Advertisement

ಶಿಸ್ತುಬದ್ಧತೆ-ಆದರ್ಶ ಗುಣದಿಂದ ಸರ್ವಶ್ರೇಷ್ಠತೆ ಸಾಧ್ಯ;ನ್ಯಾಯಾಧೀಶ ವೈ.ಕೆ.ಬೇನಾಳ

04:21 PM Jan 16, 2023 | Team Udayavani |

ಹಿರೇಕೆರೂರ: ಸಾರ್ವಜನಿಕ ಸೇವೆಯಲ್ಲಿರುವ ಪ್ರತಿಯೊಬ್ಬರೂ ಶಿಸ್ತುಬದ್ಧ ಜೀವನದೊಂದಿಗೆ ಆದರ್ಶ ಗುಣಗಳನ್ನು ರೂಢಿಸಿಕೊಂಡರೆ ಮಾತ್ರ ಸರ್ವಶ್ರೇಷ್ಠರಾಗಲು ಸಾಧ್ಯ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ವೈ.ಕೆ.ಬೇನಾಳ ಹೇಳಿದರು.

Advertisement

ಪಟ್ಟಣದ ವಕೀಲರ ಭವನದಲ್ಲಿ ನಡೆದ ಹಿರಿಯ ವಕೀಲರಾದ ಎನ್‌.ಜಿ.ಬಣಕಾರ ಮತ್ತು ಪಿ.ವಿ.ಕೆರೂಡಿ ಅವರ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಅತ್ಯಂತ ಆದರ್ಶ ಗುಣಗಳನ್ನು ಅಳವಡಿಸಿಕೊಂಡು, ಯಾವುದಕ್ಕೂ ಆಸೆಪಡದೆ, ಜನರು, ಸಹಪಾಠಿಗಳು ಮತ್ತು ಕಿರಿಯ ವಕೀಲರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು, ನ್ಯಾಯಾಲಯದಲ್ಲಿ ಬಲವಾದ ವಾದ ಮಂಡಿಸುವ ಮೂಲಕ ಮಹತ್ವದ ಬಹಳ ಪ್ರಕರಣಗಳಲ್ಲಿ ನ್ಯಾಯ ಒದಗಿಸಿಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರನ್ನು ಗುರುತಿಸಿ ವಿನೂತನ ಗುರುವಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಇಲ್ಲಿನ ವಕೀಲರ ಸಂಘ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ಎನ್‌.ಜಿ.ಬಣಕಾರ ಮತ್ತು ಪಿ.ವಿ.ಕೆರೂಡಿ ಹಿರಿಯ ವಕೀಲರು. ಕೇವಲ ಒಂದೇ ತಾಲೂಕಿಗೆ ಸೀಮಿತವಾಗದೆ ಅಕ್ಕಪಕ್ಕದ ತಾಲೂಕಿನ ಕೋರ್ಟ್ ಗಳಲ್ಲಿ ಸೇವೆ ಸಲ್ಲಿಸಿರುವುದು ನಿಜಕ್ಕೂ ಶ್ಲಾಘನೀಯ. ಯಾವುದೇ ರಾಜಕೀಯ ಗೋಜಿಗೆ ಹೋಗದೆ, ನೇರ ನುಡಿ, ನಿಷ್ಠಾವಂತ ಬದುಕು, ಆದರ್ಶ ಗುಣಗಳಿಂದ ಮಾದರಿ ಸೇವೆ ಸಲ್ಲಿರುವ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದನ್ನು ಮನಗಂಡು ಈ ವಿನೂತನ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ. ಇದು ಆಧುನಿಕ ಸಂಸ್ಕಾರಕ್ಕೆ ಹೊಸ ನಾಂದಿಯಾಗಿದೆ. ಅವರ ಆದರ್ಶ, ಮಾರ್ಗದರ್ಶನ ಅಳವಡಿಸಿಕೊಂಡ ಅನೇಕ ವಕೀಲರು ವೃತ್ತಿಯಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ ಮಾತನಾಡಿ, ಇಬ್ಬರು ಹಿರಿಯ ನ್ಯಾಯವಾದಿಗಳ ಬಳಿ ಮಾರ್ಗದರ್ಶನ ಪಡೆದ ಅನೇಕರು ನ್ಯಾಯಾಧೀಶರು, ಶಾಸಕರು, ಸರ್ಕಾರಿ ವಕೀಲರು ಹಾಗೂ ಸಚಿವರಾಗಿದ್ದು, ಇಂದಿನ ವಕೀಲರ ವೃತ್ತಿಗೆ ಇವರ ಮಾಗದರ್ಶನ, ನಡೆದು ಬಂದ ದಾರಿಗಳು ಅತ್ಯಂತ ಪೂರಕವಾಗಿವೆ ಎಂದರು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ವಕೀಲರಾದ ಎನ್‌.ಜಿ.ಬಣಕಾರ, ಪಿ.ವಿ.ಕೆರೂಡಿ ಅವರು, ಸೇವೆಯಲ್ಲಿ ಪ್ರಾಮಾಣಿಕರಾಗಿ, ಕೆಲವು ಶಿಸ್ತುಬದ್ಧ ನಿಯಮಗಳನ್ನು ರೂಢಿಸಿಕೊಳ್ಳಬೇಕು. ಯಾವತ್ತೂ ಸಂಭಾವನೆಗೆ ಆಸೆ ಪಡಬಾರದು. ನಾವು ಅತ್ಯಂತ ಪ್ರಾಮಾಣಿಕರಾಗಿ ಮಾಡುವ ಉತ್ತಮ ವಾದದಿಂದ ಕೋರ್ಟ್‌ನಲ್ಲಿ ತೀರ್ಪು ಬಂದಾಗ ಅದರಿಂದ ಸಿಗುವ ಸಂತೋಷ, ವಿಶ್ವಾಸ, ನಂಬಿಕೆ ಅದೇ ದೊಡ್ಡ ಸಂಭಾವನೆಯಾಗುತ್ತದೆ.

