Advertisement

11 ಮಂದಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

08:00 AM Jul 23, 2017 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸಿ ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಳಿಸಿದ್ದ
ರಾಜ್ಯ ಸರ್ಕಾರ, ಇದೀಗ ಆ ಆರೋಪದಿಂದ ಮುಕ್ತಗೊಳ್ಳುವ ಪ್ರಯತ್ನಕ್ಕೆ ಕೈಹಾಕಿದೆ. ಆ ನಿಟ್ಟಿನಲ್ಲಿ ಲಂಚ ಸ್ವೀಕಾರ, ಸರ್ಕಾರಿ ಹಣ ದುರ್ಬಳಕೆ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಲೋಕಾಯುಕ್ತರು ಮಾಡಿರುವ ಶಿಫಾರಸನ್ನು ಪಾಲಿಸುವ ಮನಸ್ಸು ಮಾಡಿದೆ.

Advertisement

ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಂದೆ ಹಲವು ಶಿಫಾರಸುಗಳಿದ್ದರೂ ಅಲ್ಲೊಂದು,
ಇಲ್ಲೊಂದು ಪ್ರಕರಣದಲ್ಲಿ ಶಿಸ್ತು ಕ್ರಮ ಜರುಗಿಸುತ್ತಿದ್ದ ರಾಜ್ಯ ಸರ್ಕಾರ ಜುಲೈ ತಿಂಗಳೊಂದರಲ್ಲೇ ನಿವೃತ್ತ
ತಹಶೀಲ್ದಾರ್‌, ಮೂವರು ನಿವೃತ್ತ ಕೆಎಎಸ್‌ ಅಧಿಕಾರಿಗಳು ಸೇರಿದಂತೆ 11 ಮಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು
ಆದೇಶ ಹೊರಡಿಸಿದೆ.

ಭ್ರಷ್ಟರ ವಿರುದಟಛಿ ಕ್ರಮಕ್ಕೆ ಸಂಬಂಧಿಸಿದ ಕಡತಗಳನ್ನು ಹಲವು ವರ್ಷಗಳ ಕಾಲ ಧೂಳು ಹಿಡಿಸಿದ್ದ ಇಲಾಖಾ ಮುಖ್ಯಸ್ಥರಿಗೆ ಪದೇಪದೆ ಲೋಕಾಯುಕ್ತ ಸಂಸ್ಥೆಯಿಂದ ನೋಟಿಸ್‌ ರವಾನೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಲಾಗಿದೆ, ಶಿಫಾರಸುಗಳನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪಗಳಿಂದ ಪಾರಾಗಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಸರ್ಕಾರಿ ಅಧಿಕಾರಿಗಳ ವಿರುದ್ಧದ ದೂರುಗಳನ್ನು ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರು ಪರಿಶೀಲಿಸಿ ನೂರಾರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದರು. ಹಲವು ವರ್ಷಗಳಿಂದ ಇಂತಹ ಶಿಫಾರಸುಗಳು ಧೂಳು ತಿನ್ನುತ್ತಿದ್ದವು. ಈ ಪೈಕಿ ಇತ್ತೀಚೆಗೆ ಹಲವು ಪ್ರಕರಣಗಳಲ್ಲಿ ಸರ್ಕಾರ ಶಿಸ್ತು ಕ್ರಮದ ಆದೇಶ ಹೊರಡಿಸಿದೆ. ಆದರೆ, ಕೆಎಎಸ್‌ ಸೇರಿದಂತೆ ಆಯಕಟ್ಟಿನ ಜಾಗದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ಕಡತಗಳು ವಿಳಂಬವಾಗುತ್ತಿವೆ. ಹೀಗಾಗಿ ಅಧಿಕಾರಿಗಳು ಸೇವೆಯಲ್ಲಿದ್ದಾಗಲೇ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ
ಸೂಚನೆ ನೀಡಲಾಗಿದೆ ಎಂದು ಲೋಕಾಯುಕ್ತದ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಲೋಕಾಯುಕ್ತ ಸಂಸ್ಥೆ ಶಿಫಾರಸಿನಂತೆ ಸರ್ಕಾರ 11 ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತುಕ್ರಮದ ಆದೇಶ ಹೊರಡಿಸಿದೆಯಾದರೂ ಇದೀಗ ಕ್ರಮ ಕೈಗೊಂಡಿರುವ ಅಧಿಕಾರಿಗಳ ಪೈಕಿ ನಾಲ್ವರು ಸೇವೆಯಿಂದ ಈಗಾಗಲೇ ನಿವೃತ್ತರಾಗಿದ್ದಾರೆ, ಈ ಅಧಿಕಾರಿಗಳಿಗೆ ನಿವೃತ್ತಿ ವೇತನ ಕಡಿತ ಕ್ರಮ ಕೈಗೊಂಡಿದೆ. ಉಳಿದಂತೆ ಯಾದಗಿರಿ ರಾಜಸ್ವ ನಿರೀಕ್ಷಕರಿಗೆ ಕಡ್ಡಾಯ ನಿವೃತ್ತಿ ಹಾಗೂ ಉಳಿದ ಅಧಿಕಾರಿಗಳಿಗೆ ವೇತನ ಹಿಂಬಡ್ತಿಯಂತಹ ಶಿಕ್ಷೆ ನೀಡಿದೆ.

