Advertisement
ಭಾರತದ ಮಟ್ಟಿಗೆ ಎನ್‌ಇಪಿಯಲ್ಲಿ ವಿಶೇಷವಿಲ್ಲ! ವಾಸ್ತವದಲ್ಲಿ ಭಾರತಕ್ಕೆ ಎನ್‌ಇಪಿ ಹೊಸತಲ್ಲ!ಏಕೆಂದರೆ ನಮ್ಮ ಪುರಾತನ ತಕ್ಷಶಿಲಾ, ನಳಂದ ವಿವಿಗಳ ಕಾಲದಲ್ಲಿ ಏನಿತ್ತೋ ಅದನ್ನೆ ಪುನರುಜ್ಜೀವನಗೊಳಿಸಿದ್ದೇವೆ. ಆ ಕಾಲದಲ್ಲಿ ಹೇಗೆ ಸಮಗ್ರ ಶಿಕ್ಷಣ ವ್ಯವಸ್ಥೆಯಿತ್ತೋ ನಾವು ಈಗ ಮತ್ತೆ ಅಂತಹ ವ್ಯವಸ್ಥೆಯನ್ನು ಮರುಪರಿಚ ಯಿಸುತ್ತಿದ್ದೇವೆ. ಆ ಕಾಲದಲ್ಲಿ ಅಂದರೆ ಸಾವಿರ ವರ್ಷದ ಹಿಂದೆ ಎಲ್ಲ ದೇಶಗಳು ನಮ್ಮನ್ನು ನೋಡುತ್ತಿದ್ದವು. ಇದಕ್ಕೆ ಕಾರಣ ಆಗ ನಮ್ಮಲ್ಲಿ ಕೌಶಲ, ಮಾಹಿತಿ, ಸ್ಮರಣ ಶಕ್ತಿ ಆಧಾರಿತ ಶಿಕ್ಷಣವಿತ್ತು. ಜತೆಗೆ ಯೋಗ, ವ್ಯಾಯಾಮ, ಕತ್ತಿವರಸೆ, ಕುದುರೆ ಸವಾರಿ, ಕುಸ್ತಿ, ಬಿಲ್ಲುಗಾರಿಕೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೆ ಲ್ಲವೂ ಶಿಕ್ಷಣದ ಭಾಗವಾಗಿದ್ದವು. ಇದೆಲ್ಲ ಇದ್ದ ಶಿಕ್ಷಣ ವ್ಯವಸ್ಥೆ ಹೊಂದಿದ್ದಾಗ ನಾವು ವಿಶ್ವದ ಅಗ್ರ ದೇಶವಾಗಿದ್ದೆವು. ನಮ್ಮ ಮಾದರಿಯನ್ನು ಕಾಪಿ ಮಾಡಿದ ಉಳಿದ ದೇಶಗಳು ಈಗ ನಮ್ಮಿಂದ ಮುಂದೆ ಹೋಗಿವೆ. ಎನ್‌ಇಪಿ ಜಾರಿಯ ಮೂಲಕ ನಾವು ಹಿಂದೆ ನಮ್ಮನ್ನು ವಿಶ್ವ ಶ್ರೇಷ್ಠ ದೇಶವನ್ನಾಗಿ ರೂಪಿಸಿದ್ದ ಶಿಕ್ಷಣ ಮಾದರಿಯನ್ನು ಮರು ಜಾರಿಗೊಳಿಸುತ್ತಿದ್ದೇವೆ.
