ಧಾರವಾಡ: ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಆಗಿರುವ ಸಮಸ್ಯೆ, ತಾರತಮ್ಯ ನಿವಾರಿಸಿ ರೈತರ ಖಾತೆಗೆ ಹಣ ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಪಂ ಅಧ್ಯಕ್ಷ ಮಲ್ಲಪ್ಪ ಭಾವಿಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ವಿಮೆ ಹಾಗೂ ಬೆಳೆ ಹಾನಿ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದ್ದು, ತಹಶೀಲ್ದಾರರು ಹಾರಿಕೆ ಉತ್ತರ ನೀಡದೆ ರೈತರಿಗೆ ಬೆಳೆ ಪರಿಹಾರ ವಿತರಿಸಲು ಮುಂದಾಗಬೇಕು ಎಂದರು. ಈವರೆಗೆ ಯಾವ ಗ್ರಾಮದಲ್ಲಿಯೂ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿರುವ ಕುರಿತು ಮಾಹಿತಿ ಇಲ್ಲ.
ಆದರೆ, ಅಧಿಕಾರಿಗಳು ಮಾತ್ರ ಜಂಟಿ ಸಮೀಕ್ಷೆ ನಡೆಸಿರುವುದಾಗಿ ಹೇಳುತ್ತಿದ್ದಾರೆ. ಕೂಡಲೇ ಸಮೀಕ್ಷೆ ನಡೆಸಿದ ಕುರಿತು ಮತ್ತು ಯಾವ ಆಧಾರದಲ್ಲಿ ಬೆಳೆ ಪರಿಹಾರ ವಿತರಿಸುತ್ತಿದ್ದಾರೆಂಬ ಮಾಹಿತಿ ಕೊಡಬೇಕು. ಒಂದು ವೇಳೆ ಸಮೀಕ್ಷೆ ನಡೆಸದೆ ರೈತರಿಗೆ ಪರಿಹಾರ ವಿತರಿಸಿದ ಕುರಿತು ತಪ್ಪು ಮಾಹಿತಿ ನೀಡಿದರೆ ಅದನ್ನು ಸಹಿಸಲಾಗುವುದಿಲ್ಲ. ಬೆಳೆ ಪರಿಹಾರ ವಿತರಣೆಯಲ್ಲಿ ಈ ಬಾರಿಯೂ ತಾರತಮ್ಯ ಮಾಡಿರುವುದು ಕಂಡು ಬಂದರೆ ತಹಶೀಲ್ದಾರ್ ಸೇರಿದಂತೆ ಸಂಬಂದಪಟ್ಟ ಎಲ್ಲ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶೀಘ್ರ ಬೆಳೆವಿಮೆ: ತಹಶೀಲ್ದಾರ ಪ್ರಕಾಶ ಕುದರಿ ಮಾತನಾಡಿ, 2016-17ನೇ ಸಾಲಿನ ಬೆಳೆ ಪರಿಹಾರ ಬಂದಿದೆ. ಈಗಾಗಲೇ ಕೃಷಿ ಇಲಾಖೆ ಹಾಗೂ ಗ್ರಾಪಂ ಅಧಿ ಕಾರಿಗಳು ಜಂಟಿಯಾಗಿ ತಾಲೂಕಿನಲ್ಲಿ ಬೆಳೆ ಹಾನಿಗೊಳಗಾದ ರೈತರ ಜಮಿನುಗಳ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆ ಆಧಾರದ ಮೇಲೆ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಬೆಳೆ ಪರಿಹಾರ ಹಣವನ್ನು ರೈತ ಖಾತೆಗೆ ಜಮಾ ಮಾಡಲಾಗುತ್ತಿದೆ.
ಆದಷ್ಟು ಬೇಗ ತಾಲೂಕಿನ ಎಲ್ಲ ರೈತರ ಖಾತೆಗೆ ಬೆಳೆ ಪರಿಹಾರ ಜಮಾ ಆಗಲಿದೆ ಎಂದರು. ತಾಪಂ ವ್ಯಾಪ್ತಿಯ ಎಲ್ಲ ಇಲಾಖೆಗಳ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಜನರ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ತಕ್ಷಣ ಸಿಬ್ಬಂದಿಗೆ ಬಿಸಿ ಮುಟ್ಟಿಸಿ ಕೆಲಸ ಚುರುಕುಗೊಳಿಸುವಂತೆ ಮಾಡಬೇಕು ಎಂದು ತಾಪಂ ಅಧ್ಯಕ್ಷರು ತಹಶೀಲ್ದಾರ್‌ಗೆ ಹೇಳಿದರು.
ಹಾಸ್ಟೆಲ್ ಕುರಿತು ಕ್ರಮ: ತಾಪಂ ಇಒ ಎಸ್.ಎಂ. ರುದ್ರಸ್ವಾಮಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಸವನಗರ ವಸತಿ ನಿಲಯದಲ್ಲಿನ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜನಸಂಪರ್ಕ ಸಭೆಯಲ್ಲಿ ಚರ್ಚಿಸಲಾಗಿದೆ.
ಅಲ್ಲದೇ ನಿಲಯ ಪಾಲಕರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಸಂಘ-ಸಂಸ್ಥೆಗಳು ಆರೋಪಿಸಿವೆ. ಈ ಕುರಿತು ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಆಗಸ್ಟ್ ಕೊನೆ ವಾರದೊಳಗೆ ವಸತಿ ನಿಲಯಗಳ ಆಯ್ಕೆ ಪಟ್ಟಿ ಪ್ರಕಟಿಸಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವ್ಯವಸ್ಥಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿ ಕಾರಿಗೆ ಸೂಚಿಸಿದರು.
ತಹಶೀಲ್ದಾರ ಪ್ರಕಾಶ ಕುದರಿ ಮಾತನಾಡಿ, ಕೇಂದ್ರ ಸರ್ಕಾರದ ಫಸಲ್ ಬೀಮಾ, ಸ್ವತ್ಛ ಭಾರತ ಮಿಷನ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಭಾಗ್ಯಲಕ್ಷಿ ಬಾಂಡ್, ಕೃಷಿ ಭಾಗ್ಯ, ಅನ್ನ ಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಿಗೆ ಪಡಿತರ ಚೀಟಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ವಾರದ ಒಳಗೆ ಈ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.