Advertisement

ಘನ ತ್ಯಾಜ್ಯ ನಿರ್ವಹಣೆ ನೀತಿ ಶೀಘ್ರ ಪ್ರಕಟಿಸಲು ನಿರ್ದೇಶನ

11:10 PM Jul 03, 2019 | Lakshmi GovindaRaj |

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ರಾಜ್ಯದ ಘನ ತ್ಯಾಜ್ಯ ನಿರ್ವಹಣಾ ನೀತಿಯನ್ನು ಶೀಘ್ರ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಪೌರಾಡಳಿತ ಇಲಾಖೆ ಮತ್ತು ಬಿಬಿಎಂಪಿ 7 ದಿನಗಳೊಳಗೆ ಘನ ತ್ಯಾಜ್ಯ ನಿರ್ವಹಣಾ ಸಂಬಂಧ ಕೈಗೊಂಡ ಕ್ರಮಗಳ ವಾರ್ಷಿಕ ವರದಿಯನ್ನು ಮಂಡಳಿಗೆ ಸಲ್ಲಿಸಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಸುಧಾಕರ್‌ ನಿರ್ದೇಶನ ನೀಡಿದ್ದಾರೆ.

Advertisement

ಘನ ತ್ಯಾಜ್ಯ ನಿರ್ವಹಣಾ ನಿಯಮ-2016ರ ಅನುಷ್ಠಾನದ ಕುರಿತು ಹಾಗೂ ಕೆರೆಗಳ ಮಾಲಿನ್ಯ ತಡೆ ಸಂಬಂಧ ನಗರದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ರಾಜ್ಯದ ಘನ ತ್ಯಾಜ್ಯ ನಿರ್ವಹಣೆ ಸಂಬಂಧ ಉತ್ತಮ ಅಭ್ಯಾಸಗಳನ್ನು ಒಳಗೊಂಡಂತೆ ವಾರ್ಷಿಕ ವರದಿ ಜೊತೆ ನಿರ್ವಹಣಾ ನೀತಿ ಪ್ರಕಟಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.

ಘನ ತ್ಯಾಜ್ಯ ಸಾಗಣೆ ವಾಹನಗಳಿಗೆ ಕಡ್ಡಾಯವಾಗಿ ಜಿಪಿಆರ್‌ಎಸ್‌ ಅಳವಡಿಸಬೇಕು. ಉತ್ಪಾದನೆ ಹಂತದಲ್ಲಿ ಸಮರ್ಪಕವಾಗಿ ಕಸ ವಿಂಗಡಣೆ ಮಾಡಲು ಕ್ರಮ ಕೈಗೊಳ್ಳಬೇಕು. ವಿಂಗಡಿಸಿದ ಕಸವನ್ನು ಪುನ: ಕಸದೊಂದಿಗೆ ಬೆರೆಸಬಾರದು ಮತ್ತು ಕಸ ನಿರ್ವಹಣೆಗಾಗಿ ಅಳವಡಿಸಿರುವ ಉಪಕರಣಗಳನ್ನು ಸಂಪೂರ್ಣವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು. ಸಂಸ್ಕರಣ ಮಾಡದೆ ಶೇಖರಿಸಿದ ತ್ಯಾಜ್ಯ ನಿರ್ವಹಣೆ ಮಾಡಿದ ದೇಶದ ಇತರ ನಗರಗಳ ಅಧ್ಯಯನಕ್ಕೆ ಮಂಡಳಿ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಲಾಯಿತು.

ಕೆರೆ ಮಾಲಿನ್ಯದ ಬಗ್ಗೆ ಚರ್ಚೆ: ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆರೆಗಳ ಮಾಲಿನ್ಯ ಕುರಿತಂತೆ ಈ ಸಂದರ್ಭದಲ್ಲಿ ಅವರು ಸುದೀರ್ಘ‌ವಾಗಿ ಚರ್ಚೆ ನಡೆಸಿದರು. ತಾಂತ್ರಿಕ, ಹಣಕಾಸು ಮತ್ತು ಮಾಲೀಕತ್ವ ವಿಷಯಗಳನ್ನು ಪರಿಗಣಿಸಿ ಅಭಿವೃದ್ಧಿ ಮತ್ತು ನಿರ್ವಹಣೆ ಸಂಬಂಧ ನಗರದ ಎಲ್ಲ ಕೆರೆಗಳನ್ನು ಒಂದು ಪ್ರಾಧಿಕಾರದ ಅಡಿಯಲ್ಲಿ ತರುವುದು. ಕೆಸಿ ವ್ಯಾಲಿ ಮತ್ತು ಹೆಚ್‌ಎನ್‌ ವ್ಯಾಲಿ ಪ್ರದೇಶಗಳಲ್ಲಿ ಬೆಂಗಳೂರು ಜಲಮಂಡಳಿಯ ಕೆಸರು ನೀರಿನ ಸಂಸ್ಕರಣಾ ಘಟಕಗಳ ಸಂಸ್ಕರಿಸಿದ ನೀರನ್ನು 26 ಮಾಪಕಗಳಿಗೆ ಮಂಡಳಿ ವಿಶ್ಲೇಷಿಸುವುದು.

ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಬರುವ ಎಲ್ಲ ಕೆರೆಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ನಿಗದಿಪಡಿಸಿದ ಮಾಪಕಗಳ ಮಿತಿಯೊಳಗೆ ಅನ್ವಯವಾಗಿರುವುದೇ ಎಂದು ವಿಶ್ಲೇಷಿಸುವುದು. ಮಳೆ ನೀರು ಕೊಯ್ಲು ವಿಧಾನ ಅಳವಡಿಸದಿರುವ ಗ್ರಾಹಕರಿಗೆ ನೀರಿನ ಸೌಲಭ್ಯ ಕಲ್ಪಿಸದಂತೆ ಬೆಂಗಳೂರು ಜಲಮಂಡಳಿಗೆ ಸೂಚನೆ ನೀಡ‌ಲಾಯಿತು. ಮೈಸೂರು ವಲಯಕ್ಕೆ ಕುರಿತ ಸಭೆ: ಮೈಸೂರು ವಲಯಕ್ಕೆ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗಳ ಕೆಲಸ ಕಾರ್ಯಗಳ ಬಗ್ಗೆಯೂ ಪರಿಶೀಲನಾ ಸಭೆಯಲ್ಲಿ ಚರ್ಚಿಸಲಾಯಿತು. ಹಾರುಬೂದಿ ಪ್ರಕರಣದ ಬಗ್ಗೆ ವೈಜ್ಞಾನಿಕ ವಿಲೇವಾರಿ ಮಾಡುವಂತೆ ತಿಳಿಸಿದರು.

Advertisement

ಪಶ್ಚಿಮ ಘಟ್ಟ ಸಂರಕ್ಷಣೆ, ಜೀವ ವೈದ್ಯಕೀಯ ತ್ಯಾಜ್ಯ ಸಾಮೂಹಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅನಿಲ್‌ ಕುಮಾರ್‌, ಪೌರಾಡಳಿತ ಇಲಾಖೆ ನಿರ್ದೇಶಕ ಶೇಖರಪ್ಪ, ಬೆಂಗಳೂರು ಜಲ ಮಂಡಳಿ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ, ಬಿಡಿಎ, ಸಣ್ಣ ನೀರಾವರಿ ಹಾಗೂ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಪ್ರಾದೇಶಿಕ ನಿರ್ದೇಶನಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next