Advertisement

ಇಂದು ರೈತ ದಿನಾಚರಣೆ : ಡಿಪ್ಲೊಮಾ ಪದವೀಧರನ ಕೈ ಹಿಡಿದ ಕೃಷಿ

01:45 AM Dec 23, 2018 | Karthik A |

ಕುಂದಾಪುರ: ಓದಿದ್ದು ಎಲೆಕ್ಟ್ರಿಕಲ್‌ ಡಿಪ್ಲೋಮಾ. ಉದ್ಯೋಗ ದೊರೆತದ್ದು ಬಿಎಸ್‌ಎನ್‌ಎಲ್‌ನಲ್ಲಿ. ಆದರೆ ಸೆಳೆದದ್ದು ಕೃಷಿ, ಕೈ ಹಿಡಿದು ಪೋಷಿಸಿ ಬೆಳೆಸಿದ್ದು ಕೃಷಿಯಲ್ಲಿನ ಆಸಕ್ತಿ. ಪರಿಣಾಮ ಇಂದು ತಾಲೂಕು, ಜಿಲ್ಲಾ ಮಟ್ಟದ ಕೃಷಿಕ ಪುರಸ್ಕಾರಗಳು ಅರಸಿ ಬರುತ್ತಿವೆ. ರಾಜ್ಯದ ನಾನಾ ಭಾಗದಿಂದ ಇವರ ಕೃಷಿಯನ್ನು ವೀಕ್ಷಿಸಲು ರೈತರು ಆಗಮಿಸುತ್ತಿದ್ದಾರೆ.

Advertisement

ನಷ್ಟವಿಲ್ಲ
ಅಮಾಸೆಬೈಲು ಗ್ರಾಮದ ಕೆಳಸುಂಕದ ಸತೀಶ್‌ ಹೆಗ್ಡೆ ಅವರು ಸಣ್ಣ ಜಾಗದಲ್ಲಿ ತರಹೇವಾರಿ ಕೃಷಿ ಮಾಡುವ ಮೂಲಕ ಮಾದರಿಯಾದವರು. 4 ಸಾವಿರದಷ್ಟು ಅಡಿಕೆ ಗಿಡ ಬೆಳೆಸಿದ್ದಾರೆ. ಅದಕ್ಕೆ ಕಾಳುಮೆಣಸಿನ ಬಳ್ಳಿ ಬಿಟ್ಟಿದ್ದಾರೆ. 250 ಗಿಡ ಥೈವಾನ್‌ ಪಪ್ಪಾಯಿ ಬೆಳೆಸಿದ್ದಾರೆ. ಇದು ಹತ್ತು ದಿನಕ್ಕೊಮ್ಮೆ 2 ಕ್ವಿಂಟಾಲ್‌ನಷ್ಟು ಕಟಾವಿಗೆ ಬರುತ್ತದೆ. ಸಾಮಾನ್ಯ ಪಪ್ಪಾಯಿ 3.9 ಕೆಜಿ ತೂಗುತ್ತದೆ. 6 ತಿಂಗಳಲ್ಲಿ ಫ‌ಲ ಕೊಡಲು ಆರಂಭಿಸಿದರೆ ಒಂದು ಗಿಡ 4 ವರ್ಷ ಬಾಳಿಕೆ ಬರುತ್ತದೆ. 1 ಗಿಡಕ್ಕೆ 1 ದಿನಕ್ಕೆ 1 ರೂ.ವಿನಂತೆ ಖರ್ಚು ಮಾಡಿ 1 ಕೆಜಿಗೆ 1 ರೂ.ವಿನಂತೆ ಮಾರಾಟ ಮಡಿದರೂ ಪಪ್ಪಾಯ ಬೆಳೆ ನಷ್ಟವಿಲ್ಲ ಎನ್ನುತ್ತಾರೆ ಸತೀಶ್‌ ಅವರು. ಪೂರ್ಣವಾಗಿ ಸಾವಯವ ಮಾದರಿಯ ಕೃಷಿಯನ್ನು ಅನುಸರಿಸುತ್ತಿದ್ದಾರೆ.

