ಸದ್ಯ ಕನ್ನಡ ಚಿತ್ರರಂಗದ ನಟಿಮಣಿಯರು ತೆಲುಗು, ತಮಿಳು ಸೇರಿದಂತೆ ಇತರೆ ಚಿತ್ರರಂಗದಲ್ಲಿ, ಒಂದರ ಮೇಲೊಂದು ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡಕ್ಕೆ ತೆಲುಗಿನ ಬೆಡಗಿಯೊಬ್ಬರು ಎಂಟ್ರಿಕೊಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಟನಾ ಕ್ಷೇತ್ರ ಪ್ರವೇಶ ಮಾಡಿದ ತೆಲುಗು ಪಿಲ್ಲಾ ಡಿಂಪಲ್ ಹಯಾತಿ. ಕನ್ನಡದ “ದಿಲ್‌ಮಾರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ನಾಯಕ ನಟಿಯರು ಒಂದು ಚಿತ್ರರಂಗದಿಂದ ಮತ್ತೂಂದು ಚಿತ್ರರಂಗಕ್ಕೆ ಹೋಗುವುದು ಸಾಮಾನ್ಯ. ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಬೇರೆ ಭಾಷೆಯಿಂದ ವಲಸೆ ಬಂದ ಚೆಲುವೆಯರ ಸಂಖ್ಯೆ ಕೊಂಚ ಅಧಿಕವಾಗೇ ಇದೆ. ಇದೀಗ ಅದೇ ಸಾಲಿಗೆ ತೆಲುಗಿನ ಬೆಡಗಿ ಡಿಂಪಲ್ ಹಯಾತಿ ಕೂಡಾ ಒಬ್ಬರಾಗಿದ್ದಾರೆ.
ಡಿಂಪಲ್ ಹಯಾತಿ ಈ ಹೆಸರು ಕೇಳಿದಾಕ್ಷಣ ನೆನಪಾಗೊದೇ ಗಲ್ಫ್ ಚಿತ್ರ. ತನ್ನ 19ನೇ ವಯಸ್ಸಿಗೆ ಬಣ್ಣ ಹಚ್ಚುವ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಈ ಚೆಲುವೆ, ಇಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಮಿಂಚುತ್ತಿದ್ದಾರೆ. 2017 ರಲ್ಲಿ ಗಲ್ಫ್ ಚಿತ್ರದ ಮೂಲಕ ತನ್ನ ಸಿನಿ ಜರ್ನಿ ಆರಂಭಿಸಿದ ಈಕೆ, ಪ್ರಭುದೇವಾ, ತಮನ್ನಾ, ವರುಣ ತೇಜ್, ರವಿತೇಜಾರಂತಹ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತೆಲುಗು ಸೇರಿದಂತೆ, ತಮಿಳು ಹಾಗೂ ಹಿಂದಿ ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಧನುಷ್, ಅಕ್ಷಯ್ ಕುಮಾರ್ ನಟನೆಯ “ಅತರಂಗಿರೇ’ ಚಿತ್ರದ ಮೂಲಕ ಹಿಂದಿ ಚಿತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಡಿಂಪಲ್ ಹಯಾತಿ ತಮ್ಮ ನಟನೆಯಿಂದಲೇ ತೆಲುಗು ಸೇರಿದಂತೆ, ತಮಿಳು, ಹಿಂದಿ ಚಿತ್ರಗಳಲ್ಲಿ ಅವಕಾಶ ಪಡೆದಿದ್ದಾರೆ. ಅಲ್ಲದೇ ದಕ್ಷಿಣ ಭಾರತದ ಸ್ಟಾರ್ ನಟ-ನಟಿಯರ ಜೊತೆ ತೆರೆ ಹಂಚಿಕೊಂಡಿ ದ್ದಾರೆ. ಆದರೆ ಕೇವಲ ನಟನೆಯೊಂದೆ ಅಲ್ಲ ಡಾನ್ಸ್‌ಗೂ ಸೈ ಎಂಬುದನ್ನು ಸಹ ಸಾಬೀತು ಮಾಡಿದ್ದಾರೆ. ಅಭಿನಯಿಸಿದ ಚಿತ್ರಗಳಲ್ಲಿ ನಾಯಕರಿಗೆ ಸರಿ ಸಮಾನವಾಗಿ ಸ್ಟೆಪ್ ಹಾಕಿರುವ ಡಿಂಪಲ್ ಹಯಾತಿ, ತೆಲುಗಿನ “ಗಡ್ಡಲಾಕೊಂಡಾ ಗಣೇಶ’ ಚಿತ್ರದಲ್ಲಿ ಸಖತ್ ಹಾಟ್ ಆಗಿ ಸೊಂಟ ಬಳುಕಿಸುವ ಮೂಲಕ ಸ್ಪೆಷಲ್ ಸಾಂಗ್ ಗೂ ಹೆಜ್ಜೆ ಹಾಕಿದ್ದಾರೆ.
ನಟನೆ, ಡಾನ್ಸ್ ಎರಡಕ್ಕೂ ಜೈ ಅನ್ನುವ ತೆಲಗು ಪಿಲ್ಲಾ , ತೆಲುಗು ಚಿತ್ರರಂಗದಿಂದ ಕನ್ನಡದತ್ತ ಹೊರಳಿದ್ದಾರೆ. ಡಿಂಪಲ್ ಕನ್ನಡದ “ದಿಲ್ ಮಾರ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಂಡುತ್ತಿದ್ದಾರೆ. ಸದ್ಯ ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಯ ಹೊಸ್ತಿಲಿನಲ್ಲಿದೆ ದಿಲ್ ಮಾರ್ ಚಿತ್ರ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ದಿಲ್ ಮಾರ್ ಒಂದು ಕೋಲ್ಡ್ ಹಾರ್ಟೆಡ್ ಲವ ಸ್ಟೋರಿಯಂಬಂತೆ ಬಿಂಬಿತವಾಗಿದೆ.
ಇನ್ನು ಚಿತ್ರದಲ್ಲಿ ಡಿಂಪಲ್ ಹಯಾತಿಗೆ ಒಂದೊಳ್ಳೆ ಪಾತ್ರ ಇದೆ ಎನ್ನಲಾಗಿದೆ. ಹಾಗಾದ್ರೆ ಬ್ಯೂಟಿ ಕ್ವೀನ್ ಡಿಂಪಲ್ ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲ್ಲಿದ್ದಾರೆ ಅನ್ನುದರ ಬಗ್ಗೆ ಸಾಕಷ್ಟು ಕುತೂಹಲ ಅವರ ಅಭಿಮಾನಿಗಳಿಗಿದೆ.