ಇದು ನಿಮ್ಮ ಮುಂದಿನ ಜೀವನಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದರು. ವಕೀಲರಾದ ಎಸ್‌.ಬಿ. ತಿಪ್ಪಣ್ಣನವರ, ಯು.ಬಿ.ಜೋಗಿಹಳ್ಳಿ, ಸಂಜೀವಕುಮಾರ ಕಬ್ಬಿಣಕಂತಿಮಠ, ಐ.ಬಿ.ಗುಬ್ಬೇರ, ಪಿ.ಎಚ್‌.ಪಾಟೀಲ, ಜಿ.ವಿ.ಕುಲಕರ್ಣಿ, ಎಸ್‌ .ವಿ.ಪಾಟೀಲ ಮಾತನಾಡಿದರು. ನಂತರ ಶಿಷ್ಯ ಸಂಜೀವಕುಮಾರ ಕಬ್ಬಿಣಕಂತಿಮಠ ಅವರಿಂದ ಹಿರಿಯ ವಕೀಲರಾದ ಎನ್‌.ಜಿ.ಬಣಕಾರ, ಪಿ.ವಿ.ಕೆರೂಡಿ ಅವರಿಗೆ ಬಂಗಾರದ ಉಂಗುರ ಮತ್ತು ಗುರುಕಾಣಿಕೆ ನೀಡಿ ಸನ್ಮಾನಿಸಿ, ಆಶೀರ್ವಾದ ಪಡೆದರು. ಇದೇ ವೇಳೆ ರಾಣಿಬೆನ್ನೂರ, ಬ್ಯಾಡಗಿ ಸೇರಿದಂತೆ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ವಕೀಲರ ಸಂಘ ಹಾಗೂ ಕೆಲ ವಕೀಲರು ವಯುಕ್ತಿಕವಾಗಿ ಅವರನ್ನು ಸನ್ಮಾನಿಸಿದರು.

ಪ್ರಧಾನ ದಿವಾಣಿ ನ್ಯಾಯಾಧೀಶರಾದ ನಾಗರತ್ನಮ್ಮ, ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಸವಿತಾ ಮುಕ್ಕಲ್‌, ವಕೀಲರ ಸಂಘದ ಅಧ್ಯಕ್ಷ ವಿ.ವಿ.ಮುಚಡಿ, ಕಾರ್ಯದರ್ಶಿ ಶ್ರವಣಕುಮಾರ ನಾಯಕ, ವಕೀಲರಾದ ಪ್ರಕಾಶ ಬಣಕಾರ, ವೀರನ ಗೌಡ್ರ, ಎಂ.ಬಿ.ದೂದಿಹಳ್ಳಿ, ಎಚ್‌.ಎಸ್‌.ಕೊಣನವರ, ಬಿ.ಎನ್‌.ಬಣಕಾರ, ಎಸ್‌.ಕೆ.ಕರಿಯಣ್ಣನವರ, ಪಿ.ಆರ್‌.ಕುಪ್ಪೆಲೂರ, ಪಿ.ಡಿ.ಬಸನಗೌಡ್ರ, ವಸಂತ ದ್ಯಾವಕ್ಕಳವರ, ಬಸಮ್ಮ ಅಬಲೂರ, ಎಚ್‌.ಆರ್‌ ಬೆಳ್ಳೂರ, ಹಿರಿಯ, ಕಿರಿಯ ವಕೀಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next