Advertisement

ಯುವಕರಿಬ್ಬರ ಭವಿಷ್ಯ ಕಸಿದುಕೊಂಡ ಅಂಗವೈಕಲ್ಯ​​​​​​​

06:00 AM Aug 20, 2018 | Team Udayavani |

ಉಡುಪಿ: ಎತ್ತರದ ಸ್ಥಳದಲ್ಲಿ ಒಂದೂ ಮುಕ್ಕಾಲು ಸೆಂಟ್ಸ್‌ ಜಾಗದಲ್ಲಿರುವ ಮನೆಯಲ್ಲಿ ಒಂದು ಬಡಕುಟುಂಬ. ಅದರಲ್ಲಿ ಇಬ್ಬರು ಬಾಲಕರು ಹಾಸಿಗೆ ಬಿಟ್ಟೇಳದ ಸ್ಥಿತಿಯಲ್ಲಿದ್ದಾರೆ. ತಾಯಿ ಮತ್ತು ಅಜ್ಜಿ ಈ ಮಕ್ಕಳ ಆರೈಕೆ ಮಾಡುತ್ತಿದ್ದಾರೆ. 

Advertisement

ಮಣಿಪಾಲ ಸಮೀಪದ ಸರಳೇಬೆಟ್ಟು ಗಣೇಶ್‌ಭಾಗ್‌ನ ಪ್ರಮೀಳ ಪೂಜಾರಿ ಅವರ ಪುತ್ರರಾದ ಧನುಷ್‌(19) ಮತ್ತು ದರ್ಶನ್‌(16) “ಡ್ನೂಸೆನ್‌ ಮಸ್ಕಾéಲರ್‌ ಡಿಸ್ಟ್ರೋಫಿ’ ಎಂಬ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇದೇ ಅಂಗವೈಕಲ್ಯ ಅವರ ವಿದ್ಯಾಭ್ಯಾಸವನ್ನು ಕಸಿದುಕೊಂಡಿದೆ. ಈ ಎರಡೂ ಮಕ್ಕಳು ಕೂಡ ಎದ್ದು ಕುಳಿತುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಪ್ರತಿಯೊಂದು ಕೆಲಸವನ್ನು ಕೂಡ ಇತರರೇ ಮಾಡಿಸಬೇಕು.

ಡಿಪ್ಲೊಮಾ ಓದಿದ ಧನುಷ್‌
ಧನುಷ್‌ ಹುಟ್ಟಿದ ಮೂರುವರೆ ವರ್ಷದಲ್ಲಿ ಆತನಿಗೆ ಶೀತ ಜ್ವರ ಬಂತು. ಅನಂತರ ಪರೀಕ್ಷಿಸಿದಾಗ ಮಣಿಪಾಲದ ವೈದ್ಯರು “ಡ್ನೂಸೆನ್‌ ಮಸ್ಕಾéಲರ್‌ ಡಿಸ್ಟ್ರೋಫಿ’ ಎಂಬ ಕಾಯಿಲೆ ಇರುವುದನ್ನು ಪತ್ತೆ ಹಚ್ಚಿದರು. ಅದಕ್ಕೆ ಔಷಧಿ ನೀಡುತ್ತಾ ಬಂದರು. ಆತ ಎಲ್ಲ ಮಕ್ಕಳಂತೆಯೇ ಆಟವಾಡುತ್ತಿದ್ದ. 5ನೇ ಕ್ಲಾಸಿನವರೆಗೆ ಸರಿಯಾಗಿದ್ದ ಹುಡುಗನಿಗೆ 6ನೇ ತರಗತಿಯಲ್ಲಿ ಸೊಂಟದ ಕೆಳಗೆ ಸ್ವಾಧೀನ ಕಳೆದುಕೊಳ್ಳುತ್ತಾ ಹೋಯಿತು. 10ನೇ ತರಗತಿವರೆಗೆ ತಾಯಿಯ ಸಹಾಯದಿಂದ ರಿಕ್ಷಾದಲ್ಲಿ ಮಣಿಪಾಲಕ್ಕೆ ಹೋಗಿ ವಿದ್ಯಾಭ್ಯಾಸ ಪಡೆದ. ಎಸೆಸೆಲ್ಸಿಯಲ್ಲಿ  ಶೇ. 61 ಅಂಕ ಪಡೆದಿದ್ದ. ಬಳಿಕ ಫ್ರೀಶಿಪ್‌ ನೆರವಿನಿಂದ ಮಣಿಪಾಲದಲ್ಲಿ ಡಿಪ್ಲೊಮಾ ಸೇರಿದ. ಅಲ್ಲಿಯೂ ಶಿಕ್ಷಣ ಮುಂದುವರಿಸುವುದು ಅಸಾಧ್ಯವಾಗಿ ಪ್ರಸ್ತುತ ಧನುಷ್‌ ಮನೆಯಲ್ಲಿ ಹಾಸಿಗೆಯಲ್ಲೇ ಇದ್ದು 3 ವರ್ಷಗಳಾಯಿತು. ಪ್ರತಿಯೊಂದು ಕೆಲಸಕ್ಕೂ ತಾಯಿ/ ಅಜ್ಜಿಯನ್ನೇ ಅವಲಂಬಿಸಿದ್ದಾನೆ.

