Advertisement
ನೈತಿಕ ಮತದಾನ ಜಾಗೃತಿ: ಮತದಾರರ ಪಟ್ಟಿಯಲ್ಲಿನ ಹತ್ತು ಹಲವು ಗೊಂದಲಗಳು ಮತದಾರರನ್ನು ಮತಟಗಟ್ಟೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಮತದಾರರನ್ನು ಮತಗಟ್ಟೆಗೆ ಕರೆತರುವ ಸಲುವಾಗಿಯೇ ಈ ಬಾರಿ ಮತದಾರರರಲ್ಲಿ ನೋಂದಣಿ ಮತ್ತು ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ವತಿಯಿಂದ ವಿವಿಧ ರೀತಿಯ ಪ್ರಚಾರ ಕಾರ್ಯ ಕೈಗೊಂಡರೂ ಜಿಲ್ಲೆಯಲ್ಲಿ ಒಟ್ಟಾರೆ ಮತದಾನದ ಪ್ರಮಾಣ ಹೆಚ್ಚಳವಾಗಿದ್ದು, ಕೇವಲ ಶೇ.4 ಮಾತ್ರ!
ಮತಯಂತ್ರ, ವಿವಿ ಪ್ಯಾಟ್‌ಗಳನ್ನು ಬಳಸುವ ಬಗ್ಗೆ ಮೈಸೂರು ನಗರದ ಎಲ್ಲಾ ಮಾಲ್‌ಗಳಲ್ಲಿ, ಮೈಸೂರು ಅರಮನೆ, ಮೃಗಾಲಯ ಮತ್ತು ಸರ್ಕಾರಿ ಕಚೇರಿಗಳಲ್ಲಿ ಪ್ರಾತ್ಯಕ್ಷತೆ ನೀಡಲಾಗಿತ್ತು.
Related Articles
Advertisement
ಹೀಗಾಗಿ ಮತದಾನದ ಪ್ರಮಾಣವನ್ನು ಉತ್ತಮಪಡಿಸಲು ಆಯಾ ಪ್ರದೇಶದಲ್ಲಿ ಸ್ವೀಪ್ ಸಮಿತಿಯಿಂದ ಮನೆ ಮನೆಗೆ ಭೇಟಿ ನೀಡಿ ಕಡ್ಡಾಯ ಮತದಾನದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಲ್ಲದೆ, ಮತದಾರರು ಕಡ್ಡಾಯವಾಗಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವ ಬಗ್ಗೆ ಮಾನವ ಸರಪಳಿ, ಜಾಥಾ ಮೊದಲಾದ ಕಾರ್ಯಕ್ರಮಗಳ ಮೂಲಕ ತಿಳಿವಳಿಕೆ ಮೂಡಿಸಲಾಗಿತ್ತು.
ವಿಶೇಷ ಮತಗಟ್ಟೆ: ಮಹಿಳಾ ಮತದಾರರನ್ನು ಆಕರ್ಷಿಸಲು ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ ಕೆಲವನ್ನು ಆಯ್ಕೆ ಮಾಡಿಕೊಂಡು ಜಿಲ್ಲೆಯಲ್ಲಿ 24 ಮತಗಟ್ಟೆಗಳನ್ನು ಸಖೀ ಮತಗಟ್ಟೆಗಳೆಂದು ಹೆಸರಿಸಲಾಗಿತ್ತು.
ಗಿರಿಜನರನ್ನು ಮತಗಟ್ಟೆಗೆ ತರಲು ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣಗಳಲ್ಲಿ ಆದಿವಾಸಿಗಳಿಗಾಗಿಯೇ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇಷ್ಟೆಲ್ಲದರ ಮಧ್ಯೆಯೂ ನಗರ ಪ್ರದೇಶದ ಮತದಾರರು ಮತಗಟ್ಟೆಗೆ ಬರಲು ನಿರುತ್ಸಾಹ ತೋರಿದ್ದಾರೆ. ಇದರ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ದಾಖಲೆಯ ಮತದಾನವಾಗಿದ್ದರೆ, ಮೈಸೂರು ನಗರದ ಕೃಷ್ಣರಾಜ-ಶೇ.58.86, ಚಾಮರಾಜ-ಶೇ.59.18 ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ಶೇ.61.43 ಮತದಾನವಾಗಿದೆ.
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಪ್ರವೀಣ್ ಕುಮಾರ್ ಮನೆಗೆ ಚುನಾವಣಾ ಆಯೋಗದಿಂದ ನೀಡಲಾದ ಗುರುತಿನ ಚೀಟಿಯಲ್ಲಿ ಹೆಸರಿಸಲಾಗಿದ್ದ ಕನಕಗಿರಿ ಸರ್ಕಾರಿ ಶಾಲೆಯ ಮತಗಟ್ಟೆಗೆ ಮತದಾನ ಮಾಡಲು ಬೆಳಗ್ಗೆ 10ಗಂಟೆಗೆ ಉತ್ಸಾಹದಿಂದ ಹೋದರೆ, ಅಲ್ಲಿನ ಮತದಾರರ ಪಟ್ಟಿಯಲ್ಲಿ ಇವರ ಹೆಸರನ್ನೇ ತೆಗೆದುಹಾಕಲಾಗಿತ್ತು. ಮೂರ್‍ನಾಲ್ಕು ಮತಗಟ್ಟೆಗಳಲ್ಲಿ ವಿಚಾರಿಸಿದರೂ ಹೆಸರು ಪತ್ತೆಯಾಗಲಿಲ್ಲ.
ಹೀಗಾಗಿ ಸಹಾಯವಾಣಿ 1950ಗೆ ಕರೆ ಮಾಡಿದಾಗ ಮನೆಯಿಂದ 2 ಕಿಲೋ ಮೀಟರ್ ದೂರವಿರುವ ಗೌರಿಶಂಕರ ನಗರದ ಗೌರಿಶಂಕರ ಹೈಸ್ಕೂಲ್ ಮತಗಟ್ಟೆಗೆ ಹೋಗುವಂತೆ ತಿಳಿಸಲಾಯಿತು. ಈ ಹುಡುಕಾಟದ ಪರಿಣಾಮ ಮಧ್ಯಾಹ್ನ 3ಗಂಟೆ ವೇಳೆಗೆ ಮತದಾನ ಮಾಡಬೇಕಾಯಿತು. ಆದರೆ, ಮತಗಟ್ಟೆ ಬಗ್ಗೆ ಮಾಹಿತಿ ಇರುವ ಸಂದೇಶ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಭಾನುವಾರ ಮಧ್ಯಾಹ್ನ 3.20ಕ್ಕೆ ಮೊಬೈಲ್‌ಗೆ ಸಂದೇಶ ಬಂದಿದೆ. ಇಷ್ಟೆಲ್ಲಾ ಸುತ್ತಾಡಿಸಿದರೆ ಮತದಾರರು ಹೇಗೆ ಮತಗಟ್ಟೆಗೆ ಬರುತ್ತಾರೆ ಎಂದು ಪ್ರಶ್ನಿಸುತ್ತಾರೆ ಅವರು.
* ಗಿರೀಶ್ ಹುಣಸೂರು