Advertisement

ಆಸ್ತಿ ತೆರಿಗೆ ಕಟ್ಟಿದರೆ ರಿಯಾಯಿತಿ

12:34 PM Apr 03, 2018 | |

ಬೆಂಗಳೂರು: ಏಪ್ರಿಲ್‌ 30ರೊಳಗೆ ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರು ಪೂರ್ಣ ಆಸ್ತಿ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯ್ತಿ ದೊರೆಯಲಿದೆ. ಆದರೆ, ಯಾವುದೇ ಕಾರಣಕ್ಕೂ ಈ ಬಾರಿ ರಿಯಾಯ್ತಿ ಅವಧಿ ವಿಸ್ತರಿಣೆಯಾಗುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

Advertisement

ಕಳೆದ ವರ್ಷ ಆನ್‌ಲೈನ್‌ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯ್ತಿ ನೀಡಲಾಗಿತ್ತು. ಈಗ ಆನ್‌ಲೈನ್‌ ವ್ಯವಸ್ಥೆಯಲ್ಲಿನ ಗೊಂದಲ, ತಾಂತ್ರಿಕ ಸಮಸ್ಯೆಗಳು ಸಂಪೂರ್ಣ ಬಗೆಹರಿದಿದ್ದು, ಯಾವುದೇ ಕಾರಣಕ್ಕೂ ರಿಯಾಯ್ತಿ ಅವಧಿ ಮುಂದುವರಿಸದಿರಲು ಪಾಲಿಕೆ ನಿರ್ಧರಿಸಿದೆ. 

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ, ಆನ್‌ಲೈನ್‌ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕ ವರ್ಷದ ಮೊದಲ ದಿನವೇ (ಏ.1) 2.8 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಏಪ್ರಿಲ್‌ 30ರ ಬಳಿಕ ರಿಯಾಯ್ತಿ ನೀಡುವುದಿಲ್ಲ.

ಹೀಗಾಗಿ ರಿಯಾಯ್ತಿ ಪಡೆಯಲು ಆಸ್ತಿ ಮಾಲೀಕರು ಏ.30ರೊಳಗೆ ತೆರಿಗೆ ಪಾವತಿಗೆ ಮುಂದಾಗಬೇಕು. ಮೇ ತಿಂಗಳಲ್ಲಿ ತೆರಿಗೆ ಪಾವತಿಸುವ ಯಾವುದೇ ರೀತಿಯ ದಂಡ ಇರುವುದಿಲ್ಲ. ಜೂನ್‌ ತಿಂಗಳಿನಿಂದ ಆಸ್ತಿ ತೆರಿಗೆ ಪಾವತಿಸುವವರು ಪ್ರತಿ ತಿಂಗಳು ಶೇ.2ರಷ್ಟು ಬಡ್ಡಿ ಪಾವತಿಸಬೇಕು ಎಂದು ತಿಳಿಸಿದರು.

ಬದಲಾವಣೆಗೆ ಅವಕಾಶ: ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿದ ಬಳಿಕ ಇದೇ ಮೊದಲ ಬಾರಿ ತಮ್ಮ ಆಸ್ತಿಗಳ ವಿವರಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಸ್ತಿ ಮಾಲೀಕರು 2008ರಲ್ಲಿ ನೀಡಿದ ಮಾಹಿತಿಯನ್ನು ಪರಿಷ್ಕೃರಿಸಲು ಅವಕಾಶವಿದ್ದು, ಮಹಡಿಗಳ ಹೆಚ್ಚಳ, ವಾಣಿಜ್ಯದಿಂದ ವಸತಿಗೆ ಹಾಗೂ ವಸತಿಯಿಂದ ವಾಣಿಜ್ಯ ಬಳಕೆಗೆ ಮಾರ್ಪಾಡು ಮಾಡಿಕೊಂಡವರು ಫಾರಂ 5ನ್ನು ಭರ್ತಿ ಮಾಡಬೇಕು.

