ದುಬೈ: 13ನೇ ಆವೃತ್ತಿಯ ಐಪಿಎಲ್ ಕೂಟದಲ್ಲಿ ಈಗಾಗಲೇ ಅರ್ಧದಷ್ಟು ಪಂದ್ಯಗಳು ಮುಗಿದಿದೆ. ಈ ಬಾರಿಯ ಕೂಟದಲ್ಲಿ ಪರಿಣಾಮಕಾರಿ ಆಟ ತೋರದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಮುಂದೆ ಕೆಕೆಆರ್ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸಲಿದ್ದಾರೆ.
“ದಿನೇಶ್ ಕಾರ್ತಿಕ್ ಅವರು ಕೆಕೆಆರ್ ಮ್ಯಾನೇಜ್ ಮೆಂಟದ ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಬ್ಯಾಟಿಂಗ್ ಬಗ್ಗೆ ಗಮನ ಹರಿಸುವ ಮತ್ತು ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಉದ್ದೇಶದಿಂದ, ನಾಯಕತ್ವವನ್ನು ಇಯಾನ್ ಮಾರ್ಗನ್ ಗೆ ಹಸ್ತಾಂತರಿಸಲು ಬಯಸಿದ್ದಾರೆ” ಎಂದು ಕೆಕೆಆರ್ ಹೇಳಿಕೆಯಲ್ಲಿ ತಿಳಿಸಿದೆ.
ದಿನೇಶ್ ಕಾರ್ತಿಕ್ ಅವರು ವೈಯಕ್ತಿಕ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವ ಎರಡರಲ್ಲೂ ವಿಫಲರಾಗುತ್ತಿದ್ದಾರೆ. ಇದುವರೆಗೆ ಏಳು ಪಂದ್ಯಗಳಲ್ಲಿ ಆಡಿರುವ ಅವರು ಗಳಿಸಿದ್ದು 108 ರನ್ ಮಾತ್ರ.
ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ಈ ಬಾರಿಯ ಕೂಟದಲ್ಲಿ ಏಳು ಪಂದ್ಯಗಳಲ್ಲಿ ನಾಲ್ಕನ್ನು ಜಯಿಸಿ ಮೂರು ಪಂದ್ಯದಲ್ಲಿ ಸೋಲನುಭವಿಸಿದೆ. ಈ ನಡುವೆ ದಿನೇಶ್ ನಾಯಕತ್ವದ ಬಗ್ಗೆ ಅಭಿಮಾನಿಗಳು ಅಸಮಾಧಾನವನ್ನು ಹೊರಹಾಕಿದ್ದರು.
ಇಂಗ್ಲೆಂಡ್ ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಅವರು ಕಾರ್ತಿಕ್ ಅಡಿಯಲ್ಲಿ ಆಡಬೇಕಾಗಿರುವುದು ದುರದೃಷ್ಟ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕೆಕೆಆರ್ ತಂಡ ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವಾಡಲಿದೆ.