ಪ್ರಿಯಾಂಕ ಉಪೇಂದ್ರ ಅಭಿನಯದ “ಪ್ರಿಯಾಂಕ’ ನಿರ್ದೇಶಿಸಿದ್ದ ದಿನೇಶ್ ಬಾಬು, ಆ ಬಳಿಕ ಏನು ಮಾಡುತ್ತಿದ್ದರು ಎಂಬುದಕ್ಕೆ ಉತ್ತರ ಇರಲಿಲ್ಲ. ಅವರು ಗ್ಯಾಪ್‌ನಲ್ಲೊಂದು ಸದ್ದಿಲ್ಲದೆಯೇ ಒಂದು ಚಿತ್ರ ಮಾಡಿ ಮುಗಿಸಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರು “ನನಗಿಷ್ಟ’. ಕಡಿಮೆ ದಿನಗಳಲ್ಲಿ ಸಿನಿಮಾ ಮಾಡಿ ಮುಗಿಸುವುದರಲ್ಲಿ ದಿನೇಶ್ ಬಾಬು ನಿಸ್ಸೀಮರು.
“ನನಗಿಷ್ಟ’ ಕೂಡ ಕೇವಲ 18 ದಿನಗಳಲ್ಲಿ ಚಿತ್ರೀಕರಣಗೊಂಡ ಚಿತ್ರ. ಇದೊಂದು ಪಕ್ಕಾ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರ. ಜೊತೆಗೊಂದು ಲವ್‌ಸ್ಟೋರಿಯೂ ಇದೆ. ಅಶ್ವಿನ್ ದೇವಾಂಗ್ ನಾಯಕರಾದರೆ, ರಚನಾ ಗೌಡ ನಾಯಕಿ. ದುರಾದೃಷ್ಟವೆಂದರೆ, ಚಿತ್ರೀಕರಣ ಮುಗಿಸಿ, ಸ್ವತಃ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದ ನಾಯಕಿ ರಚನಾ ಗೌಡ ಅವರು, ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಇನ್ನೇನು ,ಸಿನಿಮಾ ನೋಡಬೇಕು ಅಂತ ಆಸೆ ಇಟ್ಟುಕೊಂಡಿದ್ದ ರಚನಾ ಗೌಡ ಅವರನ್ನು ಕಳೆದುಕೊಂಡಿದ್ದು ಕೂಡ ಚಿತ್ರತಂಡಕ್ಕೆ ಬೇಸರ ತರಿಸಿದೆ. ರಾಧಾಕೃಷ್ಣ ಅವರು ಚಿತ್ರದ ನಿರ್ಮಾಪಕರು. ಈ ಹಿಂದೆ “ಮಿಸ್ಟರ್ ಗರಗಸ’, “ಗಣೇಶ’ ಚಿತ್ರ ಮಾಡಿದವರು. ಕಥೆ ಕೂಡ ಇವರದೇ. ವೈದ್ಯರಾಗಿರುವ ಯುವರಾಜ್ ರಚ್ಚಕೊಂಡ ಕೂಡ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಕಳೆದ ವರ್ಷ ತಯಾರಾಗಿದ್ದ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿದೆ.
ಸೆನ್ಸಾರ್ ಮಂಡಳಿ ಕೊಟ್ಟ ಪ್ರಮಾಣ ಪತ್ರಕ್ಕೆ ವಿರೋಧ ವ್ಯಕ್ತಪಡಿಸಿದ ಚಿತ್ರತಂಡ, ಪರಿಷ್ಕರಣಾ ಸಮಿತಿಗೆ ಹೋಗಿದೆ. ಅಲ್ಲೂ ಕೂಡ ಚಿತ್ರಕ್ಕೆ “ಎ’ ಪ್ರಮಾಣ ಪತ್ರವೇ ಸಿಕ್ಕಿದೆ. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ. ಆದರೂ, ಚಿತ್ರಕ್ಕೆ ‘ಎ’ಪ್ರಮಾಣ ಪತ್ರ ಕೊಡಲಾಗಿದೆ. ಹಾಗಾಗಿ ಚಿತ್ರ ಬಿಡುಗಡೆ ತಡವಾಗಿದೆ. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗ ನೋಡಿದರೆ, ಯುಎಫ್ಓ, ಕ್ಯೂಬ್ ಸಮಸ್ಯೆ ತಲೆದೋರಿದೆ.
ಸಮಸ್ಯೆ ಬಗೆಹರಿಯುತ್ತಿದ್ದಂತೆಯೇ ಚಿತ್ರ ಬಿಡುಗಡೆಯಾಗಲಿದೆ ಎಂಬುದು ನಿರ್ಮಾಪಕರ ಮಾತು. ಚಿತ್ರದಲ್ಲಿ ರಾಜೇಶ್ ನಟರಂಗ, ಕರಿಸುಬ್ಬು ಇತರರು ನಟಿಸಿದ್ದಾರೆ. ಚಿತ್ರಕ್ಕೆ ಗಾಯಕಿ ನಂದಿತಾ ಸಂಗೀತ ನೀಡಿರುವುದು ವಿಶೇಷ. ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿದ್ದಾರೆ ಅವರು. ಚಿತ್ರದ ಒಂದು ಹಾಡಿಗೆ ಹಂಸಲೇಖ ಅವರು ಗೀತೆ ರಚಿಸಿದ್ದಾರೆ.