Advertisement

ಸಾರ್ವಜನಿಕರಿಂದಲೇ ದುರ್ಗಾಂಬಾ ಕ್ರೀಡಾಂಗಣ ದುರಸ್ತಿ 

01:58 PM Jan 12, 2018 | Team Udayavani |

ಆಲಂಕಾರು: ಕೆಲವು ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಆಲಂಕಾರು ಶ್ರೀ ದುರ್ಗಾಂಬಾ ಕ್ರೀಡಾಂಗಣಕ್ಕೆ ಸಾರ್ವಜನಿಕರ ಮುತುವರ್ಜಿಯಿಂದ ಕೊನೆಗೂ ಮುಕ್ತಿ ಸಿಕ್ಕಿದೆ. ಇದೀಗ ಕ್ರೀಡಾಂಗಣದ ದುರಸ್ತಿ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ.

Advertisement

ಆಲಂಕಾರು ಪೇಟೆಯ ಸಮೀಪ ಮೈಸೂರು – ಧರ್ಮಸ್ಥಳ ರಸ್ತೆ ಪಕ್ಕದಲ್ಲೇ ಇರುವ ಈ ಕ್ರೀಡಾಂಗಣಕ್ಕೆ ‘ದುರ್ಗಾಂಬಾ ಕ್ರೀಡಾಂಗಣ’ ಎಂದು ನಾಮಕರಣ ಮಾಡಿದ್ದರು. ಆಲಂಕಾರು ಮತ್ತು ಆಸುಪಾಸಿನ ಗ್ರಾಮಗಳ ಹಲವು ಕ್ರೀಡಾಪಟುಗಳನ್ನು ಈ ಮೈದಾನವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುವಂತೆ ಮಾಡಿದೆ. ಇತ್ತೀಚೆಗೆ ಜಾತಿ ರಾಜಕಾರಣದ ಹಿನ್ನೆಲೆಯಲ್ಲಿ ಅವರವರ ಜಾತಿ, ಧರ್ಮಕ್ಕೆ ಅನುಗುಣವಾಗಿ ಈ ಕ್ರೀಡಾಂಗಣಕ್ಕೆ ಹೆಸರಿಟ್ಟು ಕರೆಯುವುದೂ ಉಂಟು.

ಸ್ಥಳೀಯ ವಿದ್ಯಾಸಂಸ್ಥೆಯ ಅಧೀನದಲ್ಲಿದ್ದ ಈ ಕ್ರೀಡಾಂಗಣವು ಆಲಂಕಾರು, ಕುಂತೂರು, ಪೆರಾಬೆ, ಬಲ್ಯ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿತ್ತು. ಹಲವು ಸಂಘಟನೆಗಳು ಇಲ್ಲಿ ಕ್ರೀಡಾಕೂಟ ಸಂಘಟಿಸುತ್ತಿದ್ದವು. ಯಾವಾಗ ಅದು ಸ್ಥಳೀಯ ವಿದ್ಯಾ ಸಂಸ್ಥೆಯ ಸೊತ್ತು ಅಲ್ಲ, ಡಿ.ಸಿ. ಮನ್ನಾ ಜಾಗ ಎಂದು ಬದಲಾಯಿತೋ ಅಲ್ಲಿಂದ ಕ್ರೀಡಾಂಗಣದ ಅವನತಿಯೂ ಆರಂಭವಾಯಿತು. ಗಿಡಗಂಟಿಗಳು ಬೆಳೆದು ಕಾಡಿನ ರೂಪ ಪಡೆದುಕೊಂಡು, ಕ್ರೀಡಾಂಗಣ ಅನಾಥವಾಯಿತು.

ರಸ್ತೆ ದುರಸ್ತಿ, ಮೈದಾನಕ್ಕೆ ಅಧೋಗತಿ
ಆಲಂಕಾರು ಶಾಂತಿಮೊಗರು ರಸ್ತೆ ವಿಸ್ತರಣೆ ಸಮಯದಲ್ಲಿ ಹಳೆಯ ರಸ್ತೆಯಲ್ಲಿದ್ದ ಜಲ್ಲಿ, ಮಣ್ಣನ್ನು ಮೈದಾನದಲ್ಲಿ ಸಂಗ್ರಹಿಸಿಟ್ಟದ್ದೇ ಇದರ ಭವಿಷ್ಯಕ್ಕೆ ಮುಳುವಾಗಿದೆ. ರಸ್ತೆ ಕಾಮಗಾರಿ ಮುಗಿದ ಬಳಿಕ ಮೈದಾನವನ್ನು ಸಂಪೂರ್ಣವಾಗಿ ದುರಸ್ತಿ ಮಾಡಿ ಕೊಡುವುದಾಗಿ ಸ್ಥಳೀಯ ಆಡಳಿತಕ್ಕೆ ಭರವಸೆ ನೀಡಿ, ಈ ಮೈದಾನದಲ್ಲಿ ಜಲ್ಲಿ ಸುರಿದರು. ರಸ್ತೆ ಕಾಮಗಾರಿ ಮುಗಿದ ಬಳಿಕ ಹೊಸ ಮಣ್ಣನ್ನು ತಂದು ಮೈದಾನದ ಗುಂಡಿಗಳನ್ನು ಮುಚ್ಚಿದರು. ಆದರೆ, ಮನೆ, ನೆಲ ಸಮತಟ್ಟು ಇತ್ಯಾದಿ ಕಾಮಗಾರಿ ನಿರ್ವಹಿಸಿದವರೂ ಈ ಜಾಗದಲ್ಲಿ ಮಣ್ಣು, ಕಟ್ಟಡ ತ್ಯಾಜ್ಯ ಸುರಿದರು. ಸಮತಟ್ಟು ಮಾಡುವ ವ್ಯವಧಾನವೂ ಇಲ್ಲದೆ ಜಾಗ ಖಾಲಿ ಮಾಡಿದರು. ಇದರಿಂದಾಗಿ ಮೈದಾನವೆಲ್ಲ ಹುಲ್ಲು ಪೊದೆಗಳಿಂದ ತುಂಬಿಹೋಯಿತು. ಮಳೆ ನೀರು ಹೋಗುವುದಕ್ಕೂ ಸಮರ್ಪಕ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಸಂಪೂರ್ಣ ಕೆಸರುಮಯವಾಯಿತು. ಆಲಂಕಾರು ಶಾಂತಿಮೊಗರು ರಸ್ತೆ ವಿಸ್ತರಣೆ ಊರಿಗೆ ಉಪಕಾರವಾದರೂ ಕ್ರೀಡಾಂಗಣಕ್ಕೆ
ಮಾರಕವಾಯಿತು.