ಎನ್‌ಇಪಿ ಸ್ಥಳೀಯ ಭಾಷೆಗೆ ಅತ್ಯಂತ ಪ್ರಾಮುಖ್ಯ ನೀಡುತ್ತದೆ. ಆದರೆ ಎನ್‌ಇಪಿ ತಾಯಿ ನುಡಿಯನ್ನು ನಿರಾಕರಿಸುತ್ತದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಬೇರೆ ದೇಶಗಳು ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡಿದ್ದರಿಂದ ಮುಂದುವರಿದಿವೆ ಎಂಬುದನ್ನು ಎನ್‌ಇಪಿ ಅರ್ಥ ಮಾಡಿಕೊಂಡಿದೆ. ಎನ್‌ಇಪಿಯನ್ನು ಪ್ರಾಥಮಿಕ ಶಾಲೆಯಿಂದ ಶುರುಮಾಡಿದರೆ ಅದು ಉನ್ನತ ಶಿಕ್ಷಣಕ್ಕೆ ಬರಲು 20 ವರ್ಷ ಬೇಕಾಗುತ್ತದೆ. ಆ 20 ವರ್ಷದಲ್ಲಿ ಬೇರೆ ದೇಶಗಳು ಎಷ್ಟು ಮುಂದೆ ಹೋಗಿರುತ್ತವೆ? ಆಗ ನಾವು ಔಟ್ ಡೇಟೆಡ್ ಆಗುತ್ತೇವೆ. ಆದ್ದರಿಂದ ಎನ್‌ಇಪಿ ಏಕಕಾಲದಲ್ಲಿ ಎಲ್ಲ ವರ್ಗದಲ್ಲಿ ಪ್ರಾರಂಭಗೊಳ್ಳಬೇಕು. ಬೇರೆ ದೇಶಗಳಲ್ಲಿ ಏಕಕಾಲದಲ್ಲಿ ಶಿಕ್ಷಣ ನೀತಿ ಜಾರಿಯಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಎನ್‌ಇಪಿ ಜಾರಿಗೊಳಿಸಲು ಅಂಗನವಾಡಿಯನ್ನು ಬಲಿಷ್ಠಗೊಳಿಸಿದರೆ ಸಾಕು.
Related Articles
Advertisement
ಈಗ ಓದಿರುವ ಬಹುತೇಕ ವಿಜ್ಞಾನಿಗಳು ಸರಕಾರಿ ಶಾಲೆಗಳಿಂದ ಬಂದವರು. ವಿಶ್ವೇಶ್ವರಯ್ಯ, ಸಿಎನ್‌ಆರ್ ರಾವ್ ಸರಕಾರಿ, ಸಾಮಾನ್ಯ ಶಾಲೆಯಲ್ಲೇ ಓದಿದವರು. ನಮ್ಮ ಸರಕಾರಿ ಶಾಲೆಗಳು ಚೆನ್ನಾಗಿವೆ. ಉತ್ತಮ ಸೌಲಭ್ಯ, ಅರ್ಹ ಶಿಕ್ಷಕರಿದ್ದಾರೆ. ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಯಲ್ಲೇ ಎನ್‌ಇಪಿಯನ್ನು ಉತ್ತಮವಾಗಿ ಜಾರಿಗೊ ಳಿಸಬಹುದು. ಎನ್‌ಇಪಿಗೆಂದು ಬೇರೆಯೇ ಹುದ್ದೆಗಳನ್ನು ಸೃಜಿಸುವ ಅಗತ್ಯವಿಲ್ಲ. ನಮ್ಮ ಇಸ್ರೋದ ವಿಜ್ಞಾನಿಗಳು ರಾಕೆಟ್ ಉಡಾವಣೆ ಮಾಡುತ್ತಾರೆ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ಆಗುವುದಿಲ್ಲ ಎಂದರೆ ಏನರ್ಥ? ಶಿಕ್ಷಕರ ತರಬೇತಿ ರಾಕೆಟ್ ಸೈನ್ಸ್‌ಗಿಂತ ಕಠಿನವೇ? 4 ವರ್ಷದ ಹಾನರ್ ಪದವಿ ಹಿಂದೆಯೂ ಇತ್ತು. ಯುವಿಸಿಇಯಲ್ಲಿ ನಾವು 2016ರಲ್ಲೇ ಬಿಎಸ್‌ಸಿ ಹಾನರ್ ಜಾರಿಗೊಳಿಸಿದ್ದೇವೆ. ಸಂಶೋಧನೆಗೆ ಆಸಕ್ತಿ ಇರುವವರು 4 ವರ್ಷದ ಪದವಿ ಓದುತ್ತಾರೆ. ಇಲ್ಲದಿದ್ದರೆ 3 ವರ್ಷಕ್ಕೆ ಪದವಿ ಮುಗಿಸುತ್ತಾರೆ. ಇದರಿಂದ ಯಾರಿಗೆ ತೊಂದರೆಯಾಗು ತ್ತದೆ? ಅಂತಾರಾಷ್ಟ್ರೀಯ ಒಪ್ಪಂದಗಳು ನಡೆದರೆ ನಮ್ಮ ವಿವಿಯಲ್ಲಿ 2 ವರ್ಷ ಪದವಿ ಓದಿ ಬಳಿಕ 2 ವರ್ಷ ಬೇರೆ ದೇಶದ ವಿವಿಯಲ್ಲಿ ಪದವಿ ಪಡೆಯುವ ಅವಕಾಶವಿದೆ. ಗ್ಲೋಬಲ್ ಟ್ರಾನ್ಸ್‌ಫರೇಬಲ್ ಕ್ರೆಡಿಟ್ ಸಿಸ್ಟಂ ಬರುತ್ತದೆ. ನಾವು ಎಸ್‌ಇಪಿ ಮಾಡಿದರೆ ನಮ್ಮ ವಿದ್ಯಾರ್ಥಿಗಳು ರಾಜ್ಯದ ವಿವಿಗೆ ಸೀಮಿತಗೊಳ್ಳುತ್ತಾರೆ.
ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಕೇಂದ್ರದ ಮಾತೇ ಅಂತಿಮವಾಗುತ್ತದೆ. ಕೇಂದ್ರ ಪಠ್ಯಕ್ರಮದ ಖಾಸಗಿ ಶಾಲೆಗಳು, ಸ್ವಾಯತ್ತ ಕಾಲೇಜುಗಳು ಎನ್‌ಇಪಿ ಪಾಲಿ ಸುತ್ತವೆ. ಅಂತಿಮವಾಗಿ ರಾಜ್ಯದ ಸರಕಾರಿ ಶಾಲೆಗಳಲ್ಲಿ ಕಲಿ ಯುತ್ತಿರುವ ಬಡ ಮಕ್ಕಳು ಅತ್ಯಾಧುನಿಕ ಶಿಕ್ಷಣದಿಂದ ವಂಚಿತರಾಗುತ್ತಾರೆ. ಎನ್‌ಇಪಿಯನ್ನು ಇನ್ನಷ್ಟು ಸುಧಾರಣೆ ತರಲು ರಾಜ್ಯ ಸರಕಾರ ಪ್ರಯತ್ನ ನಡೆಸಲಿ. ಎನ್‌ಇಪಿಯಲ್ಲಿ ಇನ್ನಷ್ಟು ಸುಧಾರಣೆಗೆ ಅವಕಾಶವಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲೆರಡು ವರ್ಷದಲ್ಲಿ ಸರ್ಟಿಫಿಕೆಟ್ ಕೊಡುವುದು ಸರಿಯಾಗಲಾರದು. ಟ್ರಸ್ಟ್‌ಗಳ ವಿಲೀನಕ್ಕೆ ಅವಕಾಶ ಇರುವುದರ ಬಗ್ಗೆ ತುಸು ಗೊಂದಲವಿದೆ.
ಕೆ. ಆರ್. ವೇಣುಗೋಪಾಲ್, ಬೆಂವಿವಿ ಮಾಜಿ ಕುಲಪತಿ
ಎನ್‌ಇಪಿ ಸಂವಿಧಾನದ ಬುನಾದಿಯಲ್ಲಿ ರಚನೆಯಾಗಿಲ್ಲ
ಯಾವುದೇ ನೀತಿಯನ್ನು ಜಾರಿಗೊಳಿಸುವಾಗ ಸಂವಿಧಾನವನ್ನು ಪ್ರಮಾಣೀಕರಿಸಿದ ಚೌಕಟ್ಟು ಎಂದು ಪರಿಗಣಿಸುತ್ತೇವೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಾವು ನೀತಿ ಗಳನ್ನು ರೂಪಿಸಬೇಕು. ನಮ್ಮ ಹಿಂದಿನೆಲ್ಲ ಶಿಕ್ಷಣ ನೀತಿಯಲ್ಲಿ ಸಂವಿಧಾನವನ್ನು ಬುನಾದಿಯನ್ನಾಗಿ ಇಟ್ಟುಕೊಳ್ಳಲಾಗಿತ್ತು. ಶಿಕ್ಷಣ ನೀತಿ ಏಕೆ ಎಂಬ ಪ್ರಶ್ನೆ ಬಂದಾಗ ನಮ್ಮ ಸಂವಿ ಧಾನದಲ್ಲಿ ನಮ್ಮ ದೇಶವನ್ನು ಹೇಗೆ ಕಟ್ಟಬೇಕು (ಸಂವಿ ಧಾನದ ಪ್ರಸ್ತಾವನೆಯಲ್ಲಿರುವ ಅಂಶಗಳು) ಎಂದು ಹೇಳಲಾಗಿತ್ತೋ, ಏನನ್ನು ಸಾಧಿಸಬೇಕು ಎಂದು ಸೂಚಿಸ ಲಾಗಿತ್ತೋ, ಯಾವ ಅಂಶದ ಆಧಾರದಲ್ಲಿ ದೇಶ ಕಟ್ಟ ಬೇಕು ಎಂಬ ಇರಾದೆ ವ್ಯಕ್ತಪಡಿಸಲಾಗಿತ್ತೋ ಅದನ್ನು ಸಾಕಾರಗೊಳಿಸಲು ಎಂಬ ಉತ್ತರ ಸಿಗುವಂತಿರಬೇಕು. ಆದರೆ ಎನ್‌ಇಪಿಯನ್ನು ಸಂವಿಧಾನವನ್ನು ಆಧರಿಸಿ, ಸಂವಿಧಾನದ ಆಶಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿಲ್ಲ. 1986ರ ಶಿಕ್ಷಣ ನೀತಿಯನ್ನು ಸಂವಿಧಾನದ ತಳಹಾದಿಯಲ್ಲೇ ರೂಪಿಸುತ್ತೇವೆ ಎಂದು ಹೇಳಲಾಗಿತ್ತು. ಆದರೆ ಎನ್‌ಇಪಿಯಲ್ಲಿ ಇಂತಹ ಪ್ರಸ್ತಾವನೆ ಇಲ್ಲ. ಶಿಕ್ಷಣದ ಹೂಡಿಕೆಯ ವಿಷಯಕ್ಕೆ ಬಂದಾಗ ಪರೋಪಕಾರಿಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಬಂಡವಾಳ ಹೂಡುವಂತೆ ಮಾಡಬೇಕು ಎಂದು ಎನ್‌ಇಪಿ ಹೇಳುತ್ತದೆ. ಆದರೆ ಶಿಕ್ಷಣವೇ ಹೂಡಿಕೆ ಎಂಬುದನ್ನು ಎನ್‌ಇಪಿ ಮರೆಯುತ್ತದೆ.
ಶಿಕ್ಷಣ ಎಂಬುದು ಸಾಮಾಜಿಕ ಪರಿವರ್ತನೆಗೆ ದಾರಿಯಾಗಬೇಕು. ಉದ್ಯೋಗ, ಕೌಶಲ ಎಂಬುದು ಅದರ ಸಣ್ಣ ಉತ್ಪನ್ನವಷ್ಟೆ. ಮಕ್ಕಳನ್ನು ಹೆಚ್ಚು ಮಾನವೀಯ ಮನುಷ್ಯರನ್ನಾಗಿ ರೂಪಿಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು. ಆದರೆ ಪರೀಕ್ಷೆಗಾಗಿ ಮಕ್ಕಳನ್ನು ರೂಪಿಸುವುದು, ಹೆಚ್ಚು ಅಂಕ ಪಡೆಯುವುದು ಸಾಧನೆ ಎಂದು ಹೇಳಲಾಗುತ್ತಿರುವ ಈಗಿನ ಶಿಕ್ಷಣ ಪದ್ದತಿಯನ್ನೇ ಎನ್‌ಇಪಿಯು ಮುಂದುವರಿಸುತ್ತದೆ. ಈಗಿನ ಶಾಲಾ ಶಿಕ್ಷಣದಲ್ಲಿ ಐಜಿಸಿಎಸ್ಇ, ಐಬಿ ಶಾಲೆಗಳು, ಸಿಬಿಎಸ್‌ಇ, ಐಸಿಎಸ್‌ಇ , ರಾಜ್ಯಕ್ಕೆ ಬಂದರೆ ಪ್ರತಿಷ್ಠಿತ ಅಂಗ್ಲ ಮಾಧ್ಯಮ ಶಾಲೆಗಳು, ಬಜೆಟ್ ಶಾಲೆಗಳು, ಅನುದಾನಿತ ಶಾಲೆಗಳು ಮತ್ತು ಕೊನೆಯ ಸ್ತರದಲ್ಲಿ ಸರಕಾರಿ ಶಾಲೆಗಳಿವೆ. ಕೆಳ ಹಂತದ ಸರಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಈ ಅಸಮಾನತೆಯನ್ನು ಹೇಗೆ ತೆಗೆದುಹಾಕಲಾಗುತ್ತದೆ ಎಂಬುದರ ಪ್ರಸ್ತಾವನೆ ಎನ್‌ಇಪಿಯಲ್ಲಿಲ್ಲ. ರಾಜ್ಯಗಳಿಗೆ ಏಕರೂಪ ಶಿಕ್ಷಣವಲ್ಲ, ಆದರೆ ಸಮಾನ ಶಿಕ್ಷಣ ಬೇಕು.
