮಡಿದ ಎಲ್ಲಾ ಚೇತನಗಳನ್ನು ಸ್ಮರಿಸುವುದು ಮತ್ತು ಹೋರಾಟಗಾರರ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ,” ಅವರು ಹೇಳಿದರು. ನೇತಾಜಿ ಸುಭಾಷ್‌ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹು ಅಭಿವೃದ್ಧಿ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಎಂ.ರಾಜ್‌ಕುಮಾರ್‌ ಮಾತನಾಡಿ, “ಬೋಸ್‌ ಹುಟ್ಟು ಹಬ್ಬವನ್ನು ದೇಶ ಪ್ರೇಮ್‌ ದಿವಸವನ್ನಾಗಿ ಆಚರಿಸಬೇಕು.

ನ್ಯಾ. ಮುಖರ್ಜಿ ವಿಚಾರಣೆ ಆಯೋಗದ ವರದಿಯನ್ನು ಲೋಕಸಭೆ ಹಾಗೂ ರಾಜ್ಯ ಸಭೆಯಲ್ಲಿ ಮಂಡಿಸಿ ಚರ್ಚೆಗೆ ಒಳಪಡಿಸಬೇಕು. ನೇತಾಜಿಯವರ ಜೀವನ ಚರಿತ್ರೆ,  ಆಜಾದ್‌ ಹಿಂದ್‌ ಬ್ಯಾಂಕ್‌ ರಚನೆ ಹಾಗೂ ಐಎನ್‌ಎ ಸೈನ್ಯ ಅದರ ಹೋರಾಟವನ್ನು ಪಠ್ಯದಲ್ಲಿ ಸೇರಿಸಬೇಕು,” ಎಂದರು. ಎರಡು ದಿನ ನಡೆಯುವ ಸಮ್ಮೇಳನದಲ್ಲಿ ದೇಶದ ಹದಿನಾಲ್ಕು ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. 

“ನೇತಾಜಿ ಸುಭಾಷ್‌ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹು ಅಭಿವೃದ್ಧಿ ಟ್ರಸ್ಟ್‌’ನ ಅಧ್ಯಕ್ಷ ಜಿ.ಆರ್‌.ಶಿವಶಂಕರ್‌, ಪಂಜಾಬ್‌ನ ನೇತಾಜಿ ರೀಸರ್ಚ್‌ ಪೌಂಡೇಷನ್‌ ಅಧ್ಯಕ್ಷ ವಿ.ಪಿ.ಸೈನಿ, ರಾಣಿ ಝಾನ್ಸಿ ರೆಜಿಮೆಂಟ್‌ ಐಎನ್‌ಎ ಸದಸ್ಯ ತಮಿಳುನಾಡಿನ ಸರಸ್ವತಿ ರಾಜಾಮಣಿ, ನಗರ ಸಭೆ ಮಾಜಿ ಸದಸ್ಯ ಮಂಜು, ಟ್ರಸ್ಟ್‌ನ ರಾಜಯೋಗಿಂದ್ರ ವೀರಯ್ಯ ಸ್ವಾಮಿ ಶಾಸಿಮಠ ಗುರೂಜಿ. ಮತ್ತಿತರರು ಉಪಸ್ಥಿತರಿದ್ದರು.

Advertisement

ನನ್ನ ಅಪ್ಪನೂ ಸ್ವಾತಂತ್ರ್ಯ ಹೋರಾಟಗಾರ 
“ನಮ್ಮ ತಂದೆಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ 2 ವರ್ಷ 9 ತಿಂಗಳು ಜೈಲು ವಾಸ ಅನುಭವಿಸಿದ್ದರು. ಅವರ ಹೋರಾಟವನ್ನು ಕೇಳುವಾಗ ನಾಮಗೆಲ್ಲ ರೋಮಾಂಚನವಾಗುತ್ತದೆ. ಪ್ರತಿ ವರ್ಷ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಜ್ಯಪಾಲರು ಔತಣ ಕೂಟ ಏರ್ಪಡಿಸುತ್ತಿದ್ದರು.

ನಮ್ಮ ತಂದೆಯವರ ಜೊತೆಯಲ್ಲಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ಸ್ವಾತಂತ್ರ್ಯ ಹೋರಾಟಗಾರರನ್ನು ನೋಡುವುದು ನನ್ನ ಪಾಲಿಗೆ ಸೌಭಾಗ್ಯವಾಗಿತ್ತು,” ಎಂದು ಮೇಯರ್‌ ಜಿ ಪದ್ಮಾವತಿ ಹೇಳಿದರು.  ಬಿಎನ್‌ಪಿ 9  ರಾಜರಾಜೇಶ್ವರಿ ನಗರದ ಸುಭಾಷ್‌ ಭವನದಲ್ಲಿ ಶನಿವಾರ ಆರಂಭವಾ 3ನೇ ಅಖೀಲ ಭಾರತ ನೇತಾಜಿ ಸುಭಾಷ್‌ ಕ್ರಾಂತಿ ಸಮ್ಮೇಳನದಲ್ಲಿ ರಾಣಿ ಝಾನ್ಸಿ ರೆಜಿಮೆಂಟ್‌ ಐಎನ್‌ಎ ಸದಸ್ಯ ತಮಿಳುನಾಡಿನ ಸರಸ್ವತಿ ರಾಜಾಮಣಿರವರನ್ನು ಮೇಯರ್‌ ಜಿ.ಪದ್ಮಾವತಿ ಸನ್ಮಾನಿಸದರು.

ಪಂಜಾಬ್‌ನ ನೇತಾಜಿ ರೀಸರ್ಚ್‌ ಪೌಂಡೇಷನ್‌ ಅಧ್ಯಕ್ಷ ವಿ.ಪಿ.ಸೈನಿ, ನೇತಾಜಿ ಸುಭಾಷ್‌ಚಂದ್ರ ಬೋಸ್‌ ಸಂಶೋಧನಾ ಮತ್ತು ಬಹು ಅಭಿವೃದ್ಧಿ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಎಂ.ರಾಜ್‌ಕುಮಾರ್‌, ಅಧ್ಯಕ್ಷ ಜಿ.ಆರ್‌.ಶಿವಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next