ಬೆಂಗಳೂರು: ಸರ್ಕಾರಿ ಪದವಿ ಕಾಲೇಜಿನಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ತಕ್ಕಂತೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.
2019-20ನೇ ಸಾಲಿಗೆ ಖಾಲಿಯಿರುವ ಹೆಚ್ಚುವರಿ ಕಾರ್ಯಭಾರಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಪಾರದರ್ಶಕವಾಗಿ ಭರ್ತಿ ಮಾಡಿಕೊಳ್ಳುವಂತೆ ಇಲಾಖೆ ತಿಳಿಸಿದೆ.
ಬಿ.ಎ, ಬಿ.ಕಾಂ, ಬಿಬಿಎಂ ವಿಷಯಕ್ಕೆ ಬೋಧಿಸುವ ಕಾಯಂ ಸಹ ಹಾಗೂ ಸಹಾಯಕ ಪ್ರಾಧ್ಯಾಪಕರು ವಾರಕ್ಕೆ 16 ಗಂಟೆ, ಪ್ರಾಯೋಗಿಕ ತರಗತಿಯನ್ನು ಹೊಂದಿರುವ ವಿಜ್ಞಾನ ವಿಷಯವನ್ನು ಬೋಧಿಸುವ ಪ್ರಾಧ್ಯಾಪಕರು ವಾರಕ್ಕೆ 20 ಗಂಟೆ ಬೋಧನಾ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.
ಆಯ್ಕೆಯಾದ ಅತಿಥಿ ಉಪನ್ಯಾಸಕರು ಬಿ.ಎ, ಬಿ.ಕಾಂ ಹಾಗೂ ಬಿಬಿಎಂ ವಿಷಯಗಳನ್ನು ವಾರಕ್ಕೆ ಕನಿಷ್ಠ 4ರಿಂದ 8 ಗಂಟೆ ಹಾಗೂ ವಿಜ್ಞಾನ ವಿಷಯಕ್ಕೆ ವಾರಕ್ಕೆ ಕನಿಷ್ಠ 5ರಿಂದ 10 ಗಂಟೆ ಬೋಧನಾ ಕಾರ್ಯ ನಿರ್ವಹಿಸಲು ಕ್ರಮ ತೆಗೆದುಕೊಳ್ಳಬೇಕು.
ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಯು ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕ, ಪಿಎಚ್‌ಡಿ, ನೆಟ್, ಸ್ಲೆಟ್ ಹಾಗೂ ಎಂ.ಫಿಲ್ ವಿದ್ಯಾರ್ಹತೆ ಮತ್ತು ಹಿಂದಿನ ವರ್ಷಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅಂಶಗಳನ್ನು ಪರಿಗಣಿಸುವಂತೆ ಇಲಾಖೆ ಸೂಚಿಸಿದೆ.
ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಿ, ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು. ಕಾಯಂ ಉಪನ್ಯಾಸಕರನ್ನು ನಿಯೋಜನೆ ಮಾಡಿದ ನಂತರವೇ ಅತಿಥಿ ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಇಲಾಖೆ ನಿರ್ದೇಶಿಸಿದೆ.