ಮುಂಬಯಿ: ಜನಪ್ರಿಯ ಕಿರುತೆರೆ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಕಾಕರ್ ನಟನಾ ಕ್ಷೇತ್ರದಿಂದ ದೂರವಾಗಲು ನಿರ್ಧರಿಸಿದ್ದಾರೆ.
ʼ ಸಸುರಲ್ ಸಿಮರ್ ಕಾʼ ಧಾರಾವಾಹಿಯಿಂದ ಖ್ಯಾತಿಯನ್ನು ಪಡೆದುಕೊಂಡ ನಟಿ ದೀಪಿಕಾ ಕಾಕರ್ 2010 ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ʼನೀರ್ ಭರೇ ತೇರೆ ನೈನಾ ದೇವಿʼ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ʼಆಗ್ಲೇ ಜನಮ್ ಮೋಹೆ ಬಿತಿಯಾ ಹಿ ಕಿಜ್ʼ ನಲ್ಲಿ ರೇಖಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಲೋಕದಲ್ಲಿ ಜನಮನ ಗೆದ್ದಿದ್ದ ಸಸುರಲ್ ಸಿಮರ್ ಕಾʼ ಧಾರಾವಾಹಿ ಅವರಿಗೆ ಹೆಚ್ಚಿನ ಫೇಮ್ ತಂದುಕೊಟ್ಟಿತು.
ಕಳೆದ ಕೆಲ ಸಮಯದಿಂದ ಟಿವಿ ಕ್ಷೇತ್ರದಿಂದ ದೂರವಿದ್ದ ಅವರು, ಇದೀಗ ನಟನಾ ಕ್ಷೇತ್ರದಿಂದ ದೂರವಾಗಲು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ.
2018 ರಲ್ಲಿ ಶೋಯೆಬ್ ಇಬ್ರಾಹಿಂ ಎನ್ನುವವರನ್ನು ವಿವಾಹವಾದ ಅವರು, 2022 ರಲ್ಲಿ ತಾಯಿ ಆಗುವ ಸುದ್ದಿಯನ್ನು ಫೋಟೋವೊಂದನ್ನು ಹಂಚಿಕೊಂಡು ಹೇಳಿದ್ದರು.
“ನಾನು ಗರ್ಭಾವಸ್ಥೆಯ ಈ ಹಂತವನ್ನು ಆನಂದಿಸುತ್ತಿದ್ದೇನೆ ಮತ್ತು ನಮ್ಮ ಮೊದಲ ಮಗುವನ್ನು ಸ್ವಾಗತಿಸುತ್ತಿದ್ದೇನೆ. ನಾನು ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಇದು ಸುಮಾರು 10-15 ವರ್ಷಗಳ ಕಾಲ ಸತತವಾಗಿ ಮುಂದುವರೆಯಿತು. ನನ್ನ ಗರ್ಭಾವಸ್ಥೆಯ ಪ್ರಯಾಣವು ಪ್ರಾರಂಭವಾದಾಗ, ನಾನು ಶೋಯೆಬ್ ಗೆ ಹೇಳಿದೆ. ನಾನು ಕೆಲಸ ಮಾಡಲು ಬಯಸುವುದಿಲ್ಲ ಮತ್ತು ನಟನೆಯನ್ನು ತ್ಯಜಿಸಲು ಬಯಸುತ್ತೇನೆ, ನಾನು ಗೃಹಿಣಿ ಮತ್ತು ತಾಯಿಯಾಗಿ ಜೀವನ ನಡೆಸಲು ಬಯಸುತ್ತೇನೆ ಎಂದು ವೆಬ್ ಸೈಟ್ ವೊಂದಕ್ಕೆ ಹೇಳಿದ್ದಾರೆ.