ಮುಂಬೈ: ಕಳೆದ ಐಪಿಎಲ್ ಸೀಸನ್ ಬಳಿಕ ನಿವೃತ್ತಿ ಘೋಷಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಇದೀಗ ಮತ್ತೆ ಪ್ಯಾಡ್ ತೊಡಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ದಕ್ಷಿಣ ಆಫ್ರಿಕಾ ಟಿ20 ಕೂಟದಲ್ಲಿ.
ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾದ ಟಿ20 ಲೀಗ್, ಎಸ್ ಎ20 ನಲ್ಲಿ (SA T20) ಭಾಗವಹಿಸುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇತ್ತೀಚೆಗಷ್ಟೇ ಎಲ್ಲಾ ರೀತಿಯ ಆಟದಿಂದ ನಿವೃತ್ತಿ ಹೊಂದಿದ್ದ ಕಾರ್ತಿಕ್, ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ಸೋದರ ಫ್ರಾಂಚೈಸಿಯಾದ ಪರ್ಲ್ ರಾಯಲ್ಸ್ (Paarl Royals) ಪರವಾಗಿ ಆಡಲಿದ್ದಾರೆ.
2024ರ ಐಪಿಎಲ್ ಸೀಸನ್ ಬಳಿಕ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ನೇಮಕವಾಗಿದ್ದಾರೆ. ಇದೀಗ ಅಚ್ಚರಿಯ ರೀತಿಯಲ್ಲಿ ದ.ಆಫ್ರಿಕಾದಲ್ಲಿ ಟಿ20 ಆಡಲು ಮುಂದಾಗಿದ್ದಾರೆ.
“ದಕ್ಷಿಣ ಆಫ್ರಿಕಾದಲ್ಲಿ ಆಡುವ ಮತ್ತು ಭೇಟಿ ನೀಡಿದ ಹಲವು ನೆನಪುಗಳನ್ನು ಹೊಂದಿದ್ದೇನೆ. ಈ ಅವಕಾಶ ಬಂದಾಗ, ಸ್ಪರ್ಧಾತ್ಮಕ ಕ್ರಿಕೆಟ್ ಗೆ ಹಿಂತಿರುಗುವುದು ಮತ್ತು ರಾಯಲ್ಸ್ ನೊಂದಿಗಿನ ಈ ಅದ್ಭುತ ಸ್ಪರ್ಧೆಯನ್ನು ಗೆಲ್ಲುವುದು ಎಷ್ಟು ವಿಶೇಷವಾಗಿದೆ ಎಂಬ ಕಾರಣದಿಂದ ನಾನು ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ” ಎಂದು ಕಾರ್ತಿಕ್ ಹೇಳಿದರು.
ವಿಶೇಷವೆಂದರೆ ಎಲ್ಲಾ 17 ಐಪಿಎಲ್ ಸೀಸನ್ ಗಳಲ್ಲಿ ಕಾರ್ತಿಕ್ ಆಡಿದ್ದರೂ ಒಂದು ಬಾರಿಯೂ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿಲ್ಲ.
ಪರ್ಲ್ ರಾಯಲ್ಸ್ ತಂಡವನ್ನು ಮಿಡಲ್ ಆರ್ಡರ್ ಬ್ಯಾಟರ್ ಡೇವಿಡ್ ಮಿಲ್ಲರ್ ಮುನ್ನಡೆಸುತ್ತಿದ್ದಾರೆ. 2024ರ ಸೀಸನ್ ನಲ್ಲಿ ಎಲಿಮಿನೇಟರ್ ತಲುಪಿತ್ತು. ಈ ಬಾರಿಯ ಸೀಸನ್ 2025ರ ಜನವರಿ 8ರಿಂದ ಫೆಬ್ರವರಿ 9ರವರೆಗೆ ನಡೆಯಲಿದೆ.