Advertisement

ತಲೆನೋವಾದ “ಹಫ್ತಾ ವಸೂಲಿ’ಚರ್ಚೆ

11:26 AM Nov 02, 2018 | |

ಬೆಂಗಳೂರು: ಸಣ್ಣ, ಪುಟ್ಟ ಅಂಗಡಿಗಳಲ್ಲಿ ಪೊಲೀಸರು “ಹಣ ವಸೂಲಿ’ ಮಾಡುತ್ತಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೊಳಗಾದ ವಿಚಾರ ಇದೀಗ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ನಗರ ಪೊಲೀಸ್‌ ಆಯುಕ್ತರು ಇತ್ತೀಚೆಗೆ ನಡೆಸಿದ ಡಿಸಿಪಿಗಳ ಸಭೆಯಲ್ಲೂ ಈ ವಿಚಾರದ ಕುರಿತು ಗಂಭೀರ ಚರ್ಚೆ ನಡೆದಿದ್ದು, ಈ ಕುರಿತು ಕೂಡಲೇ ಗಮನಹರಿಸುವಂತೆ ಆಯಾ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ವಿಶೇಷ ಎಂದರೆ ಸಭೆಯಲ್ಲಿ ವೈಟ್‌ ಫೀಲ್ಡ್‌ ವಿಭಾಗದ ಮಾರತ್‌ಹಳ್ಳಿ, ಮಹದೇವಪುರ ಸೇರಿ ನಾಲ್ಕೈದು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ವಿಚಾರ ಚರ್ಚೆಗೆ ಬಂದಿದ್ದು, ಕೂಡಲೇ ಗಮನ ಹರಿಸುಂತೆ ಡಿಸಿಪಿ ಅಬ್ದುಲ್‌ ಅಹದ್‌ಗೆ ಆಯುಕ್ತರು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.

ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಡಿಸಿಪಿ ಅಹದ್‌ ಅವರು ವಿಭಾಗದ ಕೆಲವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಂಗಡಿಯವರಿಂದ ಹಣ ವಸೂಲಿ ಆರೋಪ ಬಗ್ಗೆ ಆಯುಕ್ತರ ಸಭೆಯಲ್ಲಿ ಚರ್ಚೆ ಆಗಿದೆ. ಹೀಗಾಗಿ ಕೂಡಲೇ ಇದರ ಬಗ್ಗೆ ಗಮನಹರಿಸಿ, ತಮ್ಮ ಗಮನಕ್ಕೆ ತಂದರೆ ಸೂಕ್ತ ಕ್ರಮ ವಹಿಸುತ್ತೇನೆ ಎಂದು ವಿಭಾಗದ ಎಸಿಪಿಗಳು, ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸ್‌ ಸಿಬ್ಬಂದಿಗೆ ಗೌರವ ನೀಡಿ..: ಸಿಬ್ಬಂದಿಯ ಹಣ ವಸೂಲಿ ವಿಚಾರಕ್ಕೆ ಸಂಬಂಧಿಸಿದಂತೆ ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡುವಾಗ ಡಿಸಿಪಿ ಅಬ್ದುಲ್‌ ಅಹದ್‌ ಬಳಸಿರುವ ಪದ ಬಳಕೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. “ಪೊಲೀಸ್‌ ಆಯುಕ್ತರು ನೀಡಿರುವ ಸೂಚನೆ ಹೇಳುತ್ತಿದ್ದೇನೆ. ದಯವಿಟ್ಟು ಕಿವಿ ನೆಟ್ಟಗೆ ಮಾಡಿಕೊಂಡು ಕೇಳಿ.

