Advertisement

ಹೊರೆಯಾದ ತ್ಯಾಜ್ಯ ಘಟಕಗಳ ನೇರ ನಿರ್ವಹಣೆ

11:02 AM Nov 04, 2017 | Team Udayavani |

ಬೆಂಗಳೂರು: ಟೆಂಡರ್‌ ಕರೆಯದೆ ನೇರವಾಗಿ ಬಿಬಿಎಂಪಿ ವತಿಯಿಂದಲೇ ತ್ಯಾಜ್ಯ ಸಂಸ್ಕರಣೆ ಘಟಕ ನಿರ್ವಹಣೆಯಿಂದ ಪಾಲಿಕೆಗೆ ನಷ್ಟವಾಗುತ್ತಿರುವ ಕುರಿತು ದೂರು ನೀಡಿದರೂ ಅಧಿಕಾರಿಗಳು ಕ್ರಮವಹಿಸದ ಹಿನ್ನೆಲೆಯಲ್ಲಿ ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗಿರುವುದು ವರದಿಯಿಂದ ಬಯಲಾಗಿದೆ. 

Advertisement

ಬಿಬಿಎಂಪಿ ವತಿಯಿಂದ ದೊಡ್ಡಬಿದರಕಲ್ಲು ಬಳಿ ನಿರ್ಮಿಸಿದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಯುಪಿಎಲ್‌ ವಡೋದರ ಸಂಸ್ಥೆಯ ಗುತ್ತಿಗೆಯನ್ನು 2016 ಮೇ ತಿಂಗಳಲ್ಲಿ ಬಿಬಿಎಂಪಿ ರದ್ದುಪಡಿಸಿತ್ತು. ಆ ನಂತರ ಘಟಕ ನಿರ್ವಹಣೆಗಾಗಿ ಟೆಂಡರ್‌ ಕರೆಯದೆ ನೇರವಾಗಿ ತಾನೇ ನಿರ್ವಹಣೆಯ ಜವಾಬ್ದಾರಿಯನ್ನ ಬಿಬಿಎಂಪಿ ವಹಿಸಿಕೊಂಡಿತ್ತು. 

ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆಯ ಬಗ್ಗೆ ಯಾವುದೇ ಅನುಭವ ಹೊಂದಿರದ ಪಾಲಿಕೆಯ ಅಧಿಕಾರಿಗಳು ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸಲು ವಿಫ‌ಲವಾದರು. ಇದರೊಂದಿಗೆ ಗುತ್ತಿಗೆದಾರರಿಗೆ ಪ್ರತಿ ಟನ್‌ ಗೊಬ್ಬರ ತಯಾರಿಕೆಗೆ ನೀಡುತ್ತಿದ್ದ ವೆಚ್ಚಕ್ಕಿಂತ ಸುಮಾರು 200 ಪಟ್ಟು ಹೆಚ್ಚುವರಿ ವೆಚ್ಚವಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. 

ಮೂರನೇ ವ್ಯಕ್ತಿಯ ಸಂಸ್ಥೆಯಿಂದ ದೊಡ್ಡಬಿದರಕಲ್ಲು ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆಗೆ ವ್ಯಯಿಸಲಾಗಿರುವ ವೆಚ್ಚದ ಕುರಿತು ಲೆಕ್ಕಪರಿಶೋಧನೆ ನಡೆಸಿದ್ದು, ಗುತ್ತಿಗೆದಾರರು ಪ್ರತಿ ಟನ್‌ಗೆ 810 ರೂ. ಪಡೆದಿದ್ದಾರೆ. ಆದರೆ, ಪಾಲಿಕೆಯ ಅಧಿಕಾರಿಗಳು ಪ್ರತಿ ಟನ್‌ ಗೊಬ್ಬರ ತಯಾರಿಕೆಗೆ 1460 ರೂ.ಗಳಿಂದ 19,330 ರೂ. ಗಳವರೆಗೆ ವೆಚ್ಚ ಮಾಡಿರುವ ಅಂಶ ಬಯಲಾಗಿದೆ. ಹೀಗಾಗಿ ಸಮೀಕ್ಷೆ ನಡೆಸಿದ ಸಂಸ್ಥೆ ಸಲಹೆಯಂತೆ ಬಿಬಿಎಂಪಿ ಆಯುಕ್ತರು, ಟೆಂಡರ್‌ ಆಹ್ವಾನಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