ಆಲಂಕಾರಿನಲ್ಲಿದ್ದ ಕ್ರೀಡಾಂಗಣ ಇಲ್ಲದೆ ಜನರಿಗೆ ತೊಂದರೆಯಾಗಿತ್ತು. ಪೇಟೆಯಿಂದ ಅನತಿ ದೂರದಲ್ಲಿರುವ ಶಾಲೆಯ ಅಂಗಣವನ್ನೇ ಅವಲಂಬಿಸಬೇಕಾಗಿತ್ತು. ಈಗ ಸಾರ್ವಜನಿಕರೇ ಸೇರಿಕೊಂಡು ಮೈದಾನದ ದುರಸ್ತಿಗೆ ಕೈಹಾಕಿದ್ದಾರೆ. ಮೈದಾನದ ಎತ್ತರದ ಜಾಗವನ್ನು ಅಗೆದು ನಾಲ್ಕು ಕಡೆಗಳಿಗೆ ಸಮಾನಾಂತರವಾಗಿ ಮಣ್ಣನ್ನು ಹರಡಿ ಸಮತಟ್ಟು ಮಾಡಲಾಗುತ್ತಿದೆ. ಮಣ್ಣು ಕಡಿಮೆಯಾದಲ್ಲಿ ಹೊರಗಿನಿಂದ ತಂದು ತುಂಬಿಸಿ ರೋಲರ್‌ ಮೂಲಕ ಸಮತಟ್ಟು ಮಾಡಲಾಗುವುದು. ಟ್ಯಾಂಕರ್‌ನಲ್ಲಿ ನೀರು ತಂದು ಕ್ರೀಡಾಂಗಣಕ್ಕೆ ಸುರಿದು ಎರಡನೇ ಬಾರಿ ರೋಲರ್‌ ಓಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಎಲ್ಲ ಕಾಮಗಾರಿಗಳು ದಾನಿಗಳ ನೆರವಿನಿಂದ ನಡೆಯುತ್ತಿವೆ.

Advertisement

ವಾಹನ ಚಾಲನೆಗೆ ಬೀಳಲಿದೆ ಬ್ರೇಕ್‌
ಜಲ್ಲಿ ಸಂಗ್ರಹಿಸಲು ಮೈದಾನದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಆ ರಸ್ತೆಯನ್ನು ಸಕಾಲದಲ್ಲಿ ಮುಚ್ಚದ ಕಾರಣ ಪಕ್ಕದ ಕಾಲನಿಗೆ ಹೋಗುವ ವಾಹನಗಳು ಮೈದಾನದ ಮೂಲಕವೇ ಸಂಚರಿಸಿದವು. ಪಕ್ಕದಲ್ಲೇ ಪ್ರತ್ಯೇಕ ರಸ್ತೆ ಇದ್ದರೂ ಜನ ಮೈದಾನದ ರಸ್ತೆಯಲ್ಲೇ ಸಂಚರಿಸಿದರು. ಇದೀಗ ಸಾರ್ವಜನಿಕರೇ ಸೇರಿಕೊಂಡು ಮೈದಾನದ ದುರಸ್ತಿಗೆ ಪಣ ತೊಟ್ಟಿದ್ದು, ಕಾಮಗಾರಿ ಭರದಿಂದ ಸಾಗಿದೆ. ಈ ರಸ್ತೆಯನ್ನು ಮುಚ್ಚಿ, ವಾಹನ ಸಂಚರಿಸದಂತೆ ಕ್ರಮ ಕೈಗೊಂಡಿರುವ ಪರಿಣಾಮ, ಮುಂದಿನ ದಿನಗಳಲ್ಲಿ ಇಲ್ಲಿ ವಾಹನ ಚಾಲನೆಗೆ
ಬ್ರೇಕ್‌ ಬೀಳಲಿದೆ.

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next