Advertisement

ಅದೇ ರೀತಿ ತೆರಿಗೆ ವಿನಾಯಿತಿ ಪಡೆಯುತ್ತಿರುವ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೇರಿ ಸೇವಾ ತೆರಿಗೆ ಪಾವತಿಸುವವರು ಫಾರಂ 6ರಲ್ಲಿ ತಾವು ಮಾಡಿಕೊಂಡ ಬದಲಾವಣೆಗಳನ್ನು ಭರ್ತಿ ಮಾಡಬಹುದು. ಈ ವೇಳೆ ಆಸ್ತಿದಾರರು ತಪ್ಪು ಮಾಹಿತಿ ನೀಡಿದರೆ ವ್ಯತ್ಯಾಸದ ತೆರಿಗೆಯೊಂದಿಗೆ, ದಂಡ ಹಾಗೂ ಬಡ್ಡಿ ವಿಧಿಸುವುದಾಗಿ ಎಂದು ವೆಂಕಟಾಚಲಪತಿ ಎಚ್ಚರಿಸಿದರು.

ತೆರಿಗೆ ಸಂಗ್ರಹ ಹೆಚ್ಚಳ ನಿರೀಕ್ಷೆ: 2017-18ನೇ ಸಾಲಿನಲ್ಲಿ 14,37,158 ಆಸ್ತಿದಾರರು ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸಿದ್ದು, ಇದರಿಂದ 2,177.83 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಮಾರ್ಚ್‌ ಕೊನೆಯಲ್ಲಿ ರಜೆ ಇದ್ದುದರಿಂದ ಆಸ್ತಿದಾರರು ಆನ್‌ಲೈನ್‌, ಚಲನ್‌ ಹಾಗೂ ಚೆಕ್‌ ಮೂಲಕ ತೆರಿಗೆ ಪಾವತಿಸಿದ್ದು, ಹೆಚ್ಚುವರಿಯಾಗಿ 15 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ.

ಜತೆಗೆ 2,177 ಕೋಟಿ ಪೈಕಿ 573 ಕೋಟಿ ರೂ. ಆನ್‌ಲೈನ್‌ ಮೂಲಕವೇ ಸಂಗ್ರಹವಾಗಿದೆ. 2018-19ನೇ ಸಾಲಿನ ಆರ್ಥಿಕ ವರ್ಷ ಆರಂಭದ ಏ.1ರಂದು 1,200 ಚಲನ್‌ಗಳು ಜನರೇಟ್‌ ಆಗಿದ್ದು, 3,600 ಮಂದಿ ಆನ್‌ಲೈನ್‌ ಮೂಲಕ ತೆರಿಗೆ ಪಾವತಿಸಿದ್ದಾರೆ ಎಂದು ವೆಂಕಟಾಚಲಪತಿ ಮಾಹಿತಿ ನೀಡಿದರು. 

ನಾಲ್ಕು ಬ್ಯಾಂಕ್‌ಗಳಲ್ಲಿ ತೆರಿಗೆ ಪಾವತಿಗೆ ಅವಕಾಶ: ನಗರದ ಕೆನರಾ, ಎಚ್‌ಡಿಎಫ್ಸಿ, ಐಸಿಐಸಿಐ ಹಾಗೂ ಆಕ್ಸಿಸ್‌ ಬ್ಯಾಂಕ್‌ನ ಎಲ್ಲ ಶಾಖೆಗಳಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಆನ್‌ಲೈನ್‌ ತೆರಿಗೆ ಪಾವತಿಯನ್ನು ಪೇಯು ಗೇಟ್‌ವೇ ಮೂಲಕವೇ ಪಾವತಿಸಬೇಕಾಗುತ್ತದೆ. ತೆರಿಗೆ ಪಾವತಿ ಮಾಡುವಾಗ 5 ಸಾವಿರ ರೂ.ವರೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅದಕ್ಕೂ ಹೆಚ್ಚಿನ ಮೊತ್ತಕ್ಕೆ ಬ್ಯಾಂಕ್‌ಗೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next