ಮುಂಬೈ: ಖ್ಯಾತ ಚಿತ್ರ ನಿರ್ದೇಶಕ ಪ್ರದೀಪ್ ಸರ್ಕಾರ್ ಅವರು ಇಹಲೋಕ ತ್ಯಜಿಸಿದ್ದಾರೆ. ಅವರು ಮಾರ್ಚ್ 24 ರ ಮುಂಜಾನೆ 3.30ಕ್ಕೆ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು.
ಜನಪ್ರಿಯ ಚಲನಚಿತ್ರ ನಿರ್ದೇಶಕ ಪ್ರದೀಪ್ ಸರ್ಕಾರ್ ಅವರು ಪರಿಣೀತಾ, ಲಗಾ ಚುನಾರಿ ಮೇ ದಾಗ್, ಮರ್ದಾನಿ ಮತ್ತು ಹೆಲಿಕಾಪ್ಟರ್ ಈಲಾ ಮುಂತಾದ ಹಿಟ್ ಚಲನಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿಯಾಗಿದ್ದಾರೆ.
ಅನಾರೋಗ್ಯ ಪೀಡಿತರಾಗಿದ್ದ ಅವರನ್ನು ಮುಂಜಾನೆ 3 ಗಂಟೆಗೆ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಕೊನೆಯುಸಿರೆಳೆದರು ಎಂದು ವರದಿ ತಿಳಿಸಿದೆ.
ಪ್ರದೀಪ್ ಸರ್ಕಾರ್ ಮತ್ತು ಅವರ ಸಹೋದರಿ ಮಾಧುರಿ ಅವರಿಗೆ ತುಂಬಾ ಆತ್ಮೀಯರಾಗಿದ್ದ ನಟಿ ನೀತು ಚಂದ್ರ ಅವರು ಟ್ವಿಟರ್ ನಲ್ಲಿ ಅವರ ನಿಧನವನ್ನು ಖಚಿತಪಡಿಸಿದ್ದಾರೆ. “ನಮ್ಮ ಆತ್ಮೀಯ ನಿರ್ದೇಶಕ ಪ್ರದೀಪ್ ಸರ್ಕಾರ್ ದಾದಾ ಅವರ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ನಾನು ಅವರೊಂದಿಗೆ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ಅವರ ಚಲನಚಿತ್ರಗಳನ್ನು ಜೀವನಕ್ಕಿಂತ ದೊಡ್ಡದಾಗಿ ಕಾಣುವಂತೆ ಮಾಡುವ ಪ್ರತಿಭೆಯನ್ನು ಹೊಂದಿದ್ದರು. ದಾದಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.
ಸಂಜೆ 4 ಗಂಟೆಗೆ ಸಂತಾಕ್ರೂಜ್ ನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.