Advertisement

ತಾರತಮ್ಯವೇ ಪ್ರತ್ಯೇಕತೆ ಕೂಗಿಗೆ ಕಾರಣ

04:20 PM Aug 04, 2018 | Team Udayavani |

ದಾವಣಗೆರೆ: ಪ್ರತಿ ಜಿಲ್ಲಾ ಕೇಂದ್ರ ಸಮಗ್ರ ಅಭಿವೃದ್ಧಿ ಮಾಡಿದಾಗ ಮಾತ್ರ ಸಮಗ್ರ ಕರ್ನಾಟಕದ ಪ್ರಗತಿ ಸಾಧ್ಯ ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಾಕೀತು ಮಾಡಿದ್ದಾರೆ.

Advertisement

ಶುಕ್ರವಾರ ಸಂಜೆ ಶಿವಯೋಗಿ ಮಂದಿರದಲ್ಲಿ ಶರಣ ಸಂಗಮ ಮತ್ತು ಸ್ವಾತಂತ್ರ್ಯ ಸಮತೆ-ರಾಷ್ಟ್ರದ ಏಕತೆ… ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಭಿವೃದ್ಧಿ ಎಂಬುದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿಯೇ ಉತ್ತರ ಕರ್ನಾಟದ ಪ್ರತ್ಯೇಕ ರಾಜ್ಯದ ಬೇಡಿಕೆಯ ಕೂಗು ಕೇಳಿ ಬರುತ್ತಿದೆ. ನಾಡಿನ ಸಮಗ್ರ ಅಭಿವೃದ್ಧಿಯಾದಾಗ ಮಾತ್ರ ಸ್ವಾತಂತ್ರ್ಯದ ಕನಸು ನನಸಾಗುವುದು ಎಂದರು.

ಭಾರತಕ್ಕೆ 1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಸಾಮಾಜಿಕ ಸಮಸ್ಯೆಗಳಾದ ಮೂಢನಂಬಿಕೆ, ಅಸಮಾನತೆ, ಭ್ರಷ್ಟಾಚಾರ, ದುಶ್ಚಟಗಳಂತಹ ಜ್ವಲಂತ ಸಮಸ್ಯೆಗಳಿಂದ ಸ್ವಾತಂತ್ರ್ಯ ದೊರೆಯಬೇಕಿದೆ. ಬಡತನ, ನಿರುದ್ಯೋಗ, ಜನಸಂಖ್ಯಾ ಸ್ಫೋಟ ಸಹ ಬಹು ಗಂಭೀರವಾದ ಸಮಸ್ಯೆಗಳಾಗಿವೆ. ಅವುಗಳ ನಿರ್ಮೂಲನೆಗೆ ಪ್ರತಿಯೊಬ್ಬರು ಹೋರಾಡಬೇಕು ಎಂದು ತಿಳಿಸಿದರು.
 
ಸ್ವಾತಂತ್ರ್ಯ ಪ್ರತಿಯೊಬ್ಬರ ಆಜನ್ಮ ಸಿದ್ಧ ಹಕ್ಕು. ಹಾಗಾಗಿ ಪ್ರತಿಯೊಬ್ಬರಿಗೆ ಸಮಾನವಾಗಿ ದೊರೆಯಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಎಲ್ಲ ಹಕ್ಕುಗಳು ಎಲ್ಲರಿಗೂ ದೊರೆತಾಗ ರಾಷ್ಟ್ರದ ಘನತೆ ಹೆಚ್ಚುತ್ತದೆ ಎಂದ ಅವರು, ಬಸವಣ್ಣ, ಬುದ್ಧ, ಅಂಬೇಡ್ಕರ್‌ ಮುಂತಾದವರು ಪ್ರತಿಪಾದಿಸಿರುವ ಸಮಾನತೆ, ಸ್ವಾತಂತ್ರ್ಯವನ್ನು ಇಂದು ನಾವೆಲ್ಲರೂ ಅನುಷ್ಠಾನಕ್ಕೆ ತಂದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.

ಸ್ವಾತಂತ್ರ್ಯ ಸಮತೆ-ರಾಷ್ಟ್ರದ ಏಕತೆ… ವಿಷಯ ಕುರಿತ ಉಪನ್ಯಾಸ ನೀಡಿದ ಸಾಹಿತಿ ಡಾ| ಬಸವರಾಜ್‌ ನೆಲ್ಲಿಸರ, ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಯಾರಿಗೆ, ಎಲ್ಲಿ ಸಿಕ್ಕಿದೆ ಎಂದು ಪ್ರಶ್ನಿಸುವ ವಾತಾವರಣ ಇದೆ. ಸ್ವಾತಂತ್ರ್ಯ ಸಮತೆ-ರಾಷ್ಟ್ರದ ಏಕತೆ ಅನುಭವಿಸಲಾಗುತ್ತಿಲ್ಲ. ಇಂತಹ ಕಾಲಘಟ್ಟದಲ್ಲಿ ರಾಷ್ಟ್ರಭಕ್ತಿಯ ಮನಸುಳ್ಳವರು ರಾಜಕಾರಣಿಗಳಾಗಿ ಹೊರ ಹೊಮ್ಮಬೇಕು. ಆಗ ಆತ್ಮ ಮತ್ತು ಸಮಾಜ ಕಲ್ಯಾಣ ಸಾಧ್ಯ ಆಗುತ್ತದೆ ಎಂದರು. 

ಇಂದಿನ ಯುವ ಜನಾಂಗ ಒಳಗೊಂಡಂತೆ ಸಮಸ್ತರಿಗೆ ಸೂಕ್ತ ಮಾರ್ಗದರ್ಶನ ನೀಡುವಂತಹ ಗುರುಗಳು, ಗುರಿ ಎರಡೂ ಇಲ್ಲದಂತಾಗಿದೆ. ಅಕ್ಷರ ಕಲಿತವರೇ ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ಕಾಣೆಯಾಗುತ್ತಿದೆ. ರಾಷ್ಟ್ರದ ಘನತೆ ಎತ್ತಿ ಹಿಡಿಯುವ ಬದಲಿಗೆ ಅಹಂ…ನಲ್ಲಿ ಮುಳುಗುತ್ತಿದ್ದೇವೆ. ಮನುಷ್ಯರನ್ನುಮನುಷ್ಯರಂತೆ ಕಾಣದ ಸ್ಥಿತಿ ಇದೆ. ಹಣವೇ ಪ್ರಧಾನ ಎನ್ನುವಂತಾಗುತ್ತಿದೆ. ಸರ್ಕಾರ ಆಹಾರ, ಆರೋಗ್ಯ
ಮತ್ತು ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಎಲ್ಲರಿಗೂ ಸಮಾನವಾಗಿ ಆಹಾರ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

Advertisement

ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ ಮಾತನಾಡಿ, ಮೊದಲು ದೇಶ ಆಮೇಲೆ ನಾವು ಎಂಬ ಭಾವನೆ ಬಂದಾಗ ಮಾತ್ರ ರಾಷ್ಟ್ರದ ಘನತೆ ಎತ್ತಿ ಹಿಡಿಯಲಿಕ್ಕೆ ಸಾಧ್ಯ ಆಗುತ್ತದೆ ಎಂದರು.
 
ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವಕಿರಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ| ಸೋಮಶೇಖರ್‌ ನಿರೂಪಿಸಿದರು. ಎಸ್‌.ಜೆ.ಎಂ. ಪಬ್ಲಿಕ್‌ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next