ಕೊಲಂಬೊ: ರಾಜಪಕ್ಸೆ ಕುಟುಂಬದ ನಿಕಟವರ್ತಿ, ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನಾ ಅವರನ್ನು ಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಶ್ರೀಲಂಕಾದ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಮೇಶ್ ಕುಮಾರ್ ಗೆ ‘ಮಾಯಿಲ್ ಮರಾಠಿ’ ಎಂದು ನಿಂದಿಸಿದ ಸಚಿವ ಸುಧಾಕರ್
ರಾನಿಲ್ ಶ್ರೀಲಂಕಾದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಳಿಕ ಶುಕ್ರವಾರ (ಜುಲೈ 22) ಪ್ರಧಾನಿಯನ್ನು ಆಯ್ಕೆ ಮಾಡಿರುವುದಾಗಿ ವರದಿ ಹೇಳಿದೆ. ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ರಾನಿಲ್ ಅವರ ಮೊದಲ ನೇಮಕ ಇದಾಗಿದೆ ಎಂದು ವರದಿ ವಿವರಿಸಿದೆ.
ಶ್ರೀಲಂಕಾದ ಹಿರಿಯ ರಾಜಕಾರಣಿ ಗುಣವರ್ಧನಾ(73ವರ್ಷ) ಇದಕ್ಕೂ ಮೊದಲು ವಿದೇಶಾಂಗ ಸಚಿವರಾಗಿ ಹಾಗೂ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅಧ್ಯಕ್ಷ ಗೊಟಬಯ ರಾಜಪಕ್ಸ ಏಪ್ರಿಲ್ ನಲ್ಲಿ ದಿನೇಶ್ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಿದ್ದರು.
ರಾನಿಲ್ ವಿಕ್ರಮಸಿಂಘೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಆ ಸ್ಥಾನ ತೆರವಾಗಿತ್ತು. ಗೊಟಬಯ ರಾಜಪಕ್ಸ ದೇಶದಿಂದ ಪರಾರಿಯಾಗಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗುರುವಾರ ವಿಕ್ರಮಸಿಂಘೆ ಅವರು ಲಂಕಾದ 8ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ರಾನಿಲ್ ಸಹಪಾಠಿ ಗುಣವರ್ಧನಾ:
ಪ್ರಧಾನಿ ದಿನೇಶ್ ಗುಣವರ್ಧನಾ ಅವರು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಶಾಲಾದಿನಗಳ ಸಹಪಾಠಿಯಾಗಿದ್ದಾರೆ. ಇದೀಗ ದ್ವೀಪರಾಷ್ಟ್ರ ಲಂಕಾದ ಪ್ರಧಾನಿಯನ್ನಾಗಿ ರಾನಿಲ್ ನೇಮಕ ಮಾಡಿದ್ದಾರೆ.