ಹಿಂದಿನ ಶಿಕ್ಷಣ ನೀತಿಗಳ ಸಾಧನೆ, ವಿಫಲತೆಗಳ ವಿಮರ್ಶೆ ವಸ್ತುನಿಷ್ಠವಾಗಿ ನಡೆದಿಲ್ಲ. ಪ್ರಪಂಚದ ಬೇರೆ ಬೇರೆ ಕಡೆ ಇರುವ ವೈದ್ಯರು, ವಿಜ್ಞಾನಿಗಳು ನಮ್ಮವರೇ. ಹಾಗಿದ್ದರೆ ಹಿಂದಿನ ಶಿಕ್ಷಣ ನೀತಿಗಳಿಂದ ಸಾಧನೆ ಆಗಿಲ್ಲವೇ? ಸಾಧನೆ, ಇತಿಮಿತಿ ಮತ್ತು ಸವಾಲುಗಳ ಬಗ್ಗೆ ಎನ್‌ಇಪಿ ಚರ್ಚೆ ನಡೆಸಬೇಕಿತ್ತು. ಎನ್‌ಇಪಿಯು ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರಿಕರಣಗೊಳಿಸುತ್ತದೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಏನು ಎಂಬುದು ಎನ್‌ಇಪಿ ಉಲ್ಲೇಖೀಸಿಲ್ಲ.
ಎನ್‌ಇಪಿ ಬಗ್ಗೆ ಸಂಸತ್‌ನಲ್ಲಿ ಚರ್ಚೆಯೇ ನಡೆದಿಲ್ಲ. ಎನ್‌ಇಪಿ ಪ್ರಾರಂಭವಾಗಿದ್ದು 2014ರಲ್ಲಿ. ಆಗ ಮಾನವ ಸಂಪನ್ಮೂಲ ಸಚಿವೆಯಾಗಿದ್ದ ಸ್ಮತಿ ಇರಾನಿ ಅವರು ಆಗಸ್ಟ್ ನಲ್ಲಿ ಸಂಸತ್ತಿನಲ್ಲಿ ಹೊಸ ಶಿಕ್ಷಣ ನೀತಿ ತರುವುದಾಗಿ ಘೋಷಿಸಿದರು. ತತ್‌ಕ್ಷಣವೇ ಅಧಿಕಾರಿಗಳ ಮೂಲಕ ಸಮಾಲೋಚನ ಪ್ರಕ್ರಿಯೆ ಪ್ರಾರಂಭಿಸಿದರು. ಸಮಿತಿ ರಚಿಸಿ ವಿಮರ್ಶೆ ಮಾಡಬೇಕಿತ್ತು. ಇವರು ಹೇಳುವ 2 ಲಕ್ಷ ಅಭಿಪ್ರಾಯ ಸಂಗ್ರಹ ಟಿ. ಆರ್. ಸುಬ್ರಹ್ಮಣ್ಯ ಸಮಿತಿ ರಚನೆಯಾಗುವ ಮೊದಲೇ ಮುಕ್ತಾಯಗೊಂಡಿತ್ತು. ಟಿಆರ್‌ಎಸ್ ಸಮಿತಿಯ ವರದಿ ಬಹಿರಂಗವಾಗಲೇ ಇಲ್ಲ. ಸಮಿತಿಯಲ್ಲಿ ಪ್ರದೇಶವಾರು ಪ್ರಾತಿನಿಧ್ಯವೂ ಇರಲಿಲ್ಲ. ಸಮಾಲೋಚನ ಪ್ರಕ್ರಿಯೆಯೆ ಅಸಾಂವಿಧಾನಿಕವಾಗಿತ್ತು. 