Advertisement

ಸಮಾಜ-ಭಕ್ತರ ದಾರಿ ತಪ್ಪಿಸ್ತಿದೆ ಕೆಎಲ್‌ಇ : ಶ್ರೀ 

01:15 PM Feb 12, 2021 | Team Udayavani |

ಹುಬ್ಬಳ್ಳಿ: ಸಂಕಷ್ಟದಲ್ಲಿರುವ ಮೂರುಸಾವಿರ ಮಠದ ಆಸ್ತಿ ದಾನ ಪಡೆದಿರುವ ಕೆಎಲ್‌ಇ ಸಂಸ್ಥೆಯವರು ಸಮಾಜ ಹಾಗೂ ಭಕ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಠದ ಆಸ್ತಿ ಪರಭಾರೆಗೆ ಯಾರ ಅನುಮತಿಯೂ ಬೇಕಿಲ್ಲ ಎಂಬ ಪ್ರಭಾಕರ ಕೋರೆ ಅವರ ಹೇಳಿಕೆ ಸರಿಯಲ್ಲ ಎಂದು ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಭಕ್ತರು ಸಮಾಜದ ಕಲ್ಯಾಣಕ್ಕೆ ಮಠಕ್ಕೆ ಆಸ್ತಿ ನೀಡಿರುತ್ತಾರೆ ವಿನಃ ಶ್ರೀಮಂತ ಸಂಸ್ಥೆಗಳಿಗೆ ದಾನ ಮಾಡಲು ಅಲ್ಲ. ಕೆಎಲ್‌ಇ ಸಂಸ್ಥೆಯ ಡಾ|ಪ್ರಭಾಕರ ಕೋರೆ, ಶಂಕರಣ್ಣ ಮುನವಳ್ಳಿ ಅವರ ಪ್ರತಿಯೊಂದು ಹೇಳಿಕೆಗೆ ಪ್ರತಿಯಾಗಿ ಸತ್ಯದ ದಾಖಲೆಗಳು ನನ್ನ ಬಳಿಯಿವೆ. ಕೆಎಲ್‌ಇ ಸಂಸ್ಥೆಯವರು ಮಠದ ಈ ಆಸ್ತಿ ಪಡೆಯಲು ಅಸುಂಡಿ ಕುಟುಂಬದವರಿಗೆ 14 ಎಕರೆ ಭೂಮಿ ಹಾಗೂ ಕೋಟ್ಯಂತರ ರೂ. ನೀಡಿರುವುದಾಗಿ ಒಪ್ಪಿದ್ದಾರೆ. ಹಾಗಾದರೆ ಕೋಟ್ಯಂತರ ರೂ. ಆಸ್ತಿ ದಾನ ಪಡೆದ ನಂತರ ಮಠಕ್ಕೆ ಏನಾದರೂ ನೀಡಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದರು.

ಹಿಂದೆ ರುದ್ರಮುನಿ ಶ್ರೀಗಳು ಮಠದ ಆಸ್ತಿ ಪರಭಾರೆಗೆ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು ಎನ್ನುವ ಕಾರಣಕ್ಕೆ ಮೂಜಗಂ ಅವರು ಐಕ್ಯರಾದಾಗ ಕೋರೆಯವರು ರುದ್ರಮುನಿ ಶ್ರೀಗಳನ್ನು ಕುತ್ತಿಗೆ ಹಿಡಿದು ಹೊರ ಹಾಕಿದ್ದರು. ಆದರೀಗ ರುದ್ರಮುನಿ ಸ್ವಾಮೀಜಿ ಪರಮಾಪ್ತರಾಗಿದ್ದಾರೆ. ಮಠದ ಆಸ್ತಿ ಉಳಿಸಲು ಮುಂದಾಗಿರುವುದಕ್ಕೆ ನಾನು ವಿರೋ ಧಿಯಾಗಿದ್ದೇನೆ. ಮಠ ಹಾಳು ಮಾಡುವ ಇಂತಹ ಕೂಟದಿಂದಲೇ ಪ್ರಸಿದ್ಧ ಮಠ ಇಂತಹ ಸ್ಥಿತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ :ಜೀವನದಲ್ಲಿ ವಿಶ್ವಾಸ ಕಳೆದುಕೊಂಡರೆ ಸಾಧನೆ ಅಸಾಧ್ಯ: ನಟ ಅಮೀರ್‌ಖಾನ್‌

ಚಿಕಿತ್ಸೆ ಕೊಡುತ್ತೇನೆ: ದಿಂಗಾಲೇಶ್ವರ ಶ್ರೀಗಳು ನೀಡುತ್ತಿರುವ ಮಾನಸಿಕ ಹಿಂಸೆಯಿಂದ ನಾನು  ಸಾಯಬಹುದೆಂದು ಕೆಎಲ್‌ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದ್ದಾರೆ. ಒಂದು ವೇಳೆ ಹಾಗೇನಾದರೂ ಅನಾರೋಗ್ಯ ಉಂಟಾದರೆ ನಮ್ಮ ಮಠದ ಖರ್ಚಿನಿಂದ ಚಿಕಿತ್ಸೆ ಕೊಡಿಸುತ್ತೇನೆ. ಪ್ರಭಾಕರ ಕೋರೆ ಅವರಿಗೆ ಸಮಾಜದ ಬಗ್ಗೆ ಕಾಳಜಿಯಿದ್ದರೆ ಕಾಲೇಜುವೊಂದಕ್ಕೆ ತಮ್ಮ ಹೆಸರು ನಾಮಕರಣ ಮಾಡದೆ ಸಂಸ್ಥೆ ಕಟ್ಟಿದ ಸಪ್ತಋಷಿಗಳ ಅಥವಾ ಜಗಜ್ಯೋತಿ ಬಸವಣ್ಣನವರ ಹೆಸರು ಇಲ್ಲವೇ ಮಹಾನ್‌ ವ್ಯಕ್ತಿಗಳ ಹೆಸರು ನಾಮಕರಣ ಮಾಡಬಹುದಿತ್ತು. ಇದನ್ನು ನೋಡಿದರೆ ಇವರ ಸಾಮಾಜಿಕ ಕಾಳಜಿ ಅರ್ಥವಾಗುತ್ತದೆ. ಮಠದ ಮೇಲಿನ ಮೋಹದಿಂದ ಹೋರಾಟಕ್ಕೆ ಮುಂದಾಗಿಲ್ಲ. ಉತ್ತರಾಧಿಕಾರಿ ಆಗಬೇಕೆಂದು ಒಪ್ಪಿದವರು ಕತೃ ಗದ್ದುಗೆಗೆ ಬಂದು ನಾವು ಒಪ್ಪಿಲ್ಲ ಎಂದು ಹೇಳಿದರೆ ಹಿಂದೆ ಸರಿಯುತ್ತೇನೆ ಎಂದರು. ನಿರಂಜನ ಹಿರೇಮಠ, ಭೀಮಣ್ಣ ಬಡಿಗೇರ, ಪ್ರಕಾಶ ಇನ್ನಿತರರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next