ಬೇಸರವಿಲ್ಲ
ಉದ್ಯೋಗದಲ್ಲಿನ ಮಾಸಿಕ ವೇತನ ಪಡೆಯದ ಕುರಿತು ಅವರಿಗೆ ಕಿಂಚಿತ್ತೂ ಬೇಸರವಿಲ್ಲ. ಒಂದೇ ಬೆಳೆಯನ್ನು ಮಾಡಿ ಬೆಲೆಯಿಲ್ಲ ಎಂದು ನಷ್ಟ ಅನುಭವಿಸುವ ಬದಲು ಏಕರೂಪದ ಕೃಷಿಯ ಬದಲು ಹತ್ತಾರು ಕೃಷಿ ಎಂಬ ಪ್ರಯೋಗಾತ್ಮಕ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಣ್ಣ ಜಾಗದಲ್ಲಿ ಬೇರೆ ಬೇರೆ ಮಿಶ್ರ ಕೃಷಿ ಮಾಡುವ ಮೂಲಕ ಕೃಷಿಯೂ ಲಾಭದಾಯಕ ಎಂದು ಅರಿವು ಮೂಡಿಸಿದ್ದಾರೆ. ಗೇರು, ಮೆಣಸು, ತೆಂಗು, ಬಾಳೆ ಬೆಳೆದ ಅವರು ಸುವರ್ಣಗಡ್ಡೆ ಬೆಳೆಸುವ ಚಿಂತನೆಯಲ್ಲಿದ್ದಾರೆ. ಸಿಹಿನೀರಿನ ಮೀನು ಸಾಕಾಣಿಕೆ ಮಾಡಬೇಕೆಂದು ಮುಂದಾಗಿ ಅದರಲ್ಲೂ ಯಶಸ್ವಿಯಾಗಿದ್ದಾರೆ. ತೋಟದ ಅಲ್ಲಲ್ಲಿ ಜೇನುಪೆಟ್ಟಿಗೆ ಇಟ್ಟಿದ್ದಾರೆ. ಸಾಂಪ್ರದಾಯಿಕ ಹೈನುಗಾರಿಕೆ, ನಾಟಿಕೋಳಿ ಸಾಕಣೆ ಎಂದು ಕೃಷಿಯ ಇಂಚಿಂಚಿನಲ್ಲೂ ತೊಡಗಿಸಿಕೊಂಡಿದ್ದಾರೆ.

ಸತೀಶ್‌ ಹೆಗ್ಡೆ ಅವರಿಗೆ ಕೃಷಿ ಜಾಗ ಹಿರಿಯರಿಂದ ಬಂದ ಬಳುವಳಿಯಲ್ಲ. 3 ಲಕ್ಷ ರೂ. ಸಾಲ ಮಾಡಿ ಖರೀದಿಸಿದ ಭೂಮಿ ಇಂದು ಹಸಿರುಸಿರಿಯಿಂದ ಕಂಗೊಳಿಸುವಂತೆ ಮಾಡಿದ್ದು ಅವರ ಬೆವರ ಹನಿ ಸೋಕಿದ್ದರ ಫ‌ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷತೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡು ಯೋಜನೆಯ ಪ್ರಗತಿನಿಧಿಯ ಸದುಪಯೋಗಪಡಿಸಿಕೊಂಡಿದ್ದಾರೆ. 

ಪ್ರಶಸ್ತಿ
2015ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೃಷಿ ಪ್ರಶಸ್ತಿ, 2017ರಲ್ಲಿ ಪ್ರತಿಷ್ಠಿತ ಸಬ್ಲಾಡಿ ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Advertisement

ಮಾದರಿ ಕೃಷಿಕ
ಸತೀಶ್‌ ಹೆಗ್ಡೆ ಅವರು ಯೋಜನೆಯ ಸದಸ್ಯರಾಗಿದ್ದು ಮಾದರಿ ಕೃಷಿಕರಾಗಿದ್ದಾರೆ. ಯೋಜನೆ ಅನುಷ್ಠಾನಕ್ಕೆ ತಂದ ತುಂಡು ಭೂಮಿ ಹಿಂಡು ಬೆಳೆ ಕಾರ್ಯಕ್ರಮದ ಅನುಷ್ಠಾನ ಇಲ್ಲಿ ನಿಜ ಅರ್ಥದಲ್ಲಿ ಆಗಿದ್ದು ರಾಜ್ಯದ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಕೃಷಿ ವೀಕ್ಷಣೆಗೆ ಬರುತ್ತಾರೆ.
– ಚೇತನ್‌ ಕುಮಾರ್‌, ಕೃಷಿ ಅಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಕೃಷಿಯಲ್ಲಿ ಖುಷಿಯಿದೆ
ಕೃಷಿಯಲ್ಲಿ ಖುಷಿಯಿದೆ. ಹಾಗಾಗಿ ನನಗೆ ಇನ್ನಷ್ಟು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲವಾಗಿದೆ. ಸಣ್ಣ ಪುಟ್ಟ ಜಾಗದಲ್ಲಿ ತರಹೇವಾರಿ ಕೃಷಿ ಪ್ರಯೋಗ ಮಾಡಿ ಅದರಲ್ಲಿ ಯಶಸ್ವಿಯಾಗಬೇಕೆನ್ನುವುದೇ ನನ್ನ ಆಶಯ.
– ಸತೀಶ್‌ ಹೆಗ್ಡೆ, ಅಮಾಸೆಬೈಲು

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next