2017ರಲ್ಲಿ ಕಸ್ತೂರಿರಂಗನ್ ಅವರ ಸಮಿತಿ ರಚಿಸಲಾಯಿತು. ಆದರೆ ಅವರು ಶಿಕ್ಷಣ ತಜ್ಞರಲ್ಲ. ಅವರು ರೂಪಿಸಿದ ಪಶ್ಚಿಮ ಘಟ್ಟದ ಬಗೆಗಿನ ವರದಿಯನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ಆದರೆ ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಜ್ಞಾನವನ್ನು ಪರಿಭಾವಿಸುವ ರೀತಿಯನ್ನು ಎನ್‌ಇಪಿ ಸೀಮಿತಗೊಳಿಸುತ್ತದೆ. ಭಾರತೀಯ ಜ್ಞಾನ ವ್ಯವಸ್ಥೆ ಎಂದರೆ ಅನೇಕ ಪರಂಪರೆಗಳಿವೆ. ಕೇವಲ ವೈದಿಕ ಪರಂಪರೆ ಮಾತ್ರವಲ್ಲ. ಅಲ್ಲಿ ಚಾರ್ವಾಕ, ಲೋಕಾಯತ, ಸೂಫಿ, ಜೈನ, ಬುದ್ಧ, ಕರ್ನಾಟಕದಂತಹ ರಾಜ್ಯದಲ್ಲಿ ಬಸವಣ್ಣನ ಶ್ರೇಷ್ಠ ಪರಂಪರೆಯಿದೆ. ನಾವು ಈವರೆಗೆ ಆಧುನಿಕ ಶಿಕ್ಷಣ ಪದ್ಧತಿ ಕಟ್ಟಿಕೊಂಡು ಇನ್ನು ಯಾವುದೋ ಕಾಲದ ಹಿಂದಿನ ಶಿಕ್ಷಣ ಪದ್ಧತಿ ಅನುಸರಿಸುತ್ತೇವೆ ಎಂಬುದಕ್ಕೆ ಅರ್ಥವಿದೆಯೇ? ಒಂದು ಜ್ಞಾನ ಪರಂಪರೆಯನ್ನೇ ಹೇರಲು ಹೊರಟಿರುವುದನ್ನು ಒಪ್ಪಲು ಸಾಧ್ಯವಿಲ್ಲ.
ಭಾರತದ ಪ್ರತೀ ರಾಜ್ಯವೂ ಭಿನ್ನವಾಗಿರುವಾಗ ಒಂದೇ ಪಠ್ಯಕ್ರಮ ತರುತ್ತೇವೆ ಎಂಬುದು ಸಂವಿಧಾನ ವಿರೋಧಿಯಾಗಿದೆ. ರಾಜ್ಯಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಗತ್ಯಗಳು ಬೇರೆ ಇರುತ್ತವೆ. ರಾಜ್ಯಗಳು ತಮ್ಮ ಶಿಕ್ಷಣ ನೀತಿ ರೂಪಿಸುವಾಗ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡೆ ತಮ್ಮ ನೀತಿ ರೂಪಿಸುತ್ತವೆ. ರಾಜ್ಯಗಳಿಗೂ ಉತ್ತಮ ಶಿಕ್ಷಣ ನೀಡುವ ಸಾಮರ್ಥ್ಯವಿದೆ.ಈ ಎಲ್ಲ ಕಾರಣಗಳಿಂದ ರಾಜ್ಯ ಶಿಕ್ಷಣ ನೀತಿ ಚರ್ಚೆಯಾಗಿದೆ. ರಾಜ್ಯದಲ್ಲಿ ಎಸ್‌ಇಪಿ ಮಾಡುವಾಗ ವಿಶಾಲವಾಗಿ ಚರ್ಚೆ ನಡೆಸಿ, ಮಾದರಿ ನೀತಿ ರೂಪಿಸುತ್ತಾರೆ ಎಂಬ ನಿರೀಕ್ಷೆಯಿದೆ. ಡಾ| ವಿ. ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