Advertisement

ಪ‹ಜ್ಞಾವಂತ ಸಮಾಜ ನಿರ್ಮಿಸಿ: ರಾಷ್ಟ್ರಪತಿ ಕರೆ

07:00 AM Jan 26, 2018 | Karthik A |

ಹೊಸದಿಲ್ಲಿ: ನಮ್ಮ ಸಮಾಜವನ್ನು ನಾಗರಿಕ ಪ್ರಜ್ಞೆಯುಳ್ಳ ಸಮಾಜವನ್ನಾಗಿಸುವ ಆವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿಯ, ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ವಿಚಾರವೊಂದರ ಬಗ್ಗೆ ಪರ- ವಿರೋಧ ಧೋರಣೆಗಳು ಎದುರಾದಾಗ, ಒಂದು ಧೋರಣೆ ಹೊಂದಿರುವವರು ವಿರೋಧ ಧೋರಣೆ ಹೊಂದಿರುವವರ ಗೌರವಕ್ಕೆ ಚ್ಯುತಿ ತಾರದಂತೆ ನಡೆದುಕೊಳ್ಳಬೇಕೆಂದು ಕರೆ ನೀಡಿದ್ದಾರೆ. ಈ ಮೂಲಕ, ‘ಪದ್ಮಾವತ್‌’ ಚಿತ್ರದ ಹಿನ್ನೆಲೆಯಲ್ಲಿ, ದೇಶಾದ್ಯಂತ ಭುಗಿಲೆದ್ದಿರುವ ಗಲಭೆ ಹಿನ್ನೆಲೆಯಲ್ಲಿ ಅವರು ಪರೋಕ್ಷ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ಸಮಾಜದ ಪ್ರತಿ ಸಂಸ್ಥೆಗಳ ನಡುವೆ ನೈತಿಕತೆ ಇರುವುದು ಅತ್ಯವಶ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಅಲ್ಲದೆ, ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ಅನೇಕರು ಒಂದೇ ಧ್ಯೇಯದೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರ ಫ‌ಲವಾಗಿ ಸ್ವಾತಂತ್ರ್ಯ ಸಿಕ್ಕಿತು. ಇದರ ಫ‌ಲದಿಂದ ಸಂವಿಧಾನ ರಚನೆಯಾಯಿತು. ಸ್ವಾತಂತ್ರ್ಯ ಹಾಗೂ ಸಂವಿಧಾನಕ್ಕಾಗಿ ಶ್ರಮಿಸಿದ ಮಹಾನ್‌ ವ್ಯಕ್ತಿಗಳನ್ನೇ ಆದರ್ಶವಾಗಿಟ್ಟುಕೊಂಡು ನಾವು ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಿದೆ ಎಂದರು. ಇದೇ ವೇಳೆ, ಬಡವರ ಕಲ್ಯಾಣ ನಮ್ಮ ಮೂಲಮಂತ್ರವಾಗಬೇಕೆಂದು ಆಶಿ ಸಿದ ಅವರು, “ಇತರರಿಗೆ ಸಹಾಯ ಮಾಡುವ ಗುಣ ನಮ್ಮ ಸಮಾಜದ ಅಡಿಪಾಯ. ಈ ವಿಶೇಷ ಗುಣದಿಂದ ನಮ್ಮಲ್ಲಿರುವ ಬಡವರ ಕಲ್ಯಾಣಕ್ಕಾಗಿ ಸಹಾಯ ಹಸ್ತ ಚಾಚಬೇಕಿದೆ” ಎಂದಿದ್ದಾರೆ. 

ಭಾಷಣದ ಆರಂಭದಲ್ಲೇ, ಹುತಾತ್ಮ ಯೋಧರು, ವೈದ್ಯರು, ರೈತರು, ಶುಶ್ರೂಷಕಿಯರು, ವಿಜ್ಞಾನಿಗಳು, ಎಂಜಿನಿಯರ್‌ಗಳು, ತಾಯಂದಿರು ಹಾಗೂ ಸಮಾಜದ ಎಲ್ಲಾ ವರ್ಗಗಳ ಶ್ರಮಿಕರಿಗೆ ಧನ್ಯವಾದ ಅರ್ಪಿಸಿದ ಅವರು, ಸ್ವಾತಂತ್ರ್ಯ ಹೋರಾಟಗಾರರನ್ನೂ ಸ್ಮರಿಸಿದರು. ಭಾರತದ ಜನಸಂಖ್ಯೆಯ ಶೇ.60ರಷ್ಟು ಪಾಲು 35 ವರ್ಷ ವಯಸ್ಸಿಗಿಂತ ಕಡಿಮೆಯವರಾಗಿದ್ದು, ಇದರ ಉಪಯೋಗವನ್ನು ಯುವಜನರು ಪಡೆಯಬೇಕು” ಎಂದು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next