Advertisement

ಸಾವಿರ ದಿವ್ಯಾಂಗರಿಗೆ ಡ್ರೈವಿಂಗ್‌ ಲೈಸೆನ್ಸ್‌ ಮಾಡಿಸಿದ ದಿವ್ಯಾಂಗ

03:34 PM Nov 03, 2018 | |

ಉಡುಪಿ : ಚಾಲನಾ ಪರವಾನಿಗೆ ಪಡೆಯುವುದು ದಿವ್ಯಾಂಗರಿಗೆ ಅಷ್ಟು ಸುಲಭದ ಕೆಲಸವಲ್ಲ. ಇದನ್ನು ಮನಗಂಡು ಸ್ವತಃ ದಿವ್ಯಾಂಗರಾದ ಅಂಬಲಪಾಡಿಯ ಸಾವಿರಕ್ಕೂ ಹೆಚ್ಚು ಮಂದಿಗೆ ನೆರವಾಗಿದ್ದಾರೆ. ಸುಮಾರು ನೂರು ಮಂದಿಗೆ ಉಚಿತವಾಗಿ ಡ್ರೈವಿಂಗ್‌ ತರಬೇತಿ ಕೊಡಿಸಿದ್ದೂ ಇವರ ಸಾಧನೆ.

Advertisement

ಉದ್ಯಾವರದ ಐಟಿಐ ಕಾಲೇಜಿನಲ್ಲಿ ಉದ್ಯೋಗದಲ್ಲಿರುವ ಜಗದೀಶ್‌ ಭಟ್‌ ಹುಟ್ಟುವಾಗ ಸಾಮಾನ್ಯ ಮಗುವಾಗಿ ಹುಟ್ಟಿದ್ದರು. ಆದರೆ 6ನೇ ವಯಸ್ಸಿಗೆ ಪೋಲಿಯೋ ಕಾಯಿಲೆಗೆ ಈಡಾಗಿದ್ದು, ಪರಿಣಾಮ ಒಂದು ಕಾಲು ಸ್ವಾಧೀನ ಕಳೆದುಕೊಂಡಿತ್ತು. ಆದರೂ ಧೃತಿಗೆಡದ ಜಗದೀಶ್‌ ಕಷ್ಟಪಟ್ಟು ಕಲಿತು ಪದವಿ ಶಿಕ್ಷಣವನ್ನು ಪೂರೈಸಿದರು. ಸ್ವಾವಲಂಬಿ ಜೀವನ ಸಾಗಿಸಬೇಕೆಂದು ದ್ವಿಚಕ್ರ ವಾಹನ ಚಾಲನಾ ತರಬೇತಿಯನ್ನೂ ಪಡೆದರು.

ಚಾಲನಾ ಪರವಾನಿಗೆ ಪಡೆಯಲು ನೆರವು
ದೈಹಿಕವಾಗಿ ಸೂಕ್ಷ್ಮವಾಗಿರುವ ವಿಕಲ ಚೇತನರಿಗೆ ವಾಹನ ತರಬೇತಿ ನೀಡಲು ಸಾಮಾನ್ಯವಾಗಿ ಯಾರೂ ಧೈರ್ಯ ಮಾಡುವುದಿಲ್ಲ. ಇದರಿಂದ ಸಾಕಷ್ಟು ಜನರಿಗೆ ವಾಹನ ತರಬೇತಿ ಪಡೆಯುವ ಕನಸು ಈಡೇರುವುದೇ ಇಲ್ಲ. ಇದಕ್ಕೊಂದು ಪರಿಹಾರ ನೀಡಬೇಕೆಂದು ಸ್ವತಃ ತರಬೇತಿ ನೀಡಲು ನಿಂತರು. ನೂರಕ್ಕೂ ಅಧಿಕ ಮಂದಿ ವಿಕಲಚೇತನರಿಗೆ ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ವಾಹನ ತರಬೇತಿ ನೀಡಿರುವ ಇವರು, ಸುಮಾರು ಸಾವಿರಕ್ಕೂ ಮಿಕ್ಕಿ ವಿಕಲಚೇತನರಿಗೆ ಮತ್ತು ಪರವಾನಿಗೆ ಮಾಡಿಕೊಟ್ಟಿದ್ದಾರೆ. ಎಷ್ಟೋ ಜನ ವಿಕಲಚೇತನರು ಆರ್‌ಟಿಒ ಕಚೇರಿಗೆ ತೆರಳಿದ ಸಂದರ್ಭ ವಾಹನ ಪರವಾನಿಗೆ ಮಾಡಿಸಿಕೊಳ್ಳಲು ಕಷ್ಟಪಡುತ್ತಾರೆ ಆ ಸಂದರ್ಭ ಆರ್‌ಟಿಒ ಸಿಬಂದಿಯೇ ಇವರ ದೂರವಾಣಿ ಸಂಖ್ಯೆ ನೀಡಿ ಇವರ ಸಹಕಾರ ಪಡೆಯಲು ತಿಳಿಸುತ್ತಾರೆ.