ಕ್ರಮ ಕೈಗೊಳ್ಳದ ಅಧಿಕಾರಿಗಳು: ದೊಡ್ಡಬಿದರಕಲ್ಲು ಘಟಕದ ನಿರ್ವಹಣೆ ಜವಾಬ್ದಾರಿಯನ್ನು ಡಿಸೆಂಬರ್‌ 2016ರಿಂದ ಬಿಬಿಎಂಪಿ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ಗುತ್ತಿಗೆದಾರರು ಪ್ರತಿ ಟನ್‌ ಗೊಬ್ಬರ ತಯಾರಿಕೆಗೆ ಪಡೆಯುತ್ತಿದ್ದ ಮೊತ್ತಕ್ಕಿಂತ ಹೆಚ್ಚು ಹಣ ವೆಚ್ಚ ಮಾಡುತ್ತಿರುವ ಬಗ್ಗೆ ದಾಸರಹಳ್ಳಿ ಜಂಟಿ ಆಯುಕ್ತ ಕಚೇರಿಗೆ ಸಂಸ್ಥೆ ಏಪ್ರಿಲ್‌ ತಿಂಗಳಲ್ಲಿ ಇ-ಮೇಲ್‌ ಮೂಲಕ ದೂರು ನೀಡಿದರೂ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಪ್ರತಿ ಟನ್‌ಗೆ 19,330 ರೂ. ವರೆಗೆ ದುಂದು ವೆಚ್ಚವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Advertisement

25 ಲಕ್ಷದ ಬದಲು 1.16 ಕೋಟಿ ರೂ. ವೆಚ್ಚ!: ಡಿಸೆಂಬರ್‌ 2016ರಿಂದ ಜುಲೈ 2017ರವರೆಗೆ ದೊಡ್ಡಬಿದರಕಲ್ಲು ಘಟಕಕ್ಕೆ 9,976 ಟನ್‌ ತ್ಯಾಜ್ಯ ರವಾನೆಯಾಗಿದೆ. ತ್ಯಾಜ್ಯ ಸಂಸ್ಕರಣೆ ಮೂಲಕ 2437 ಟನ್‌ ಗೊಬ್ಬರ ಹಾಗೂ 671 ಟನ್‌ ಆರ್‌ಡಿಎಫ್ ಉತ್ಪಾದಿಸಿದ್ದು, ಇದಕ್ಕಾಗಿ ಒಟ್ಟು 1.16 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದೇ ಟೆಂಡರ್‌ ಕರೆದು ಗುತ್ತಿಗೆದಾರರಿಂದ ನಿರ್ವಹಣೆ ಮಾಡಿಸಿದ್ದರೆ ಕೇವಲ 25.17 ಲಕ್ಷ ವೆಚ್ಚವಾಗುತ್ತಿತ್ತು.

37 ಟನ್‌ಗೆ 7.15 ಲಕ್ಷ ವೆಚ್ಚ: ದೊಡ್ಡಬಿದರಕಲ್ಲು ಘಟಕಕ್ಕೆ 2017ರ ಏಪ್ರಿಲ್‌ ತಿಂಗಳಲ್ಲಿ 37 ಟನ್‌ ಗೊಬ್ಬರ ತಯಾರಿಸಿದ್ದು, ಪ್ರತಿ ಟನ್‌ಗೆ 19,330 ರೂ. ವೆಚ್ಚ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಗುತ್ತಿಗೆದಾರರು 37 ಟನ್‌ ಗೊಬ್ಬರವನ್ನು ಕೇವಲ 29,970 ರೂ.ಗಳಲ್ಲಿ ಉತ್ಪಾದಿಸುತ್ತಿದ್ದರು. ಆದರೆ, ಪಾಲಿಕೆ ಅಧಿಕಾರಿಗಳು 7.15 ಲಕ್ಷ ರೂ. ವೆಚ್ಚ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next