ಮ್ಯಾಂಚೆಸ್ಟರ್: ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್(Diljit Dosanjh) ಅವರು ತಮ್ಮ ಮ್ಯಾಂಚೆಸ್ಟರ್ ಸಂಗೀತ ಕಚೇರಿಯಲ್ಲಿ ಪಾಕಿಸ್ಥಾನಿ(Pakistan) ಅಭಿಮಾನಿಯೊಬ್ಬರಿಗೆ ಶೂಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದರು.
40 ರ ಹರೆಯದ ಗಾಯಕ ಸಹಸ್ರ ಅಭಿಮಾನಿಗಳ ಸಮ್ಮುಖದಲ್ಲಿ ವೇದಿಕೆಯಲ್ಲಿ ತನ್ನ ಶೂಗಳನ್ನು ಇರಿಸಿದ್ದ ಬಾಕ್ಸ್ ಗಿಫ್ಟ್ ಆಗಿ ನೀಡಿದ್ದು ಮಾತ್ರವಲ್ಲದೆ, ಪಾಕಿಸ್ಥಾನ ಮೂಲದವರು ಎಂದು ತಿಳಿದ ನಂತರ, ”ಎರಡು ದೇಶಗಳ ನಡುವಿನ ಗಡಿಗಳನ್ನು ರಾಜಕಾರಣಿಗಳು ನಿರ್ಮಿಸಿದ್ದಾರೆ” ಎಂದರು.
“ಅ ಭಾರತವಾಗಲಿ ಅಥವಾ ಪಾಕಿಸ್ಥಾನವಾಗಲಿ, ಅದು ನನಗೆ ಒಂದೇ. ಪ್ರತಿಯೊಬ್ಬ ಪಂಜಾಬಿಯ ಹೃದಯದಲ್ಲಿ ಎಲ್ಲರಿಗೂ ಅಪಾರವಾದ ಪ್ರೀತಿ ಇರುತ್ತದೆ. ಈ ಗಡಿಗಳನ್ನು ರಾಜಕಾರಣಿಗಳು ನಿರ್ಮಾಣ ಮಾಡುತ್ತಾರೆ, ಆದರೆ ಪಂಜಾಬಿ ತಿಳಿದಿರುವ ಜನರು, ಇಲ್ಲಿಂದಾಗಲಿ ಅಥವಾ ಅಲ್ಲಿಂದಲೇ ಆಗಲಿ ನಾವೆಲ್ಲರೂ ಒಂದೇ. ನನ್ನ ದೇಶ ಭಾರತದಿಂದ ಬಂದವರು ಮತ್ತು ಪಾಕಿಸ್ಥಾನದಿಂದ ಬಂದವರೆಲ್ಲರನ್ನು ಸ್ವಾಗತಿಸುತ್ತೇನೆ. ಧನ್ಯವಾದಗಳು ಮೇಡಂ,” ಎಂದು ದೋಸಾಂಜ್ ಹೇಳಿದ್ದಾರೆ.
ಸದ್ಯ ವಿದೇಶ ಪ್ರವಾಸದಲ್ಲಿರುವ ಗಾಯಕ, ಮುಂದಿನ ತಿಂಗಳು ‘ದಿಲ್-ಲುಮಿನಾಟಿ’ ಪ್ರವಾಸದ ಭಾಗವಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ತಿಂಗಳ ಕಾಲ ದೇಶದ ವಿವಿಧ ನಗರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಮೊದಲ ಪ್ರದರ್ಶನ ಅಕ್ಟೋಬರ್ 26 ರಂದು ದೆಹಲಿಯಲ್ಲಿ ನಡೆಯಲಿದೆ.