ದರ್ಶನ್‌ಗೂ ಅದೇ ಸಮಸ್ಯೆ
ಧನುಷ್‌ ತಮ್ಮ ದರ್ಶನ್‌ನದ್ದೂ ಇದೇ ಸಮಸ್ಯೆ. ಹುಟ್ಟುವಾಗ ಸಾಮಾನ್ಯ ಮಕ್ಕಳಂತೆಯೇ ಇದ್ದ. ಅಣ್ಣನಿಗೆ ಸಮಸ್ಯೆ ಇದ್ದುದರಿಂದ ತಮ್ಮನನ್ನು ಕೂಡ ವೈದ್ಯರಿಗೆ ತೋರಿಸಲು ಪ್ರಮೀಳಾ ಅವರು ಕರೆದು ಕೊಂಡು ಹೋಗಿದ್ದರು. ಆಗ ಅಲ್ಲೂ ಅವರಿಗೆ ಶಾಕ್‌ ಕಾದಿತ್ತು. ದರ್ಶನ್‌ಗೂ ಡ್ನೂಸೆನ್‌ ಮಸ್ಕಾéಲರ್‌ ಡಿಸ್ಟ್ರೋಪಿ ಇದೆ ಎಂದು ವೈದ್ಯರು ಹೇಳಿದ್ದರು. 5ನೇ ತರಗತಿವರೆಗೆ ಸಾಮಾನ್ಯರಂತೆ ಇದ್ದ ದರ್ಶನ್‌ ದೇಹ ಬಳಿಕ ಬಲಕಳೆದುಕೊಳ್ಳುತ್ತಾ ಬಂದಿದೆ. ಔಷಧ ಮುಂದುವರಿದರೂ 9ನೇ ತರಗತಿ ಪೂರ್ಣಗೊಳಿಸುವುದೂ ಅಸಾಧ್ಯವಾಯಿತು. ಈಗ ಇವರಿಬ್ಬರೂ ಔಷಧ ತೆಗೆದುಕೊಳ್ಳುತ್ತಲೇ ಇದ್ದಾರೆ. 
  
ಇವರಿಗೆ ರೆಡ್‌ಕ್ರಾಸ್‌ ವತಿಯಿಂದ ವೀಲ್‌ಚೆಯರ್‌ ನೀಡಲಾಗಿದ್ದರೂ ಅದನ್ನು ಬಳಸಲು ಸ್ಥಳ ಸೂಕ್ತವಾಗಿಲ್ಲ. ಸ್ಥಳೀಯ ರೀಕ್ಷಾ ಚಾಲಕ ಉದಯ ನಾಯಕ್‌ ಅವರು ಎಷ್ಟೋ ಬಾರಿ ಮಕ್ಕಳಿಗೆ ನೆರವಾಗಿದ್ದಾರೆ. ಬೆಳಗ್ಗೆ ಬೇರೆಯವರ ಮನೆಗಳಿಗೆ ಮನೆಕೆಲಸಕ್ಕೆ ಹೋಗಿ ಅನಂತರ ಮನೆಗೆ ವಾಪಸಾಗುವ ಪ್ರಮೀಳಾ ಅವರು ತಮ್ಮ ತಾಯಿ ಅಪ್ಪಿ ಪೂಜಾರ್ತಿ ಅವರ ಜತೆಗೆ ಮಕ್ಕಳ ಆರೈಕೆಯಲ್ಲಿ ತೊಡಗುತ್ತಾರೆ. ಇವರಿಗೆ ತುರ್ತು ನೆರವು ಬೇಕಾಗಿದ್ದು, ಸಹಾಯ ಮಾಡಲಿಚ್ಛಿಸುವವರು ಸಿಂಡಿಕೇಟ್‌ ಬ್ಯಾಂಕ್‌ ಮಣಿಪಾಲ ಶಾಖೆ ಧನುಷ್‌ ಖಾತೆ ಸಂಖ್ಯೆ 01112210055279 IFSC code : SYNB 0000111 Syndicate Bank main branch manipalಗೆ ಸಲ್ಲಿಸಬಹುದು. 

ಲ್ಯಾಪ್‌ಟಾಪ್‌ನಲ್ಲಿ ಏನಾದರೂ ಮಾಡುವೆ
ಡಿಪ್ಲೊಮಾ ಮಾಡಬೇಕೆಂಬ ಆಸೆ ಯಿತ್ತು. ಆದರೆ ಲ್ಯಾಬ್‌ಗ ಹೋಗಲು, ಎಕ್ಸಾಮ್‌ ಹಾಲ್‌ಗೆ ಹೋಗುವುದು ಕೂಡ ಕಷ್ಟವಾಯಿತು. ಬೆನ್ನು ನೋವಿನಿಂದ ಕುಳಿತುಕೊಳ್ಳುವುದು ಕೂಡ ಕಷ್ಟವಾಯಿತು. ಹಾಗಾಗಿ ಅನಿವಾರ್ಯವಾಗಿ ವಿದ್ಯಾಭ್ಯಾಸ ನಿಲ್ಲಿಸಿದ್ದೇನೆ. ಈಗ ಮನೆಯಲ್ಲಿ ನನ್ನ ಮತ್ತು ತಮ್ಮನನ್ನು ಅಮ್ಮ ಮತ್ತು ಅಜ್ಜಿ ನೋಡಿಕೊಳ್ಳು ವಂತಾಗಿದೆ. ಲ್ಯಾಪ್‌ಟಾಪ್‌ನಲ್ಲೇ ಏನಾದರೂ ಕೆಲಸ ಮಾಡಿ ದುಡಿಯೋಣ ಎಂಬ ಆಸೆ ಇದೆ. 
– ಧನುಷ್‌ 

Advertisement

ಖಾಯಿಲೆ ಪೂರ್ಣ ಗುಣಪಡಿಸಲು ಚಿಕಿತ್ಸೆ ಇಲ್ಲ 
ಕಾಯಿಲೆ ವೇಗವಾಗಿ ಬೆಳೆಯದಂತೆ ನಿಯಂತ್ರಿಸುವುದಕ್ಕೆ ಔಷಧಿ ನೀಡಿದ್ದರಿಂದ ಧನುಷ್‌ ಇಷ್ಟರ ಮಟ್ಟಿಗೆ ವಿದ್ಯಾಭ್ಯಾಸ ಮಾಡುವುದು ಸಾಧ್ಯವಾಯಿತು. ಇಂತಹ ಕಾಯಿಲೆಯನ್ನು ಪೂರ್ಣವಾಗಿ ಗುಣಪಡಿಸಲು ಚಿಕಿತ್ಸೆ ಇಲ್ಲ. ಇರುವ ಔಷಧಿಯ ಮೂಲಕ ಒಂದು ಹಂತಕ್ಕೆ ನಿಯಂತ್ರಿಸ ಬಹುದು.
– ಡಾ| ನಳಿನಿ,
ಚಿಕಿತ್ಸೆ ನೀಡಿರುವ ವೈದ್ಯೆ 

Advertisement

Udayavani is now on Telegram. Click here to join our channel and stay updated with the latest news.

Next