ಕಾರವಾರ: ಕೋವಿಡ್ -19 ರಿಂದ ಗುಣಮುಖರಾದ ಮಕ್ಕಳೂ ಸೇರಿದಂತೆ, ಓರ್ವ ವೃದ್ಧರು ಹಾಗೂ ಯುವತಿ, ಯುವಕ, ವಯಸ್ಕರೂ ಸೇರಿ ಒಟ್ಟು 20 ಜನರನ್ನು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಹೂಗುಚ್ಛ ನೀಡಿ ಬೀಳ್ಕೊಟ್ಟರು. ವೈದ್ಯರ ಮತ್ತು ನರ್ಸ್‌ಗಳ ಸೇವೆ ಕೊಂಡಾಡಲಾಯಿತು. ಕಿಮ್ಸ್ ಕೋವಿಡ್ -19 ಪ್ರತ್ಯೇಕ ವಾರ್ಡ್‌ನಲ್ಲಿ 53 ಜನ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 20 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು. ಇದರಲ್ಲಿ ಬಹುತೇಕರು ಮೇ 7 ಮತ್ತು ಮೇ 8 ರಂದು ದಾಖಲಾಗಿದ್ದರು. ಅನೇಕ ಅಡೆತಡೆ ಹಾಗೂ ಕೆಲ ಮುಖಂಡರ ಆಕ್ಷೇಪದ ನಡುವೆಯೂ ಎದೆಗುಂದದೆ ಕಿಮ್ಸ್ ಸಿಬ್ಬಂದಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಿತ್ತು. ಕೋವಿಡ್ ಪೀಡಿತರನ್ನು ಗುಣಮುಖರನ್ನಾಗಿ ಸಹ ಮಾಡಿತು. ಈ ವೈಜ್ಞಾನಿಕ ಮನಸ್ಸು ಮತ್ತು ದೃಢ ನಿಶ್ಚಯವನ್ನು ಜಿಲ್ಲಾಡಳಿತ, ಕಿಮ್ಸ್ ಸಿಬ್ಬಂದಿ ಜೊತೆ ಮಾಡಿತ್ತು ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಹೇಳಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಈಗ ಹೊರರಾಜ್ಯಗಳಿಂದ ಬಂದವರು ಕೋವಿಡ್ ಪೀಡಿತರಾಗುತ್ತಿದ್ದು, ಅದಕ್ಕೆ ಆತಂಕಪಡಬೇಕಿಲ್ಲ. ಅವರು ಹೊರ ರಾಜ್ಯದಿಂದ ಉತ್ತರ ಕನ್ನಡ ಪ್ರವೇಶಿಸುವಾಗ ಸಾಂಸ್ಥಿಕ ಕ್ವಾರಂಟೈನ್ ಆಗಿರುವ ಕಾರಣ, ಕೋವಿಡ್ ಸಮುದಾಯಕ್ಕೆ ಹೋಗಿಲ್ಲ. ಹಾಗಾಗಿ ಕೋವಿಡ್‌ಗೆ ಭಯಪಡಬೇಕಿಲ್ಲ. ಈಗ ಆಸ್ಪತ್ರೆಯಲ್ಲಿರುವ ಉಳಿದ 33 ಜನರು ಗುಣಮುಖರಾಗಲಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ರವಿವಾರದ ಲಾಕ್ ಡೌನ್‌ಗೆ ಜನ ಸಹಕರಿಸಬೇಕು ಎಂದರು.
ಕೋವಿಡ್‌ನಿಂದ ಗುಣಮುಖರಾದವರಲ್ಲಿ ಎಲ್ಲರೂ ಭಟ್ಕಳದವರೇ ಆಗಿದ್ದು, ಅವರು ಆಸ್ಪತ್ರೆ ವಾರ್ಡ್‌ನಲ್ಲಿ ದಾದಿಯರು ಚೆನ್ನಾಗಿ ನೋಡಿಕೊಂಡರು. ಆರಂಭದಲ್ಲಿ
ಆಸ್ಪತ್ರೆ ವಾತಾವರಣಕ್ಕೆ ಒಗ್ಗಿಕೊಳ್ಳಲು ಕಷ್ಟವಾಯಿತು. ನಂತರ ಎಲ್ಲವೂ ಸರಿಯಿತ್ತು. ಚಿಕಿತ್ಸೆಗೆ ನಾವು ಸಹ ಸಹಕಾರ ನೀಡಿದೆವು ಎಂದು ಹೆಸರು ಹೇಳಲು ಇಚ್ಚಿಸದ ಕೋವಿಡ್ ಮುಕ್ತರೊಬ್ಬರು ಹೇಳಿದರು. ವಿಶೇಷವಾಗಿ ಜಿಪಂ ಸಿಇಒ ಎಂ.ರೋಶನ್ ಚಿಕಿತ್ಸೆಗೆ ಹೇಗೆ ಸಹಕರಿಸಬೇಕೆಂದು ಆತ್ಮವಿಶ್ವಾಸ ತುಂಬಿದರು. ಅವರ ಮಾತುಗಳು ನಮಗೆ ಸ್ಫೂ ರ್ತಿ ತಂದವು ಎಂದರು.
ಕಿಮ್ಸ್ ನಿರ್ದೇಶಕ ಗಜಾನನ ನಾಯಕ, ವೈದ್ಯರ ಹಾಗೂ ನರ್ಸ್‌ಗಳ ಸಾಹಸ, ಧೈರ್ಯ ಸ್ಮರಿಸಿದರು. ಡಿಎಚ್‌ಓ ಅಶೋಕಕುಮಾರ್, ಸಿಇಓ ಮೊಹಮ್ಮದ್ ರೋಶನ್, ಎಸ್ಪಿ ಶಿವಪ್ರಕಾಶ್ ದೇವರಾಜು ಉಪಸ್ಥಿತರಿದ್ದರು.