ಯಕ್ಷಗಾನ, ಹುಲಿವೇಷದ ಆಸಕ್ತಿ
ಜಿಲ್ಲಾ ವಿಕಲಚೇತನರ ಒಕ್ಕೂಟದ ಉಪಾಧ್ಯಕ್ಷರೂ ಕೂಡ ಆಗಿರುವ ಇವರು, ಹಲವಾರು ಮಂದಿ ದಿವ್ಯಾಂಗರಿಗೆ ಕಾನೂನು, ಸವಲತ್ತು ಮಾಹಿತಿ ನೀಡುತ್ತಾರೆ. ಇದೀಗ ದಿವ್ಯಾಂಗರ ಯಕ್ಷಗಾನ ತಂಡವೊಂದನ್ನು ಕಟ್ಟಿಕೊಂಡು ವಿವಿಧೆಡೆ ಪ್ರದರ್ಶನ ನೀಡಿದ್ದಾರೆ. ಪ್ರತಿ ವರ್ಷ ಕೃಷ್ಣಾಷ್ಟಮಿಗೆ ಹುಲಿವೇಷ ಕುಣಿಯುತ್ತಾರೆ. ಈ ಹಿಂದೆ ವೇಷ ಹಾಕಿದ್ದ ಸಂದರ್ಭ ಶ್ರೀ ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರೂ ಇವರ ಜೀವನೋತ್ಸಾಹ ಕೊಂಡಾಡಿದ್ದರು.

ಪ್ರತಿಭೆಗೆ ಪ್ರೋತ್ಸಾಹ ನೀಡಿ
ದಿವ್ಯಾಂಗರಲ್ಲಿ ಸಾಕಷ್ಟು ಮಂದಿ ಪ್ರತಿಭಾನ್ವಿತರಿದ್ದಾರೆ. ಇವರಿಗೆ ಸೂಕ್ತ ಬೆಂಬಲ, ಪ್ರೋತ್ಸಾಹ ಸಿಗುತ್ತಿಲ್ಲ. ಅವರನ್ನು ಅನುಕಂಪದ ದೃಷ್ಟಿಯಿಂದ ನೋಡುವ ಬದಲು ಸಾಮಾನ್ಯ ದೃಷ್ಟಿಯಿಂದ ನೋಡಿ ಪ್ರೋತ್ಸಾಹಿಸಿ’
– ಜಗದೀಶ್‌ ಭಟ್‌, ದಿವ್ಯಾಂಗ

Advertisement

ಹಲವರಿಗೆ ತರಬೇತಿ
ಹಲವಾರು ವಿಕಲಚೇತನರಿಗೆ ವಾಹನ ಚಾಲನಾ ತರಬೇತಿ ಮತ್ತು ಪರವಾನಿಗೆ ಮಾಡಿಸಿಕೊಟ್ಟಿದ್ದಾರೆ. ಯಾರಿಂದಲೂ ಹಣವನ್ನು ಪಡೆದಿಲ್ಲ. ನಾನೇ ಹಲವು ಮಂದಿ ವಿಕಲಚೇತನರಿಗೆ ಇವರ ಮೂಲಕ ಲೈಸೆನ್ಸ್‌ ಮಾಡಿಸಿಕೊಟ್ಟಿದ್ದೇನೆ’.
ವಿಲ್ಫ್ರೆಡ್ ಡ್‌ ಗೋಮ್ಸ್‌,
  ಅಧ್ಯಕ್ಷರು, ವಿಕಲಚೇತನ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next