Advertisement

ಪ್ರಾಸಿಕ್ಯೂಶನ್‌ ಅನುಮತಿ
ನೀಡಲು ಮೀನಮೇಷ

ಅಚ್ಚರಿಯ ಸಂಗತಿ ಎಂದರೆ, ಈಗ ಕ್ರಮ ಕೈಗೊಂಡಿರುವ ಪ್ರಕರಣಗಳಲ್ಲಿ ಲೋಕಾಯುಕ್ತದಿಂದ ಶಿಫಾರಸುಗೊಂಡ
ವರದಿಗಳನ್ನು ಪಾಲಿಸಲು ಸರ್ಕಾರ 4-5 ವರ್ಷ ತೆಗೆದುಕೊಂಡಿದೆ. ಆದರೆ, ಲೋಕಾಯುಕ್ತದಿಂದ ಸರ್ಕಾರದ
ಉನ್ನತ ಅಧಿಕಾರಿಗಳ ವಿರುದಟಛಿದ ಕ್ರಮಕ್ಕೆ ಮಾಡಲಾಗಿರುವ ವರದಿಗಳನ್ನು ಮೂಲೆಗುಂಪು ಮಾಡಲಾಗಿದೆ. ಅಲ್ಲದೆ, ಲೋಕಾಯುಕ್ತ ದಾಳಿ, ಅಕ್ರಮ ಆದಾಯ, ಅಧಿಕಾರ ದುರ್ಬಳಕೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಅಧಿಕಾರಿಗಳ ವಿರುದ್ಧದ ಸುಮಾರು 90ಕ್ಕೂ ಹೆಚ್ಚು ಪ್ರಕರಣಗಳಿಗೆ ಪ್ರಾಸಿಕ್ಯೂಶನ್‌ ಅನುಮತಿ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ

ಮಾಜಿ ಸಚಿವರ ಆಸ್ಪತ್ರೆಗೆ ರೈತರ ಹಣ
ವರ್ಗಾಯಿಸಿದ್ದ ಅಧಿಕಾರಿ ವಿರುದ್ಧ ಕ್ರಮ

ಸರ್ಕಾರ ಕ್ರಮ ಕೈಗೊಂಡಿರುವ ಪ್ರಕರಣಗಳ ಪೈಕಿ ಮಾಜಿ ಸಚಿವರ ಆಸ್ಪತ್ರೆಗೆ ರೈತರ ಹಣ ವರ್ಗಾಯಿಸಿದ ಅಧಿಕಾರಿಯೂ ಇದ್ದಾರೆ. ಬೀದರ್‌ ಜಿಲ್ಲಾ ಸಹಕಾರ ಬ್ಯಾಂಕ್‌ ಖಾತೆಯಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವತಿಯಿಂದ ರೈತರಿಗೆ ಮಂಜೂರಾದ ಬೆಳೆ ಸಾಲದ ಹಣವನ್ನು ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಬಹುರಾಜ್ಯ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದ ಬೀದರ್‌ ಜಿಲ್ಲಾ ಸಹಕಾರ ಸಂಘಗಳ ಸಬ್‌ ರಿಜಿಸ್ಟ್ರಾರ್‌ ವಿಶ್ವನಾಥ್‌ ಎಂ.ಮಾಲ್ಕೋಡ್‌ ಅವರ ವಾರ್ಷಿಕ ವೇತನ ಬಡ್ತಿ ತಡೆಹಿಡಿಯಲಾಗಿದೆ. ಈ ಪ್ರಕರಣದಲ್ಲಿ ತನಿಖೆ ನಡೆಸಿದ್ದ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್‌, ಕಾನೂನು ಬಾಹಿರವಾಗಿ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದ ಹಣವನ್ನು ಪುನ: ರೈತರಿಗೆ ವರ್ಗಾವಣೆ ಮಾಡಲು ನಿರ್ದೇಶಿಸಿದ್ದರು. ಈ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಪ್ರಕರಣ ಲೋಕಾಯುಕ್ತದ ಮೆಟ್ಟಿಲೇರಿತ್ತು. ಈ ದೂರಿನ ವಿಚಾರಣೆ ನಡೆಸಿದ್ದ ಉಪಲೋಕಾಯುಕ್ತರು ಆರೋಪಿ ಅಧಿಕಾರಿ ವಿರುದಟಛಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿದ್ದರು.

