Advertisement

ಭಾರತದ ನೆರವಿಗೆ ಬಂದ ರಾಜತಾಂತ್ರಿಕ ಸಂಬಂಧ 

12:30 AM Feb 27, 2019 | Team Udayavani |

ಹೊಸದಿಲ್ಲಿ: ನಾಲ್ಕೂವರೆ ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು 84 ಬಾರಿ ವಿದೇಶ ಪ್ರವಾಸ ಮಾಡಿದ್ದೂ ಭಯೋತ್ಪಾದಕರ ತಾಣಗಳ ಮೇಲಿನ ವಾಯುದಾಳಿ ಸಂದರ್ಭ ಜಗತ್ತು ಭಾರತದ ಪರ ನಿಲ್ಲುವಂತೆ ಮಾಡಿತೇ? ಅಮೆರಿಕ, ಜಪಾನ್‌, ಫ್ರಾನ್ಸ್‌, ರಷ್ಯಾ, ಅಮೆರಿಕ, ಜಪಾನ್‌, ಜರ್ಮನಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ಕೊಟ್ಟವರು ಮೋದಿ. ಇದಕ್ಕಾಗಿ 2 ಸಾವಿರ ಕೋಟಿ ರೂ. ಗಳಿಗಿಂತಲೂ ಹೆಚ್ಚು ತೆರಿಗೆ ಹಣ ವ್ಯಯವಾದ್ದಕ್ಕೆ ಟೀಕೆಯೂ ವ್ಯಕ್ತವಾಗಿತ್ತು. ಆದರೆ, ಈ ಪ್ರವಾಸಗಳಿಂದ ವಾಣಿಜ್ಯಾತ್ಮಕ ಉದ್ದೇಶದೊಂದಿಗೆ ಭಾರತದ ಬಗ್ಗೆ ಹಿತಕರ ಅನುಭವವನ್ನು ಸೃಷ್ಟಿಸಿದೆ ಎಂಬ ಅಭಿಪ್ರಾಯ ವಿಶ್ಲೇಷಕರದ್ದು.

Advertisement

ಪರೋಕ್ಷ ಲಾಭವೆಂದರೆ, ಭಾರತದ ಬಗ್ಗೆ ಯಾವುದೇ ಬಗೆಯ ಪ್ರತಿಕ್ರಿಯೆ ಕೊಡುವ ಮೊದಲು ತಾಳ್ಮೆ ವಹಿಸುವ ಭಾವನೆಯನ್ನು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಮೂಡಿಸಿದೆ. ಮೋದಿ ಅಧಿಕಾರ ಸ್ವೀಕರಿಸಿದಾಗ ಭಯೋತ್ಪಾದನೆ ಬಗೆಗಿನ ಪಾಕ್‌ ದ್ವಂದ್ವ ನೀತಿಯನ್ನು ವಿಶ್ವಸಂಸ್ಥೆ ಹಾಗೂ ಜಗತ್ತಿನ ಎದುರು ಬಯಲು ಮಾಡುವ ಸವಾಲು ಇತ್ತು.  ಹಿಂದಿನ ಸರಕಾರದ ಸಂದರ್ಭ ದಲ್ಲಿ ಭಯೋತ್ಪಾದನೆಯನ್ನು ಕಟುವಾಗಿ ಟೀಕಿಸಲಾಗುತ್ತಿತ್ತೇ ಹೊರತು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಒಬ್ಬಂಟಿಯಾಗಿಸುವತ್ತ ರಾಜತಾಂತ್ರಿಕ ಕ್ರಮಗಳು ನಡೆದದ್ದು ಕಡಿಮೆ. 

ಈ ದಿಸೆಯಲ್ಲಿ ಮೋದಿಗೆ ವರವಾದದ್ದು ಈ ವಿದೇಶ ಪ್ರವಾಸಗಳ ಸಂದರ್ಭಗಳು. ಅದರಲ್ಲೂ ಇತ್ತೀಚಿನ ಎರಡು ವರ್ಷ ಗಳ ಹಲವು ಪ್ರವಾಸಗಳಲ್ಲಿ ಅವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಯೋ ತ್ಪಾದನೆ ಹತ್ತಿಕ್ಕಲು ಎಲ್ಲರ ಸಹಕಾರ ಅಗತ್ಯ ಎಂಬುದನ್ನು ಪ್ರತಿಪಾದಿಸುತ್ತಲೇ ಬಂದಿದ್ದನ್ನು ಸ್ಮರಿಸಬಹುದು. ಅದೆಲ್ಲವೂ ಈಗ ಕೈಗೊಂಡಿರುವ ವಾಯುದಾಳಿಯನ್ನು ಖಂಡಿಸಿದಂತೆ ಮಾಡಿದೆ.

