Advertisement

CM ಜತೆ ಚರ್ಚಿಸಿ ಸೈಕಲ್‌ ವಿತರಣೆಗೆ ಕ್ರಮ: ಮಧು

11:40 PM Dec 07, 2023 | Team Udayavani |

ಬೆಳಗಾವಿ: ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಣೆ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Advertisement

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ಸದಸ್ಯ ಪ್ರದೀಪ್‌ ಈಶ್ವರ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಈ ಹಿಂದೆ 2019-20ನೇ ಸಾಲಿನಲ್ಲಿ ಉಚಿತ ಸೈಕಲ್‌ ವಿತರಣೆ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಲಾಗುತ್ತಿಲ್ಲ. ಸೈಕಲ್‌ ನೀಡುವಂತೆ ವಿದ್ಯಾರ್ಥಿಗಳು ಬೇಡಿಕೆ ಇಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದರು.

ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೇಂದ್ರ ಪ್ರಾಯೋಜಿತ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿ ತಮ್ಮ ವ್ಯಾಪ್ತಿ ಮೀರಿದ ಶಾಲೆಗಳಿಗೆ ಕ್ರಮಿಸಲು ಪ್ರತಿ ವಿದ್ಯಾರ್ಥಿಗೆ ಮಾಸಿಕ 600 ರೂ.ನಂತೆ 6 ತಿಂಗಳಿಂದ ಸಾರಿಗೆ ಭತ್ತೆ ನೀಡಲಾಗುತ್ತಿದೆ. ಅಲ್ಲದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಕೂಡ ವಿತರಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಸರಕಾರಿ ಶಾಲಾ ಮಕ್ಕಳಿಗೆ ವಿದ್ಯಾವಿಕಾಸ ಯೋಜನೆ ಅಡಿ ಒಂದು ಜತೆ ಶೂ ಮತ್ತು ಎರಡು ಜತೆ ಸಾಕ್ಸ್‌ ಉಚಿತವಾಗಿ ನೀಡಲಾಗುತ್ತಿದೆ ಎಂದೂ ಸಚಿವರು ಹೇಳಿದರು.

9,604 ಶಾಲಾ ಕೊಠಡಿಗಳ ನಿರ್ಮಾಣ
ಮೂರು ವರ್ಷಗಳಿಗೆ 7,098 ಶಾಲೆಗಳಿಗೆ 9,604 ಕೊಠಡಿಗಳ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗೆ ಒಟ್ಟು 1,297 ಕೋಟಿ ರೂ. ನಿಗದಿಯಾಗಿದ್ದು, 8,940 ಕೋಟಿ ರೂ. ಖರ್ಚಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸದಸ್ಯ ಯು.ಬಿ. ಬಣಕಾರ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊಠಡಿಗಳ ನಿರ್ಮಾಣಕ್ಕೆ ಕೊರತೆ ಅನುದಾನವನ್ನು 2023-24ನೇ ಸಾಲಿನಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಬಜೆಟ್‌ನಲ್ಲಿ ಒದಗಿಸಲಾದ ಅನುದಾನ ಲಭ್ಯತೆ ಆಧರಿಸಿ ಅಗತ್ಯಕ್ಕೆ ಅನುಗುಣವಾಗಿ ಹಂತಹಂತವಾಗಿ ರಾಜ್ಯಾದ್ಯಂತ ಶಾಲೆಗಳಲ್ಲಿ ಕೊಠಡಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Advertisement

ಮಲೆನಾಡು ಭಾಗದ ಎಲ್ಲ ಸರಕಾರಿ ನೌಕರರಿಗೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ಗಿರಿತಾಣ ಭತ್ತೆ ರದ್ದುಪಡಿಸಿ ಆದೇಶಿಸಿರುವುದರಿಂದ ಚಿಕ್ಕಮಗಳೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸದ್ಯಕ್ಕೆ ಗಿರಿಭತ್ತೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ.
-ಮಧು ಬಂಗಾರಪ್ಪ, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next