ಯಾರ್ಯಾರ ವಿರುದ್ಧ ಕ್ರಮ?
– ಭರಮಪ್ಪ ಬೂದೆಪ್ಪ ಕಂದಾಟಿ, ಹಾವೇರಿ ಶಾಲಾ ಮುಖ್ಯಶಿಕ್ಷಕ- ಸೇವೆಯಿಂದ ವಜಾ
– ರಾಜಶೇಖರ, ರಾಜಸ್ವ ನಿರೀಕ್ಷಕ, ಯಾದಗಿರಿ ತಾಲೂಕು- ಸೇವೆಯಿಂದ ಕಡ್ಡಾಯ ನಿವೃತ್ತಿ
– ಎಸ್‌.ಎಚ್‌ ಕೂಲಿ, ಗ್ರಾಮ ಸಹಾಯಕ ಪೇಠಲೂರಾ, ಮುಂಡರಗಿ ತಾಲೂಕು- ಸೇವೆಯಿಂದ ವಜಾ
– ಎಚ್‌. ನಂಜಯ್ಯ, ನಿವೃತ್ತ ತಹಶೀಲ್ದಾರ್‌- ಶೇ. 50ರಷ್ಟು ನಿವೃತ್ತ ವೇತನ ಕಡಿತ
– ಎಂ. ತಿಮ್ಮಪ್ಪ, ನಿವೃತ್ತ ಕೆಎಎಸ್‌ ಅಧಿಕಾರಿ- ನಿವೃತ್ತಿ ವೇತನ ಶೇ. 5ರಷ್ಟು ಕಡಿತ
– ತ್ರಿವೇಣಿ, ನಿವೃತ್ತ ಕೆಎಎಸ್‌ ಅಧಿಕಾರಿ- ನಿವೃತ್ತಿ ವೇತನ ಶೇ.5ರಷ್ಟು ಕಡಿತ
– ಮಂಜು ,ಕಾರ್ಯದರ್ಶಿ, ಕೋಟಾ ಗ್ರಾಪಂ, ಉಡುಪಿಜಿಲ್ಲೆ- ಮೂರು ವಾರ್ಷಿಕ ಬಡ್ತಿ ತಡೆ
– ವಿಶ್ವನಾಥ್‌ ಎಂ.ಮಾಲ್ಕೋಡ್‌- ಸಹಕಾರ ಸಂಘಗಳಸಬ್‌ ರಿಜಿಸ್ಟ್ರಾರ್‌, ಬೀದರ್‌- ವಾರ್ಷಿಕ ಬಡ್ತಿಗೆ ತಡೆ
– ಕೃಷ್ಣಯ್ಯ ಆಚಾರ್‌, ಗ್ರಾಪಂ ಕಾರ್ಯದರ್ಶಿ, ನರಸಿಂಹರಾಜಪುರ ತಾಲೂಕು – ಶೇ. 5ರಷ್ಟು ನಿವೃತ್ತಿ ವೇತನ ಕಡಿತ
– ಅಣ್ಣೇಗೌಡ, ಬಿ.ಕಣಬೂರು ಗ್ರಾಪಂ ಹಿಂದಿನಕಾರ್ಯದರ್ಶಿ- ಹಿಂಬಡ್ತಿ
– ಎಸ್‌.ಆರ್‌.ಮಿಟ್ಟಲಕೋಡಾ, ಕಿರಿಯ ಎಂಜಿನಿಯರ್‌,ಪಂಚಾಯತ್‌ ರಾಜ್‌ ಇಲಾಖೆ, ಬಾಗಲಕೋಟೆ ಹಿಂಬಡ್ತಿ.

Advertisement

Udayavani is now on Telegram. Click here to join our channel and stay updated with the latest news.

Next