ಯಾವನಾದ್ರೂ ಸಿಬ್ಬಂದಿ ಈ ರೀತಿ ಮಾಡಿದರೆ ಆತನ ಮೇಲೆ ಸುಲಿಗೆ ಪ್ರಕರಣ ದಾಖಲಾಗುತ್ತದೆ. ಸಂಬಂಧಪಟ್ಟ ಇನ್ಸ್‌ಪೆಕ್ಟರ್‌ಗಳ ಮೇಲೆ ಯಾವುದೇ ವಿಳಂಬವಿಲ್ಲದೆ. ಯಾವುದೇ ಸಮಜಾಯಿಷಿ ಕೇಳದೆ ಅಮಾನತು ಮಾಡಲಾಗುತ್ತದೆ. ಇದನ್ನು ಅಂಡರ್‌ಲೈನ್‌ ಮಾಡಿಟ್ಟುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ, ಹಣ ವಸೂಲಿ ವಿಚಾರ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ನನ್ನ ಗಮನಕ್ಕೆ ತನ್ನಿ ಎಂದಿದ್ದಾರೆ. 

Advertisement

ಆದರೆ, ಡಿಸಿಪಿ ಸೂಚನೆ ನೀಡುವಾಗ ಯಾವನಾದ್ರೂ, ಕಿವಿ ನೆಟ್ಟಗೆ ಮಾಡಿಕೊಳ್ಳಿ ಎಂದು ಗದರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಉದಯವಾಣಿಗೆ ತಿಳಿಸಿದರು. ಹಿರಿಯ ಅಧಿಕಾರಿಗಳು ಸ್ಪಷ್ಟ ಸೂಚನೆ ನೀಡಿದರೆ ತಾವು ಪಾಲಿಸಲೇ ಬೇಕಲ್ಲವೆ? ಅನುಚಿತ ಪದಬಳಕೆಯಿಂದ ಮಾತ್ರ ಆದೇಶ ಜಾರಿ ಸಾಧ್ಯ ಎಂದು ಅವರು ತಿಳಿದಿದ್ದಾರೆಯೇ?’ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರು ಪ್ರಶ್ನಿಸಿದ್ದಾರೆ. 

ಟ್ವೀಟಿಗರು ಹೇಳಿದ್ದೇನು?: ಕೆ.ಆರ್‌ ಮಾರ್ಕೆಟ್‌ನಲ್ಲಿ ಕಾನ್‌ಸ್ಟೆಬಲ್‌ವೊಬ್ಬರು ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡುತ್ತಿದ್ದರು ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸುದ್ದಿಯಾದ ಬೆನ್ನಲ್ಲೇ ಸೆ.28ರಂದು ಟ್ವೀಟರ್‌ನಲ್ಲಿ ಸಮಜಾಯಿಷಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣವರ್‌, ಖಾಸಗಿ ಸೆಕ್ಯೂರಿಟಿಯೊಬ್ಬರು ವ್ಯಾಪಾರಿ ಇಸ್ಮಾಯಿಲ್‌ ಎಂಬುವವರ ಬಳಿ 10 ರೂ. ಪಡೆದ ವಿಡಿಯೋ ಅದಾಗಿದ್ದು, ಪೊಲೀಸ್‌ ಸಿಬ್ಬಂದಿ ಹಣ ಪಡೆದಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಪ್ರಕಟಿಸಿದ್ದರು.

ಡಿಸಿಪಿಯವರ ಟ್ವೀಟ್‌ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ಈ ಪೈಕಿ ಕೆಲವರು ರಾತ್ರಿ 9.30ರಿಂದ 10 ಗಂಟೆ ಸುಮಾರಿಗೆ ಮಾರತ್‌ಹಳ್ಳಿಗೆ ಬನಿ,° ಪೊಲೀಸ್‌ ಬೈಕ್‌ನಲ್ಲಿ ಬಂದು ಹಣ ಸಂಗ್ರಹಿಸುವುದು ಕಣ್ಣಾರೆ ನೋಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೂಬ್ಬರು, ಇದು ಎಲ್ಲ ಎರಿಯಾಗಳಲ್ಲೂ ಸಾಮಾನ್ಯವಾಗಿದೆ ಎಂದಿದ್ದಾರೆ.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next