ರಾಯಚೂರು: ರಾಜ್ಯ ಸರ್ಕಾರ ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳಿಗೆನೀಡುತ್ತಿದ್ದ ಅನುದಾನ ಕಡಿತಗೊಳಿಸುವ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದ್ದು, ಈ ಧೋರಣೆ ಖಂಡಿಸಿ ರಾಜ್ಯದ 24 ಜಿಲ್ಲೆಗಳಲ್ಲಿ ಡಿ.7ರಂದು ಹೋರಾಟ ನಡೆಸಲಾಗುವುದು ಎಂದು ಮುಸ್ಲಿಂ ಚಿಂತಕರ ಚಾವಡಿ ಮುಖಂಡ ಡಾ| ರಜಾಕ್ ಉಸ್ತಾದ್ ತಿಳಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯಗಳನ್ನು ಸಂಪೂರ್ಣ ಕಡೆಗಣಿಸುತ್ತಿದೆ. ಅಲ್ಪಸಂಖ್ಯಾತರ ಇಲಾಖೆಯ ಜನಪರ ಯೋಜನೆಗಳನ್ನು ಕೈ ಬಿಡುತ್ತಿದೆ. ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಸಾಕಷ್ಟು ಅನುದಾನ ಕಡಿತಗೊಳಿಸಿದ್ದು, ಬೇಕು ಬೇಡ ಎನ್ನುವಂತೆ ಹಣ ನೀಡುತ್ತಿದೆ ಎಂದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ 2019-20ರ ಬಜೆಟ್‌ನಲ್ಲಿ ಘೋಷಿಸಿದ 1,897 ಕೋಟಿ ಅನುದಾನವನ್ನು ಈಗಿನ ಸರ್ಕಾರ 1,571 ಕೋಟಿ ರೂ.ಗೆ ಇಳಿಸಿದೆ. 2020-21ನೇ ಸಾಲಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ1,177 ಕೋಟಿ ರೂ.ಗಳಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ 1055 ಕೋಟಿಗೆ ರೂ.ಗೆ ನಿಗದಿಗೊಳಿಸಿದೆ. ಅದರಲ್ಲೂ 50 ಕೋಟಿ ರೂ. ಕಡಿತಗೊಳಿಸಲಾಗಿದೆ ಎಂದು ದೂರಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಕಾಲನಿ ಅಭಿವೃದ್ಧಿ ಯೋಜನೆ, ಶಾದಿಭಾಗ್ಯ ರದ್ದುಗೊಳಿಸಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಧನ, ನಾಗರಿಕ ಪರೀಕ್ಷೆ ತರಬೇತಿ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂಥಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ಯೋಜನೆಗಳಿಗೆ ಸರ್ಕಾರ ಈವರೆಗೆ ಅನುದಾನ ನೀಡಿಲ್ಲ ಎಂದರು.
ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ 25 ಸಾವಿರ ರೂ. ಪ್ರೋತ್ಸಾಹ ಧನವನ್ನು 8,333 ರೂ. ಗೆ ಕಡಿತಗೊಳಿಸಲಾಗಿದೆ. ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ವಾರ್ಷಿಕವಾಗಿ 12.50 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಕೇಂದ್ರಮತ್ತು ರಾಜ್ಯ ಸರ್ಕಾರ ಸೇರಿ 270 ಕೋಟಿ ರೂ.ಅನುದಾನ ನಿಗದಿಗೊಳಿಸಲಾಗಿತ್ತು. 2019-20ನೇಸಾಲಿನಲ್ಲಿ ರಾಜ್ಯ ಸರ್ಕಾರ ಅನುದಾನನೀಡದ ಕಾರಣ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಸಿಕ್ಕಿಲ್ಲ ಎಂದರು.
ಸಚಿವ ಶ್ರೀಮಂತ ಪಾಟೀಲ್ ಮೂರು ತಿಂಗಳಿಂದ ಕಚೇರಿಗೆ ಆಗಮಿಸಿಲ್ಲ. ಒಂದು ತಿಂಗಳಿಂದ ಇಲಾಖೆಯ ಪ್ರಭಾರ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಕೂಡಕಚೇರಿಯತ್ತ ತಲೆ ಹಾಕದ ಕಾರಣ ಹೇಳುವವರು ಕೇಳುವವರೇ ಇಲ್ಲದಾಗಿದೆ. ಸರ್ಕಾರ ಹೊಸ ಯೋಜನೆ ಜಾರಿಗೊಳಿಸದಿದ್ದರೂ ಪರವಾಗಿಲ್ಲ. ಆದರೆ, ಈಗಿರುವ ಎಲ್ಲ ಯೋಜನೆಗಳನ್ನು ಮುಂದುವರಿಸಲಿ. ಅಗತ್ಯ ಅನುದಾನ ನೀಡಲಿ ಎಂದು ಒತ್ತಾಯಿಸಿದರು. ಮುಖಂಡರಾದ ಸೈಯದ್ ಹಾಮೀದ್ ಅಲಿ, ಕೆ.ಎಂ.ಖಾನ್, ಗುಲಾಬ್ ಅಹ್ಮದ್ ಖಾನ್, ಮಹ್ಮದ್ ಸಲೀಂ ಸೇರಿ ಇತರರಿದ್ದರು.