ಮೊದಲ ಸರ್ಜಿಕಲ್‌ ದಾಳಿ
ಪ್ರವಾಸದ ಫ‌ಲ ಸಿಕ್ಕಿದ್ದು 2016 ರಲ್ಲಿ ಪಾಕ್‌ನ ಉಗ್ರರ ಅಡಗುತಾಣಗಳ ಮೇಲೆ ಮೊದಲ ಸರ್ಜಿಕಲ್‌ ದಾಳಿ ನಡೆಸಿದಾಗ. ಆಗ ಅಮೆರಿಕ ಸೇರಿದಂತೆ ಹಲವು ದೇಶಗಳು ಬೆಂಬಲಿಸಿದ್ದವು. ಇತ್ತೀಚಿಗೆ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ಎಲ್ಲ ದೇಶಗಳೂ ಖಂಡಿಸಿ ಭಾರತದ ಬೆಂಬಲಕ್ಕೆ ನಿಂತವು. ಪಾಕ್‌ ನನ್ನದೇನೂ ತಪ್ಪಿಲ್ಲ ಎಂದರೆ, ಅದರ ಪರಮಾಪ್ತ ರಾಷ್ಟ್ರ ಚೀನಾ ಸುಮ್ಮನೆ ದೂರಬೇಡಿ ಎಂದು ಹೇಳಿ ಸುಮ್ಮನಾಯಿತು. ಆದರೆ ಉಳಿದೆಲ್ಲ ದೇಶಗಳು ಭಾರತದ ಬೆನ್ನಿಗೆ ನಿಂತಾಗ ಈ ಎರಡು ದೇಶಗಳ ದನಿಗೆ ಬೆಲೆ ಬಾರದೇ ಮೂಲೆಗುಂಪಾದವು.

ಚೀನದ ಧೋರಣೆ ಬದಲು
ಇದನ್ನು ಅರಿತ ಚೀನಾ ತನ್ನ ನಿಲುವಿನಲ್ಲಿ ಚಿಕ್ಕದೊಂದು ಬದಲಾವಣೆ ಮಾಡಿಕೊಂಡಿದೆ. ಇಂದಿನ ವಾಯುದಾಳಿಯ ಸಂದರ್ಭದಲ್ಲಿ ಸಣ್ಣಗೆ ಬೆದರಿರುವ ಚೀನಾ ಸಹ, ಎರಡೂ ರಾಷ್ಟ್ರಗಳಿಗೆ ತಾಳ್ಮೆಯ ಸಲಹೆಯನ್ನು ನೀಡಿದೆ. ಈ ಬಾರಿಯೂ ಹಲವು ದೇಶಗಳು ಭಾರತವನ್ನು ಬೆಂಬಲಿಸಿರುವುದು ಸ್ಪಷ್ಟ. ಹಾಗಾಗಿಯೇ ವಿದೇಶ ಪ್ರವಾಸಗಳ ಸಂಬಂಧ ಭಾರತದ ಕ್ರಮಗಳ ಕುರಿತು ತತ್‌ಕ್ಷಣ ಪ್ರತಿಕ್ರಿಯಿಸುವ ವಿದೇಶಗಳ ಸ್ವಭಾವದ ತೀಕ್ಷ್ಣತೆಯನ್ನು ಕಡಿಮೆಗೊಳಿಸಿತೇ ಎಂಬುದೂ ಚರ್ಚೆಯಾಗುತ್ತಿದೆ.

Advertisement

ಹೇಳಿ ಹೇಳಿಯೇ ಮಾಡಿದರು !
ಪುಲ್ವಾಮಾ ಘಟನೆಯ ಮರು ಕ್ಷಣದಿಂದಲೇ ಭಾರತ ತನ್ನ ಪ್ರತೀಕಾರದ ಅಗತ್ಯವನ್ನು ಒತ್ತಿ ಹೇಳತೊಡಗಿತ್ತು. ಪ್ರಧಾನಿ ಮೋದಿಯವರು ಅದರ ತರುವಾಯ ಭಾಗವಹಿಸಿದ ಬಹುತೇಕ ಕಾರ್ಯಕ್ರಮಗಳಲ್ಲಿ (ವಿದೇಶ ಪ್ರವಾಸ ಅಥವಾ ದೇಶೀಯ ಕಾರ್ಯಕ್ರಮ) ಭಯೋತ್ಪಾದನೆ ವಿರುದ್ಧ ಎಲ್ಲರೂ ಒಂದಾಗಬೇಕು ಎಂದು ಹೇಳುತ್ತಲೇ ಇದ್ದರು. ಸೌದಿ ದೊರೆಯ ಭೇಟಿ ಇರಬಹುದು, ಉತ್ತರ ಕೊರಿಯಾದ ಭೇಟಿ ಸಂದರ್ಭವೂ ಇರಬಹುದು. ಇದೆಲ್ಲ ವಾಯುದಾಳಿ ಸಂದರ್ಭ ಎಲ್ಲರೂ ಭಿನ್ನ ಧ್ವನಿ ತಳೆಯಬಾರದೆಂದು ನಡೆಸಿದ ಪೂರ್ವಸಿದ್ಧತೆಯಲ್ಲದೇ ಮತ್ತೇನೂ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next